Advertisement

Sandalwood: ಭ್ರಮೆ ಬಿಟ್ಟು ಬದುಕಿದರು.. ಮತ್ತೆ ಮತ್ತೆ ನೆನಪಾಗುತ್ತಿದ್ದಾರೆ ಡಾ.ರಾಜ್‌

12:19 PM Jun 14, 2024 | Team Udayavani |

ಡಾ.ರಾಜ್‌ಕುಮಾರ್‌ ಮತ್ತೆ ಮತ್ತೆ ನೆನಪಾಗುತ್ತಿದ್ದಾರೆ. ಅದರಲ್ಲೂ ಇತ್ತೀಚೆಗೆ ಕನ್ನಡ ಚಿತ್ರರಂಗದಲ್ಲಿ ನಡೆಯುತ್ತಿರುವ ಘಟನೆಗಳನ್ನು ನೋಡುವಾಗಲಂತೂ ರಾಜ್‌ಕುಮಾರ್‌ ಸ್ವಲ್ಪ ಹೆಚ್ಚೇ ನೆನಾಪಗುತ್ತಾರೆ… ಡಾ.ರಾಜ್‌ ಇವತ್ತಿಗೂ, ಕಾಲ ಕಾಲಕ್ಕೂ ಪ್ರಸ್ತುತವಾಗುತ್ತಾರೆಂದರೆ ಅವರ ಗುಣದಿಂದ. ನಟ,ನಟಿಯರ ವೈಯಕ್ತಿಕ ಬದುಕಿರಬಹುದು, ಚಿತ್ರರಂಗದ ಅಸಡ್ಡೆ ಧೋರಣೆ ಇರಬಹುದು, ಎರಡು ವರ್ಷಕ್ಕೊಂದು ಸಿನಿಮಾ ಮಾಡುವ ಸ್ಟಾರ್‌ ನಟರ ಮನಸ್ಥಿತಿ ಇರಬಹುದು, ಅಭಿಮಾನಿಗಳನ್ನು ನಡೆಸಿಕೊಳ್ಳುವ ಕೆಲವು ಸ್ಟಾರ್‌ ನಟರ ವರ್ತನೆಗಳಿರಬಹುದು, ನಿರ್ಮಾಪಕರನ್ನು ಗೋಳಾಡಿಸುವ, ತುತ್ಛವಾಗಿ ಕಾಣುವ ರೀತಿ ಇರಬಹುದು… ಇವೆಲ್ಲವುಗಳನ್ನು ನೋಡುವಾಗ ರಾಜ್‌ಕುಮಾರ್‌ ಮತ್ತೆ ಮತ್ತೆ ನೆನಪಾಗುತ್ತಾರೆ. ಅವರ ಗುಣ ನಡತೆ, ಸಂಸ್ಕಾರ, ಅವರು ಕೊನೇವರೆಗೂ ನಡೆದುಕೊಂಡ ರೀತಿ, ಅಭಿಮಾನಿಗಳನ್ನು “ದೇವರು’ ಎಂದು ಅದರಂತೆಯೇ ಅವರನ್ನು ಗೌರವಿಸಿದ ರೀತಿಯಿಂದಾಗಿಯೇ ಮತ್ತೆ ಡಾ.ರಾಜ್‌ ನೆನಪಾಗುತ್ತಾರೆ.

