ಬೆಳಗಾವಿ ಜಿಲ್ಲೆ ಅಥಣಿಯ ಡಾ. ಪೂರ್ಣಿಮಾ ಮದುವೆಯಾಗಿ ಅದೇ ಜಿಲ್ಲೆಯ ರಾಮದುರ್ಗದಲ್ಲಿರುವ ಗಂಡನ ಮನೆಗೆ ಬರುತ್ತಾರೆ. ವೃತ್ತಿಯಲ್ಲಿ ಆಯುರ್ವೇದ ವೈದ್ಯೆಯಾಗಿದ್ದ ಆಕೆ ದವಾಖಾನೆಯನ್ನೂ ಪ್ರಾರಂಭಿಸುತ್ತಾರೆ. ಕಾಮಾಲೆ, ಅತಿಸಾರ ಬೇನೆಯಿಂದ ತುತ್ತಾದ ರೋಗಿಗಳೇ ಹೆಚ್ಚೆಚ್ಚು ಬರತೊಡಗುತ್ತಿದ್ದಂತೆ, ರೋಗಕ್ಕೆ ಔಷಧಿ ಕೊಡುವುದಕ್ಕಿಂತ ಸಮಸ್ಯೆಯ ಮೂಲಪತ್ತೆ ಹಚ್ಚಿ ಪರಿಹಾರ ಕಂಡುಹಿಡಿಯುವುದೇ ಸೂಕ್ತ ಎಂಬ ಆಲೋಚನೆ ಅವರಲ್ಲಿ ಮೊಳೆಯುತ್ತದೆ.
ಹೇಗಾದರೂ ಮಾಡಿ ಮಲಪ್ರಭೆಯನ್ನು ಉಳಿಸಲೇಬೇಕು, ರಾಮದುರ್ಗ ಮತ್ತು ಸುತ್ತಮುತ್ತಲಿನ ಹಳ್ಳಿಗಳಿಗೆ ಕುಡಿಯುವ ನೀರಿನ ಸಮರ್ಪಕ ವ್ಯವಸ್ಥೆ ಮಾಡಬೇಕೆಂಬ ತೀರ್ಮಾನಕ್ಕೆ ಡಾ. ಪೂರ್ಣಿಮಾ ಗೌರೋಜಿ ಬರುತ್ತಾರೆ.
ಒಂದು ಕಾಲದಲ್ಲಿ 150 ಮೀಟರ್ ಅಗಲವಾಗಿ ಹರಿಯುತ್ತಿದ್ದ ಮಲಪ್ರಭೆಯ ಪಾತ್ರ ಕೇವಲ ಐದು ಅಡಿಗೆ ಕಿರಿದುಗೊಂಡಿರುವುದು ಒಂದೆಡೆ ಅವರನ್ನು ವಿಚಲಿತಗೊಳಿಸಿದರೆ, ಇನ್ನೊಂದೆಡೆ ಎರಡೂ ಪಾತ್ರಗಳಲ್ಲಿ ಬೆಳೆದ ಜೊಂಡನ್ನು ಸಾಪುಗೊಳಿಸಿಕೊಳ್ಳುತ್ತ ತಮ್ಮ ತಮ್ಮ ಹೊಲಗಳನ್ನು ರೈತರು ಅಕ್ರಮವಾಗಿ ವಿಸ್ತರಿಸಿಕೊಂಡಿರುವುದೂ ಅವರನ್ನು ಕಾಡುತ್ತದೆ. ಅತ್ತ ನವಿಲುತೀರ್ಥ ಅಣೆಕಟ್ಟು ಕಟ್ಟಿದ್ದರಿಂದ ಕೆಳಹರಿವು ಕ್ಷೀಣಗೊಂಡು ನದಿ ಬತ್ತಿ, ಅಕ್ರಮ ಮರಳು ಸಾಗಣೆ ದಂಧೆ ಶುರುವಾಗಿರುವುದು ಸಂಕಟಕ್ಕೀಡು ಮಾಡುತ್ತದೆ. ಯಾವ ರಾಜಕಾರಣಿ ಮತ್ತು ಸಂಘಟನೆಗಳ ಬೆಂಬಲವಿಲ್ಲದೆ ಒಂಟಿಯಾಗಿ ತಾನು ಹೋರಾಟಕ್ಕಿಳಿಯಬೇಕೆಂದು ಸಂಕಲ್ಪ ಮಾಡಿಕೊಳ್ಳುತ್ತಾರೆ.
