Advertisement

ಸೌಖ್ಯ ಸಂಧಾನ

09:22 AM Apr 11, 2019 | Hari Prasad |

ನಾವು ಬೆಂಗಳೂರಲ್ಲಿ ವಾಸಮಾಡುತ್ತಿದ್ದೇವೆ. ಮದುವೆ ಆಗಿ 8 ವರ್ಷ ಆಗಿದೆ. ನಮಗೆ 6 ವರ್ಷದ ಮಗಳು ಇದ್ದಾಳೆ. ನನ್ನ ಪ್ರಶ್ನೆ ಏನೆಂದರೆ, ನನ್ನಾಕೆಗೆ ತಿಂಗಳ ಮುಟ್ಟಿನ ಸಮಯದಲ್ಲಿ ತುಂಬಾ ಜಾಸ್ತಿ ಕಾಮಾತುರತೆ ಇರುತ್ತದೆ. ನಾವು, ರಕ್ತಸ್ರಾವ ಇದ್ದರೂ ಕೂಡ ಸೇರುತ್ತೇವೆ. ಇದರಿಂದ ಏನಾದರೂ ಆರೋಗ್ಯಕ್ಕೆ ತೊಂದರೆ ಇದೆಯಾ? ಬೇರೆ ಗುಪ್ತರೋಗ ಬರಬಹುದಾ ತಿಳಿಸಿ. ದಯಮಾಡಿ ಈ ಪ್ರಶ್ನೆಗೆ ಉತ್ತರ ಪ್ರಕಟಿಸಿ.
– ಪರಮೇಶ್‌, ಬೆಂಗಳೂರು

Advertisement

ಮುಟ್ಟಿನ ಸಮಯದಲ್ಲಿ ಮಿಲನಕ್ರಿಯೆ ಮಾಡುವುದರಿಂದ ವೈಜ್ಞಾನಿಕವಾಗಿ ತೊಂದರೆ ಏನೂ ಇಲ್ಲ. ಆದರೆ ಹೆಚ್ಚಿನ ರಕ್ತಸ್ರಾವ ಇದ್ದಾಗ, ಜನನಾಂಗದ ಸೋಂಕು ಇದ್ದಾಗ ಸೇರಬಾರದು. ಮಿಲನಕ್ಕೆ ಮುನ್ನ ಮತ್ತು ನಂತರ ಜನನಾಂಗವನ್ನು ಸ್ವಚ್ಛ ಮಾಡಿಕೊಳ್ಳಿ. ನೀವು ಕಾಂಡೋಮ್‌ನ ಬಳಕೆ ಕೂಡ ಮಾಡಬಹುದು.

ನನ್ನ ವಯಸ್ಸು 20. ನಾನು ಒಬ್ಬಳನ್ನು ಪ್ರೀತಿಸುತ್ತಿದ್ದೇನೆ. ಅವಳ ವಯಸ್ಸು ಕೂಡ 20. ಮುಂದೆ ನಾವು ಮದುವೆ ಆಗಬೇಕೆಂದು ಬಯಸಿದ್ದೇವೆ. ವಯಸ್ಸು ಒಂದೇ ಆದ್ದರಿಂದ ಮುಂದೆ ಏನಾದರೂ ತೊಂದರೆ ಆಗಬಹುದೇ? ನಮ್ಮ ವಯಸ್ಸು ಒಂದೇ ಆದ್ದರಿಂದ ನಮಗೆ ಹುಟ್ಟುವ ಮಗುವಿಗೇನಾದರೂ ತೊಂದರೆ ಆಗಬಹುದಾ ಎಂಬ ಭಯ. ನಾನು ಎಷ್ಟನೇ ಪ್ರಾಯದಲ್ಲಿ ಮದುವೆ ಆಗಬಹುದು? ದಯಮಾಡಿ ತಿಳಿಸಿ.
– ಸತೀಶ್‌, ಮಂಗಳೂರು

ನಿಮಗಿನ್ನೂ ಕಾನೂನಿನ ಪ್ರಕಾರ ಮದುವೆಯ ವಯಸ್ಸಾಗಿಲ್ಲ. 21 ವಯಸ್ಸಿನ ನಂತರ ಮದುವೆ­ಯಾಗಬೇಕು. ನಿಮ್ಮ ಕಾಲಮೇಲೆ ನೀವು ನಿಲ್ಲುವವರೆಗೂ ನಿಧಾನಿಸಿ ನಂತರ ಮದುವೆಯಾಗಿ. ಒಂದೇ ವಯಸ್ಸಿನವರು ಮದುವೆಯಾದರೆ ತೊಂದರೆ ಏನೂ ಇಲ್ಲ. ಮಕ್ಕಳಾಗಲೂ ತೊಂದರೆ ಇಲ್ಲ. ಇಬ್ಬರಲ್ಲೂ ಹೊಂದಾಣಿಕೆ ಇದ್ದರೆ ಯಾವುದೇ ತೊಂದರೆಯಾಗುವುದಿಲ್ಲ.