Advertisement

ಅಣ್ಣಾವ್ರು ಸ್ಟಾರ್‌ ಆಗಿದ್ದರೂ ಆಳಾಗಬಲ್ಲವನೇ ಅರಸಾಗುವ ಎಂಬುದು ಅವರಿಗೆ ಚೆನ್ನಾಗಿ ಗೊತ್ತಿತ್ತು. ಈ ಕಾಲದ ಸಂಪರ್ಕಸಾಧನಗಳು ಯಾವುವೂ ಇಲ್ಲದ ಕಾಲದಲ್ಲಿ ಅವರು ನಾಡಿನಾದ್ಯಂತ ಜನಪ್ರಿಯರಾಗಿದ್ದರು. ಇವತ್ತು ಟೀವಿ, ಇಂಟರ್‌ನೆಟ್ಟು, ಸೋಶಿಯಲ್‌ ಮೀಡಿಯಾ, ಅಸಂಖ್ಯಾತ ಪತ್ರಿಕೆಗಳು, ಆಧುನಿಕ ಸಂವಹನ ಮಾಧ್ಯಮಗಳಿದ್ದರೂ, ಒಬ್ಬ ನಟನ ಫೋಟೋವನ್ನು ಮುಂದೆ ಹಿಡಿದು ಯಾರಿದು ಹೇಳಿ ಎಂದರೆ ನೂರಕ್ಕೆ ಎಪ್ಪತ್ತು ಮಂದಿ ಅಡ್ಡಡ್ಡ ತಲೆಯಾಡಿಸು ತ್ತಾರೆ. ಅದರ ಅರ್ಥ ಇಷ್ಟೇ. ಒಬ್ಬ ನಟ ಎಲ್ಲರಿಗೂ ಹತ್ತಿರವಾಗುವುದು ಸ್ಟಾರ್‌ಗಿರಿಯಿಂದಲೋ ಪ್ರಚಾರದಿಂದಲೋ ಅಲ್ಲ. ಅಣ್ಣಾವ್ರಿಗೆ ಇದ್ದ ಜನಪ್ರೀತಿ ಮತ್ತು ಸಜ್ಜನಿಕೆಯಿಂದ. ನಾಡಿನ ಕುರಿತು ಅವರಿಗಿದ್ದ ಖಚಿತ ಅಭಿಪ್ರಾಯಗಳಿಂದ. ಎಲ್ಲರ ಮೇಲೂ ಅವರಿಗಿದ್ದ ಅಕ್ಕರೆಯಿಂದ. ಆದರೆ, ಇವತ್ತು ಆ ಸ್ಥಿತಿಯನ್ನು ನಾವು ಕಾಣುವುದು ಕಷ್ಟವಾಗಿದೆ. ನಾಡಿನ ಸಮಸ್ಯೆ ಬಂದಾಗ, ಚಿತ್ರರಂಗಕ್ಕೆ ಸಂಕಷ್ಟ ತಲೆದೋರಿದಾಗಲೂ ಇವತ್ತು ಸ್ಟಾರ್‌ಗಳು ಮುಂದೆ ಬಂದು ಧ್ವನಿ ಎತ್ತುವುದಿಲ್ಲ. ಅದಕ್ಕೂ ನನಗೂ ಸಂಬಂಧ ಇಲ್ಲ ಎಂಬಂತೆ ಇದ್ದು ಬಿಡುವ ಮನಸ್ಥಿತಿ ಯನ್ನು ನೋಡಿದಾಗ ಮತ್ತೆ ಡಾ.ರಾಜ್‌ ನೆನಪಾಗುತ್ತಾರೆ.