ಮೊದಲು ಪ್ರಯೋಗಾಲಯಕ್ಕೆ ನೀರಿನ ಮಾದರಿ ಕಳಿಸಿ ಅದರಲ್ಲಿ ಕಬ್ಬಿಣದ ಅಂಶ ಹೆಚ್ಚಿರುವುದನ್ನು ಪತ್ತೆ ಹಚ್ಚುತ್ತಾರೆ. ಕರಪತ್ರಗಳ ಮೂಲಕ ಸ್ಥಳಿಯರ ವಿಶ್ವಾಸ ಗಳಿಸಿ ಅವರಲ್ಲಿ ಜಾಗೃತಿ ಮೂಡಿಸುತ್ತಾರೆ. ಮುಖ್ಯಮಂತ್ರಿ ಮತ್ತು ಜಿಲ್ಲಾಡಳಿತದ ವಿರುದ್ಧ ಕೇಸ್ ದಾಖಲಿಸಿ, ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟಿಗೆ ಸಲ್ಲಿಸುತ್ತಾರೆ. ಮುಂದೆ ನವಿಲುತೀರ್ಥ ಅಣೆಕಟ್ಟಿನಿಂದ ರಾಮದುರ್ಗದ ಮಾರ್ಗದಲ್ಲಿ 68 ಕೋಟಿ 76 ಲಕ್ಷ ರೂ. ವೆಚ್ಚದಲ್ಲಿ ಪೈಪ್‌ಲೈನ್ ಮೂಲಕ ಹದಿಮೂರು ಹಳ್ಳಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುತ್ತದೆ. ಜತೆಗೆ ಮಲಪ್ರಭಾ ತೀರದ 68 ಹಳ್ಳಿಗಳೂ ಈ ವ್ಯವಸ್ಥೆಗೆ ಒಳಪಡುತ್ತವೆ. ಈ ಎಲ್ಲಾ ಹಳ್ಳಿಗಳಲ್ಲೂ ಈಗ 24 ಗಂಟೆಗಳ ಕಾಲ ಕುಡಿಯುವ ಶುದ್ಧ ನೀರು ಲಭ್ಯ!
ರಾಮದುರ್ಗದಲ್ಲಿ 19 ಕೋಟಿ ರೂ. ವೆಚ್ಚದಲ್ಲಿ ಒಳಚರಂಡಿ ಕಾರ್ಯಯೋಜನೆ ಪೂರ್ಣಗೊಳ್ಳುವ ಹಂತದಲ್ಲಿದೆ. ಅಲ್ಲದೆ, 7 ಕೋಟಿ ರೂ. ವೆಚ್ಚದಲ್ಲಿ ನದಿ ಪಾತ್ರ ಅಗಲೀಕರಣ ಯೋಜನೆಯೂ ಸಂಪನ್ನಗೊಂಡಿದೆ ನಿಜ. ಆದರೆ, ಯೋಜನಾಪಟ್ಟಿಯಲ್ಲಿ ನವಿಲುತೀರ್ಥ ಅಣೆಕಟ್ಟಿನಿಂದ ಕೂಡಲಸಂಗಮದ ತನಕವೂ ಅದು ಅಗಲಗೊಳ್ಳಬೇಕಿತ್ತು. ಕಾರ್ಯರೂಪದಲ್ಲಿ ಅದು ಕೇವಲ ರಾಮದುರ್ಗ ಪರಿಸರದಲ್ಲಿ ಮಾತ್ರ ಅಗಲಗೊಂಡಿದೆ ಎನ್ನುವುದು ಪೂರ್ಣಿಮಾ ಅವರ ಆರೋಪ. ಈ ಸಂಬಂಧವಾಗಿ ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದಾರೆ.
ಇಷ್ಟೇ ಅಲ್ಲ, ಗಂಗಾ ನದಿಯಂತೆ ಮಲಪ್ರಭೆಯನ್ನೂ ಶುದ್ಧಗೊಳಿಸಬೇಕೆಂಬ ಅಹವಾಲನ್ನು ಪ್ರಧಾನಮಂತ್ರಿ ಮತ್ತು ಮುಖ್ಯಮಂತ್ರಿಗಳಿಗೆ ಸಲ್ಲಿಸಿದ್ದರು. ಮುಖ್ಯಮಂತ್ರಿಗಳು ನೀರಾವರಿ ಇಲಾಖೆಗೆ ಈ ಜವಾಬ್ದಾರಿಯನ್ನು ವಹಿಸಿದ್ದು, ಪ್ರಧಾನಮಂತ್ರಿಗಳು ಗಮನಿಸುವುದಾಗಿ ತಿಳಿಸಿದ್ದಾರೆ ಎಂದು ಪೂರ್ಣಿಮಾ ಹೇಳುತ್ತಾರೆ.
ಈ 18 ವರ್ಷಗಳ ಏಕಾಂಗಿ ಹೋರಾಟಕ್ಕೆ ಸ್ಥಳೀಯ ರಾಜಕಾರಣಿಗಳು, ವಿಧಾನಸೌಧದ ಕುರ್ಚಿಗಳು ತೊಡಕು ಮಾಡಿಲ್ಲವಂತೇನಿಲ್ಲ. ಇದೆಲ್ಲವನ್ನೂ ಆಗಿಂದಾಗೇ ಕಾನೂನು ಮೂಲಕ ಪರಿಹರಿಸಿಕೊಳ್ಳುತ್ತ ನನ್ನ ಗುರಿಯೆಡೆಗೇ ದೃಷ್ಟಿ ನೆಟ್ಟಿದ್ದೇನೆ.
– ಡಾ. ಪೂರ್ಣಿಮಾ ಗೌರೋಜಿ
ಸಂಪರ್ಕ: 9449086929,
drpoornimagouroji@gmail.com
-ಶ್ರೀದೇವಿ ಕಳಸದ