ನನ್ನ ಪ್ರಾಯ 54. ವಯಸ್ಸಿಗೆ ಬಂದ ಒಂದು ಹೆಣ್ಣು ಮತ್ತು ಒಂದು ಗಂಡು ಮಕ್ಕಳಿದ್ದಾರೆ. ಸುಖ ಸಂಸಾರ. ನನ್ನದು ಸಮಸ್ಯೆ ಅಲ್ಲದಿದ್ದರೂ ನಿಮ್ಮಲ್ಲಿ ಕೇಳಿಕೊಳ್ಳುವುದೇನೆಂದರೆ ಮದುವೆ ಆಗಿ 29 ವರ್ಷ ವಯಸ್ಸಾಗಿದೆ. ಬಿ.ಪಿ ಇದ್ದರೂ ಔಷಧಿಯಿಂದ ನಾರ್ಮಲ್‌ ಇದೆ. ಇತ್ತೀಚೆಗೆ ಶುಗರ್‌ ಇದ್ದರೂ ಔಷಧಿಯಿಂದ ನಾರ್ಮಲ್‌ ಇದೆ. ನಾನು- ಪತ್ನಿ ಮದುವೆ ಆದಂದಿನಿಂದ ಇಂದಿನವರೆಗೆ ನಿತ್ಯ 2- 3 ಸಲ ಮಿಲನಕ್ರಿಯೆ ನಡೆಸುತ್ತೇವೆ. ಕೆಲವೊಮ್ಮೆ ವಿವಿಧ ಭಂಗಿಯಲ್ಲೂ ಸುಖೀಸುತ್ತೇವೆ, ಇಂದಿನವರೆಗೆ ಉದ್ರೇಕಕ್ಕಾಗಿ ಯಾವುದೇ ಔಷಧಿ ಪಡೆದವನಲ್ಲ. ಶಾರೀರಿಕವಾಗಿ ದೈಹಿಕವಾಗಿ ಇಬ್ಬರಿಗೂ ಯಾವುದೇ ಸಮಸ್ಯೆಇಲ್ಲ. ನನಗಿಂತ ಕಿರಿಯ ಕೆಲವರು ಮಿಲನಕ್ರಿಯೆಯನ್ನೇ ನಿಲ್ಲಿಸಿದ್ದಾರೆ. ಕೆಲವರು ವಾರಕ್ಕೊಮ್ಮೆ ತಿಂಗಳಿಗೊಮ್ಮೆ ಸೇರುತ್ತಾರಂತೆ. ಕೆಲವರು ಮಾನಸಿಕ ಒತ್ತಡ ಇದ್ದರೆ ಮಿಲನಕ್ರಿಯೆ ನಡೆಸುವುದಿಲ್ಲವಂತೆ. ಆದರೆ ನಾನು ಮಾತ್ರ ಎಷ್ಟೇ ಒತ್ತಡ ಇದ್ದರೂ ಇದು ದೈನಂದಿನ ಕ್ರಿಯೆ ಎಂದು ನಿಲ್ಲಿಸುವುದೇ ಇಲ್ಲ. ನನ್ನವಳೂ ಸಹಕರಿಸುತ್ತಾಳೆ. ಅವಳಿಗೆ ಯಾವುದೇ ತೊಂದರೆ ಇಲ್ಲ. ಈ ಪ್ರಾಯದಲ್ಲಿ ದಿನಕ್ಕೆ 2-3 ಸಲ ಮಿಲನ ಹೊಂದುವುದರಿಂದ ಮುಂದೆ ಏನಾದರೂ ಸಮಸ್ಯೆಇದೆಯ? ಆದರೆ ದೈಹಿಕವಾಗಿ ಯಾವುದೇ ಸಮಸ್ಯೆ ಇಲ್ಲ, ದಯವಿಟ್ಟು ನಿಮ್ಮ ಅಭಿಪ್ರಾಯ ತಿಳಿಸಿ.
– ಪ್ರವೀಣ್‌ ಕುಮಾರ್‌, ಮುಂಬೈ

Advertisement

ದಂಪತಿಗಳ ಆರೋಗ್ಯ, ಏಕಾಂತತೆ ಇಬ್ಬರ ಆಸಕ್ತಿ ಇವೆಲ್ಲವುಗಳಿಂದ ನಿಮ್ಮ ಲೈಂಗಿಕ ಆರೋಗ್ಯವೂ ಚೆನ್ನಾಗಿರುತ್ತದೆ. ನಿಮ್ಮ ಮಿಲನ ಕ್ರಿಯೆಯಿಂದ ಇಬ್ಬರಿಗೂ ತೊಂದರೆ ಇಲ್ಲದಿರುವುದರಿಂದ ನಿಮ್ಮ ಲೈಂಗಿಕ ಜೀವನ ಮುಂದುವರೆಸಲು ಯಾವುದೇ ತೊಂದರೆ ಇಲ್ಲ. ನೀವು ಬದುಕಿರುವವರೆಗೂ ಮುಂದುವರಿಸಬಹುದು. ವಯಸ್ಸಾ­ಗುತ್ತಿದ್ದಂತೆ ಸ್ಖಲನದ ಪ್ರಮಾಣ ಸ್ವಲ್ಪ ಕಡಿಮೆಯಾಗ­ಬಹುದು. ಅದರಿಂದ ತೊಂದರೆ ಏನೂ ಇಲ್ಲ.