ಸಾದಾಸೀದಾ ವ್ಯಕ್ತಿತ್ವ

ಇವತ್ತು ಒಂದು ಸಿನಿಮಾ ಸಾಧಾರಾಣ ಯಶಸ್ಸು ಕಂಡರೆ ಆ ನಟನನ್ನು ಮಾತನಾಡಿಸುವುದು ಕಷ್ಟ. ನೋಡ ನೋಡುತ್ತಲೇ ಆತನ ಸುತ್ತ ಒಂದು ಪಟಾಲಂ ಸೇರಿಕೊಳ್ಳುತ್ತದೆ. ಮನೆಯಂಗಳ ಇಳಿಯಬೇಕಾದರೆ ನಾಲ್ಕೈದು ಬೌನ್ಸರ್‌ಗಳು ಬೇಕೇ ಬೇಕು ಎಂಬ ಮನಸ್ಥಿತಿಗೆ ಬಂದು ಬಿಡುತ್ತಾನೆ. ಆದರೆ, ಅಣ್ಣಾವ್ರ ಇದ್ಯಾವುದೂ ಇಲ್ಲದೇ ಲಕ್ಷಾಂತರ ಅಭಿಮಾನಿಗಳ ಮಧ್ಯೆ ಓಡಾಡಿಯೂ ಸಾದಾಸೀದವಾಗಿ ಬದುಕಿದವರು. ಪ್ರೀತಿಯ ಆಟೋಗ್ರಾಫ್, ಒಂದು ಆಲಿಂಗನ ನೀಡಿ ಅಭಿಮಾನಿ ದೇವರುಗಳ ಹೃದಯದಲ್ಲಿ ಚಿರಸ್ಥಾಯಿಯಾದವರು. ಆದರೆ, ಇವತ್ತು ಅನೇಕ ಸ್ಟಾರ್‌ ನಟರ ಬೌನ್ಸರ್‌ಗಳು ನಟನನ್ನು ನೋಡಲು ಬರುÊ ಅಭಿಮಾನಿಗಳನ್ನು ರೌದ್ರವತಾರದಲ್ಲಿ ತಳ್ಳುವ ಪರಿ ನೋಡಿದಾಗ ಮತ್ತು ಅದನ್ನು ನೋಡಿಯೂ ಸುಮ್ಮನಿರುವ ಕೆಲವು ಸ್ಟಾರ್‌ ನಟರನ್ನು ನೋಡಿದಾಗ ಮತ್ತೆ ಡಾ.ರಾಜ್‌ ನೆನಪಾಗುತ್ತಾರೆ.

ಅನ್ನದಾತರೆಂದರೆ ಗೌರವ

Advertisement

ನಿರ್ಮಾಪಕರನ್ನು ಅನ್ನದಾತ ಎಂದು ಗೌರವಿಸುತ್ತಿದ್ದ ನಟ ಡಾ.ರಾಜ್‌ಕುಮಾರ್‌. ಒಮ್ಮೆ ತನಗೆ ಕಥೆ ಇಷ್ಟವಾದರೆ ಯಾವುದೇ ಹಮ್ಮುಬಿಮ್ಮು ಇಲ್ಲದೇ ಸಿನಿಮಾವನ್ನು ಮುಗಿಸಿ, ನಿರ್ಮಾಪಕನ ಮೊಗದಲ್ಲಿ ನಗುಮೂಡಿಸುತ್ತಿದ್ದವರು ರಾಜ್‌. ಆದರೆ, ಈಗ ಕೆಲವು ಸ್ಟಾರ್‌ ನಟರು ನಿರ್ಮಾಪಕರನ್ನು ಮಾತನಾಡಿಸುವ, ಅವರ ಬಗ್ಗೆ ಬಳಸುವ ಪದ, ವರ್ಷಾನುಗಟ್ಟಲೇ ಕಾಯಿಸಿ, ಹಣ-ಸಮಯ ವ್ಯರ್ಥ ಮಾಡಿ ಕೊನೆಗೆ “ವಿವಾದ’ಕ್ಕೆ ದೂಡುವ ರೀತಿಯನ್ನು ನೋಡಿದಾಗ ಮತ್ತೆ ಡಾ.ರಾಜ್‌ ನೆನಪಾಗುತ್ತಾರೆ.

ಭ್ರಮೆಯಲ್ಲಿ ಬದುಕಿದವರಲ್ಲ

ಅಣ್ಣಾವ್ರ ಬದುಕಿದ ರೀತಿ ಇವತ್ತಿಗೂ ಮಾದರಿ. ಅವರಿಗಿದ್ದ ಅಭಿಮಾನಿ ಬಳಗ, ಅವರ ಮೇಲಿಟ್ಟ ಪ್ರೀತಿ, ಅವರು ಕಂಡ ಯಶಸ್ಸು, ಅವರು ಮಾಡಿದ ದಾಖಲೆ.. ಒಂದಾ, ಎರಡಾ… ಆದರೆ, ಅಣ್ಣಾವ್ರು ಮಾತ್ರ ಅವ್ಯಾವುದನ್ನು ತಲೆಗೆ ಏರಿಸಿಕೊಳ್ಳಲೇ ಇಲ್ಲ. ಅದೇ ಕಾರಣದಿಂದ ಅವರ ಮನಸ್ಸು ತುಂಬಾ ಸ್ವತ್ಛ, ನಿರುಮ್ಮಳವಾಗಿಯೇ ಇತ್ತು. ಇವತ್ತು ತಾನು ಏನಿದ್ದೇನೋ ಅವೆಲ್ಲದಕ್ಕೆ ಕಾರಣ ಅಭಿಮಾನಿ ದೇವರುಗಳು ಎಂದೇ ನಂಬಿದ್ದವರು ರಾಜ್‌. ಆದರೆ, ಈಗ ಹೊಸದಾಗಿ ಬಂದು ಗೆಲುವು ಕಂಡು ಕೂಡಲೇ ಸ್ಟಾರ್‌ಪಟ್ಟ ಪಡೆದ ಕೆಲವು ನಟರ ವರ್ತನೆ ನೋಡಿದಾಗ ಮತ್ತೆ ಡಾ.ರಾಜ್‌ ನೆನಪಾಗುತ್ತಾರೆ.

