ಮೈಸೂರು: ವರನಟ ಡಾ.ರಾಜ್ ಕುಮಾರ್ ಮೊಮ್ಮಗ ಯುವ ರಾಜ್ ಕುಮಾರ್ ನಿಶ್ಚಿತಾರ್ಥ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಗುರುವಾರ ಅದ್ದೂರಿಯಾಗಿ ನಡೆಯಿತು. ನಗರದ ತಾರಾ ಹೋಟೆಲ್ ಸದರನ್ ಸ್ಟಾರ್‌ನಲ್ಲಿ ನಡೆದ ನಿಶ್ಚಿತಾರ್ಥ ಸಮಾರಂಭದಲ್ಲಿ ರಾಘವೇಂದ್ರ ರಾಜ್ ಕುಮಾರ್ ಕಿರಿಯ ಪುತ್ರ ಯುವರಾಜ್ ಕುಮಾರ್ ಹಾಗೂ ಮೈಸೂರು ಮೂಲದ ಶ್ರೀದೇವಿ ಭೈರಪ್ಪ ಉಂಗುರ ಬದಲಾಯಿಸಿಕೊಂಡರು.
ಯುವ ರಾಜ್‌ಕುಮಾರ್ ಹಾಗೂ ಶ್ರೀದೇವಿ ಭೈರಪ್ಪ ಕಳೆದ 7 ವರ್ಷಗಳಿಂದ ಸ್ನೇಹಿತರು. ತಮ್ಮ ಸಹೋದರ ವಿಜಯ್ ರಾಜ್‌ಕುಮಾರ್ ಅಭಿನಯದ “ರನ್ ಆಂಟನಿ’ ಚಿತ್ರದ ಪ್ರಚಾರ ಕಾರ್ಯದಲ್ಲಿ ಶ್ರೀದೇವಿ ಕೆಲಸ ಮಾಡಿದ್ದರು. ಮದುವೆ ದಿನಾಂಕ ಇನ್ನು ನಿಗದಿಯಾಗಿಲ್ಲ.
ಕಾಣಿಸಿಕೊಂಡ ವಿದ್ವತ್: ನಿಶ್ಚಿತಾರ್ಥದಲ್ಲಿ ಶಾಸಕ ಹ್ಯಾರೀಸ್ ಪುತ್ರ ಮೊಹಮ್ಮದ್ ನಲಪಾಡ್‌ರಿಂದ ಹಲ್ಲೆಗೊಳಗಾಗಿದ್ದ ವಿದ್ವತ್ ಕಾಣಿಸಿಕೊಂಡರು.
ಕುಟುಂಬದಲ್ಲಿ ಯಾವುದೇ ಕಾರ್ಯಕ್ರಮಗಳು ನಡೆದರೂ ಸಂತೋಷವಾಗುತ್ತದೆ. ಯುವ ರಾಜ್‌ಕುಮಾರ್ ಮೈಸೂರಿಗೆ ರಾಜ್‌ಕುಮಾರ್ ಕುಟುಂಬದ ಎರಡನೇ ಅಳಿಯನಾಗಿದ್ದಾನೆ.
● ಶಿವರಾಜ್‌ಕುಮಾರ್, ನಟ.