ಬೆಂಗಳೂರು: ಸ್ಫೋಟಕ ಬ್ಯಾಟ್ಸಮನ್ ಎ.ಬಿ.ಡಿ ವಿಲಿಯರ್ಸ್ ಕ್ರಿಕೆಟ್ ಪ್ರೇಮಿಗಳ ಪಾಲಿಗೆ ನೆಚ್ಚಿನ ಆಟಗಾರ. ಅದರಲ್ಲೂ ಆರ್ ಸಿಬಿ ಅಭಿಮಾನಿಗಳಿಗೆ ಅಪತ್ಬಾಂಧವ.
ಎಬಿಡಿ ಬ್ಯಾಟ್ ಹಿಡಿದು ಮೈದಾನಕ್ಕೆ ಇಳಿದರೆಂದರೆ ಅವರ ಮೇಲೆ ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿರುತ್ತಾರೆ ಅಭಿಮಾನಿಗಳು. ಎಬಿಡಿ ಕೂಡ ಅಷ್ಟೇ, ಅಭಿಮಾನಿಗಳಿಗೆ ಎಂದೂ ನಿರಾಸೆ ಮೂಡಿಸುವುದಿಲ್ಲ. ಐಪಿಎಲ್ ಟೋರ್ನಿಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡುತ್ತಿರುವ ಎಬಿಡಿ, ಸಾಕಷ್ಟು ಬಾರಿ ಸಂಕಷ್ಟದ ಕಾಲದಲ್ಲಿದ್ದ ತಂಡವನ್ನು ಗೆಲುವಿನ ದಡಕ್ಕೆ ಸೇರಿಸಿದ್ದುಂಟು. ಎದುರಾಳಿ ಬಾಲರ್ ಗಳನ್ನು ಬೆಂಡೆತ್ತಿ ಸಿಕ್ಸ್, ಫೋರ್ ಗಳ ಸುರಿಮಳೆ ಸುರಿಸುವ ಈ ಅದ್ಭುತ ಆಟಗಾರನನ್ನು ಇದೀಗ ಕನ್ನಡದ ಚಿತ್ರರಂಗದ ದಂತಕತೆ ಡಾ. ರಾಜಕುಮಾರ್ ಅವರಿಗೆ ಹೋಲಿಸಲಾಗಿದೆ.
ವರನಟ ಡಾ.ರಾಜಕುಮಾರ್ ಅವರು ಕಲಾರಸಿಕರ ಆರಾಧ್ಯದೈವ್ ಎಂದು ಕರೆಯಿಸಿಕೊಂಡರೆ,ಎಬಿಡಿ ವಿಲಿಯರ್ಸ್ ಆರ್.ಸಿ.ಬಿ ಅಭಿಮಾನಿಗಳಿಗೆ ಮನೆದೇವ್ರು ಎನ್ನುವ ಹೆಮ್ಮೆಯ ನುಡಿಗಳು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಹರಿದಾಡುತ್ತಿದೆ. ಸ್ಟಾರ್ ಸ್ಫೋರ್ಟ್ಸ್ ಕನ್ನಡ ಟ್ವಿಟರ್, ಕಸ್ತೂರಿ ನಿವಾಸ ಸಿನಿಮಾದಲ್ಲಿನ ರಾಜಕುಮಾರ್ ಅವರ ಲುಕ್ ನಂತೆಯೆ ಎಬಿಡಿಯವರ ಫೋಟೊವೊಂದನ್ನು ಹಂಚಿಕೊಂಡಿದೆ. ಹಾಗೂ ‘ಇದು ಕಸ್ತೂರಿ ನಿವಾಸದ ಕೈ, ಸ್ಟೇಡಿಯಂನಲ್ಲಿ ರನ್ ಸಿಡಿಸುತ್ತೇ ಹೊರತು ಎಂದಿಗೂ ನಿರಾಸೆ ಮಾಡೋದಿಲ್ಲ’ ಎಂದು ಬರೆದುಕೊಂಡಿದೆ.
Related Articles
ಇನ್ನು ಭಾನುವಾರ ಕೆಕೆಆರ್ ವಿರುದ್ಧ ನಡೆದ ಪಂದ್ಯದಲ್ಲಿ ಭರ್ಜರಿಯಾಗಿ ಆಟವಾಡಿರುವ ಎಬಿಡಿ ವಿಲಿಯರ್ಸ್ ಅವರಿಗೆ ಎಲ್ಲೆಡೆಯಿಂದ ಮೆಚ್ಚುಗೆಯ, ಅಭಿನಂದನೆಗಳ ಮಹಾಪೂರ ಹರಿದು ಬರುತ್ತಿದೆ.