ಸ್ಟಾರ್‌ ನಟರಿಗೆ, ಅಭಿಮಾನಿಗಳಿಗೆ ಇದೊಂದು ಪಾಠ

ಸದ್ಯ ನಟ ದರ್ಶನ್‌ ಅವರ ಘಟನೆ ಸ್ಟಾರ್‌ ನಟರಿಗೆ ಹಾಗೂ ಅವರ ಅಭಿಮಾನಿಗಳಿಗೆ ಒಂದು ಒಳ್ಳೆಯ ಪಾಠ ಎಂದರೆ ತಪ್ಪಲ್ಲ. ಸ್ಟಾರ್‌ಗಳು ತಮ್ಮ ಅಭಿಮಾನಿಗಳನ್ನು ಹೇಗೆ ನಡೆಸಿಕೊಳ್ಳಬಾರದು ಮತ್ತು ಅಭಿಮಾನಿಗಳು ಸ್ಟಾರ್‌ಗಳ ಜೊತೆ ಹೇಗೆ ನಡೆದುಕೊಳ್ಳಬೇಕು, ಎಷ್ಟು ಅಂತರ ಕಾಯ್ದುಕೊಂಡಿರಬೇಕು ಎಂಬುದಕ್ಕೆ ಈ ಪ್ರಕರಣ ಒಂದು ಸೂಕ್ತ ಉದಾಹರಣೆ. ಅಭಿಮಾನಿಗಳು ಸ್ಟಾರ್‌ ನಟರ ಸಿನಿಮಾಗಳನ್ನು ನೋಡಿ ಗೆಲ್ಲಿಸಿ ಆ ಮೂಲಕ ಅಭಿಮಾನ ಮೆರೆಯಬೇಕೇ ಹೊರತು ನಟನ ವೈಯಕ್ತಿಕ ಬದುಕಿನ ವಿಚಾರಗಳಿಗೆ ತಲೆ ಹಾಕಿಯಲ್ಲ. ಅಭಿಮಾನ ಸಿನಿಮಾಕ್ಕಿರಬೇಕೇ ಹೊರತು ನಟ ಮಾಡಿದ ಎಲ್ಲಾ ಕೆಟ್ಟ ಕಾರ್ಯಗಳಿಗಲ್ಲ. ಇದೇ ಮಾತು ಸ್ಟಾರ್‌ ನಟರಿಗೂ ಅನ್ವಯಿಸುತ್ತದೆ. “ಬಂದು ಸಿನಿಮಾ ನೋಡಿ ಗೆಲ್ಲಿಸಿ, ಪ್ರೋತ್ಸಾಹಿಸಿ’ ಎಂದು ನಟರು ಕೇಳಬೇಕೇ ಹೊರತು, ಅಭಿಮಾನಿಗಳನ್ನು, ಅಭಿಮಾನಿ ಸಂಘಗಳನ್ನು ತನ್ನ ವೈಯಕ್ತಿಕ “ಆಗ್ರಹ’ಗಳನ್ನು ಈಡೇರಿಸಲು ಬಳಸಿಕೊಳ್ಳಬಾರದು.

 ರವಿಪ್ರಕಾಶ್‌ ರೈ

Advertisement

Udayavani is now on Telegram. Click here to join our channel and stay updated with the latest news.

Next