ನಾನು 39 ವರ್ಷದ ಮಹಿಳೆ. ನನಗೆ 7 ವರ್ಷದ ಮಗಳು ಇದ್ದಾಳೆ. ಅವಳನ್ನು ಚೆನ್ನಾಗಿ ಓದಿಸಬೇಕೆಂದು ಆಸೆ. ನಮ್ಮ ಹತ್ತಿರ ಹಣ ಜಾಸ್ತಿ ಇಲ್ಲ. ನನ್ನ ಗಂಡನಿಗೆ ಹೇಳಿದೆ. ನಮಗೆ ಮಗಳು ಒಬ್ಬಳೇ ಸಾಕು ಅಂತ. ಆದರೆ ನನ್ನ ಗಂಡ ಇನ್ನೊಂದು ಮಗು ಬೇಕು ಅಂತ ಹೇಳ್ತಾರೆ. ಇಬ್ಬರು ಮಕ್ಕಳನ್ನು ಸಾಕುವುದು ಸುಲಭ ಅಲ್ಲ. ನನ್ನ ಗಂಡ ನಾನು ಹೇಳಿದ್ರೆ ಅರ್ಥಮಾಡಿಕೊಳ್ಳಲ್ಲ. ನನ್ನ ಗಂಡ ಹೊರದೇಶದಲ್ಲಿ ಸೇಲ್ಸ್‌ಮ್ಯಾನ್‌ ಆಗಿ ಕೆಲಸ ಮಾಡ್ತಾರೆ. ನಾನು ಅವರು ಪ್ರತಿ ಸಲ ಬರುವಾಗ Mala-D ಈ ಗುಳಿಗೆ ತೆಗೆದುಕೊಳ್ಳುತ್ತೇನೆ. ಅವರು ಬಂದಾಗ 2 ತಿಂಗಳು ಇರ್ತಾರೆ. ನಾನು ಪ್ರತಿದಿನ ಅವರು ಹೋಗುವ ತನಕ ತೆಗೆದುಕೊಳ್ಳುತ್ತೇನೆ. ಈಗ ಇನ್ನೊಂದು ತಿಂಗಳಲ್ಲಿ ಒಂದು ತಿಂಗಳಿಗೆ ಬರ್ತಾರೆ. ಮತ್ತೆ ಡಿಸೆಂಬರ್‌ ತಿಂಗಳಲ್ಲಿ ಕೆಲಸ ಬಿಟ್ಟು ಊರಿನಲ್ಲೇ ನಿಲ್ಲುತ್ತಾರೆ. ನನ್ನ ಗಂಡ ಆಪರೇಷನ್‌ ಮಾಡಿಸಲಿಕ್ಕೆ ತಯಾರಿಲ್ಲ. ಅವರಿಗೆ ಗೊತ್ತಾಗದ ಹಾಗೆ ನಾನು ಗುಳಿಗೆ ತರುತ್ತೇನೆ. ಮತ್ತೆ ನಾವು ಸೇರುತ್ತೇವೆ. ಡಾಕ್ಟರ್‌, ನನ್ನ ಪ್ರಶ್ನೆ ಏನೆಂದರೆ, ನಾನು ಪ್ರತಿದಿನವೂ ಗುಳಿಗೆ ತೆಗೆದುಕೊಂಡರೆ ಸೈಡ್‌ ಎಫೆಕ್ಟ್ ಇದೆಯೆ? ಪ್ರತಿ ದಿನ ತಗೋಬಹುದಾ? ಇಲ್ಲದಿದ್ದರೆ ಯಾವಾಗ ಗುಳಿಗೆ ತೆಗೆದುಕೊಳ್ಳಬೇಕು. ನನ್ನ ಸಮಸ್ಯೆಗೆ ಪರಿಹಾರ ಕೊಡಿ.
-ಸಿಂಥಿಯಾ, ಹಾಸನ

ಇದುವರೆಗೆ ನೀವು ಗುಳಿಗೆ ತೆಗೆದುಕೊಂಡಾಗ ತೊಂದರೆ ಏನೂ ಆಗಿಲ್ಲದಿರುವುದರಿಂದ ನಿಮಗೆ ಗುಳಿಗೆಯಿಂದ ಅಡ್ಡ ಪರಿಣಾಮಗಳು ಇಲ್ಲ ಎಂದು ತಿಳಿಯಬಹುದು. ಆದ್ದರಿಂದ ಅವನ್ನು ಮುಂದುವರೆಸಬಹುದು. ಯಾವುದಕ್ಕೂ ಸ್ತ್ರೀರೋಗ ತಜ್ಞರ ಬಳಿ ಪರೀಕ್ಷಿಸಿಕೊಂಡು ಗುಳಿಗೆ ತೆಗೆದುಕೊಳ್ಳುವುದನ್ನು ಮುಂದುವರಿಸಿ.

— ಡಾ. ಪದ್ಮಿನಿ ಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next