ವರನಟ ಡಾ. ರಾಜಕುಮಾರ್ ಹಾಗೂ ಬಿ. ಸರೋಜಾದೇವಿ ಮುಖ್ಯಭೂಮಿಕೆಯಲ್ಲಿ ಅಭಿನಯಸಿದ್ದ “ಭಾಗ್ಯವಂತರು’ ಕನ್ನಡ ಚಿತ್ರರಂಗದ ಸೂಪರ್ ಹಿಟ್ ಸಿನಿಮಾಗಳಲ್ಲೊಂದು. ಹಿರಿಯ ನಟ ಕಂ ನಿರ್ಮಾಪಕ ದ್ವಾರಕೀಶ್ ನಿರ್ಮಾಣ ಮಾಡಿದ್ದ ಈ ಚಿತ್ರಕ್ಕೆ ಹಿರಿಯ ನಿರ್ದೇಶಕ ಭಾರ್ಗವ ನಿರ್ದೇಶನ ಮಾಡಿದ್ದರು. 1977 ಮಾರ್ಚ್ 16 ರಂದು ಬಿಡುಗಡೆಯಾಗಿದ್ದ “ಭಾಗ್ಯವಂತರು’ ಆಗಿನ ಕಾಲಕ್ಕೆ ಫ್ಯಾಮಿಲಿ ಆಡಿಯನ್ಸ್ ಮನ ಗೆಲ್ಲುವುದರ ಜೊತೆಗೆ ಗಲ್ಲಾಪೆಟ್ಟಿಗೆಯಲ್ಲೂ ದಾಖಲೆ ಬರೆದಿತ್ತು.
ಕನ್ನಡ ಚಿತ್ರರಂಗದ ಎವರ್‌ಗ್ರೀನ್ ಸಿನಿಮಾಗಳ ಸಾಲಿನಲ್ಲಿ ನಿಲ್ಲುವಂತಹ “ಭಾಗ್ಯವಂತರು’ ಸಿನಿಮಾ ಈಗ ಮತ್ತೆ ಹೊಸ ತಂತ್ರಜ್ಞಾನದೊಂದಿಗೆ ಮರು ಬಿಡುಗಡೆಯಾಗುತ್ತಿದೆ. ಹೌದು, “ಭಾಗ್ಯವಂತರು’ ಚಿತ್ರ 7.1 ಡಿಜಿಟಲ್ ಸೌಂಡ್, ಕಲರಿಂಗ್, ಡಿಟಿಎಸ್ ಮುಂತಾದ ಆಧುನಿಕ ತಂತ್ರಜ್ಞಾನದೊಂದಿಗೆ ಹೊಸರೂಪದಲ್ಲಿ ಸಿದ್ಧವಾಗಿದ್ದು, ಇದೇ ಜುಲೈ 8ರಂದು ಹೊಸ ರೂಪದಲ್ಲಿ “ಭಾಗ್ಯವಂತರು’ ಚಿತ್ರ ಬಿಡುಗಡೆಯಾಗುತ್ತಿದೆ.
ಈ ಹಿಂದೆ ಡಾ. ರಾಜಕುಮಾರ್ ಅಭಿನಯದ “ಆಪರೇಷನ್ ಡೈಮೆಂಡ್ ರಾಕೇಟ್’, “ನಾನೊಬ್ಬ ಕಳ್ಳ’, “ದಾರಿ ತಪ್ಪಿದ ಮಗ’ ಹೀಗೆ ಹಲವು ಚಿತ್ರಗಳನ್ನು ಹೊಸ ತಂತ್ರಜ್ಞಾನದೊಂದಿಗೆ ಬಿಡುಗಡೆ ಮಾಡಿ ಯಶಸ್ವಿಯಾಗಿದ್ದ, ಡಾ. ರಾಜಕುಮಾರ್ ಅವರ ಅಪ್ಪಟ ಅಭಿಮಾನಿಯಾಗಿರುವ ಮುನಿರಾಜು ಎಂ, “ಭಾಗ್ಯವಂತರು’ ಚಿತ್ರವನ್ನು ಹೊಸತಂತ್ರಜ್ಞಾನದಲ್ಲಿ ಮರು ಬಿಡುಗಡೆ ಮಾಡುತ್ತಿದ್ದಾರೆ.
ಇದನ್ನೂ ಓದಿ:ಕೈ ತುಂಬಾ ಸಿನಿಮಾ, ಸಖತ್ ಪಾತ್ರ; ಬಿಝಿಯಾದ್ರು ‘ಹೆಂಗೆ ನಾವೂ’ ರಚನಾ
ಅಂದಹಾಗೆ, ಸುಮಾರು 45 ವರ್ಷಗಳ ಬಳಿಕ ಹೊಸತಂತ್ರಜ್ಞಾನದಲ್ಲಿ ಮತ್ತೆ ಬಿಡುಗಡೆಯಾಗುತ್ತಿರುವ “ಭಾಗ್ಯವಂತರು’ ರಾಜ್ಯಾದ್ಯಂತ ಸುಮಾರು 50ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ.