Advertisement

ರೇಷ್ಮೆಗೆ ಫೆಬ್ರಿನ್ ರೋಗ: ಅಧಿಕಾರಿಗಳಿಗೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ ಡಾ.ನಾರಾಯಣಗೌಡ

07:16 PM Apr 27, 2022 | Team Udayavani |

ಬೆಂಗಳೂರು: ರೇಷ್ಮೆಗೆ ಮಾರಕವಾಗಿರುವ ಫೆಬ್ರಿನ್ ರೋಗಕ್ಕೆ ಶೀಘ್ರದಲ್ಲೇ ಕಡಿವಾಣ ಹಾಕಬೇಕು ಎಂದು ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಡಾ.ನಾರಾಯಣಗೌಡ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ವಿಕಾಸಸೌಧದಲ್ಲಿ ಬುಧವಾರ ರೇಷ್ಮೆ ಇಲಾಖೆ ಅಧಿಕಾರಿಗಳ ಜೊತೆ ಸಭೆ ನಡೆಸಿದ ಸಚಿವರು, ಫೆಬ್ರಿನ್ ರೋಗ ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ಪಡೆದರು. ಅಲ್ಲಲ್ಲಿ ಫೆಬ್ರಿನ್ ರೋಗ ಕಾಣಿಸಿಕೊಂಡಿದ್ದು, ರೈತರನ್ನು ಸಂಕಷ್ಟಕ್ಕೆ ತಳ್ಳಿದೆ‌. ರೈತರಿಗೆ ಯಾವುದೇ ರೀತಿ ಸಮಸ್ಯೆ ಆಗದ ರೀತಿಯಲ್ಲಿ ಎಚ್ಚರಿಕೆ ವಹಿಸಬೇಕು ಎಂದು ಸಚಿವ ಡಾ.ನಾರಾಯಣಗೌಡ ಅವರು ಸೂಚಿಸಿದರು.

ಅಲ್ಲಲ್ಲಿ ಫೆಬ್ರಿನ್ ರೋಗ ಕಾಣಿಸಿಕೊಳ್ಳುತ್ತಿದ್ದರೂ ಆರಂಭದಲ್ಲೇ ಸೂಕ್ತ ಕ್ರಮಕೈಗೊಳ್ಳದ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡ ಸಚಿವರು, ನಿರ್ಲಕ್ಷ್ಯ ಮಾಡದೇ ನಿಯಂತ್ರಿಸಬೇಕು ಎಂದು ಎಚ್ಚರಿಕೆ ನೀಡಿದರು.

ರೇಷ್ಮೆ ಹುಳುಗಳಿಗೆ ತಗುಲುವ ಗಂಟುರೋಗ ತಡೆಗಟ್ಟಲು ಇಲಾಖೆಯ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಕೇಂದ್ರ ರೇಷ್ಮೆ ಮಂಡಳಿ, KSSRDI ಸಂಸ್ಥೆಯ ವಿಜ್ಞಾನಿಗಳೊಂದಿಗೆ 4 ತಂಡಗಳನ್ನು ರಚಿಸಲಾಗಿದೆ. ವಿಜ್ಞಾನಿಗಳ ತಂಡ ಕುಣಿಗಲ್, ಮಾಗಡಿ, ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ಹಲವೆಡೆ ಸ್ಯಾಂಪಲ್ ಸಂಗ್ರಹಿಸಲಾಗಿದೆ. ಬಿತ್ತನೆ ಪ್ರದೇಶದಲ್ಲಿ ರೋಗಪತ್ತೆ ಹಚ್ಚಲು ಹಾಗೂ ಸೋಂಕು ನಿವಾರಣೆಗೆ ಅವಶ್ಯವಿರುವ 22 ತಾಂತ್ರಿಕ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ಸಚಿವರಿಗೆ ಮಾಹಿತಿ ನೀಡಿದರು.

ಫೆಬ್ರಿನ್ ರೋಗ ರೇಷ್ಮೆ ಬೆಳೆಗಾರರಿಗೆ ಸಂಕಷ್ಟ ತಂದಿದೆ. ಉತ್ತಮ ಬೆಳೆಯ ನಿರೀಕ್ಷೆಯಲ್ಲಿದ್ದವರಿಗೆ ಫೆಬ್ರಿನ್ ನಷ್ಟ ಉಂಟು ಮಾಡುತ್ತಿದೆ. ಫೆಬ್ರಿನ್‌ನಿಂದ ಆಗುತ್ತಿರುವ ಸಮಸ್ಯೆಗಳ ಬಗ್ಗೆ ನನ್ನ ಅರಿವಿಗೆ ಬಂದ ಕೂಡಲೇ ಅಗತ್ಯ ಕ್ರಮಕೈಗೊಳ್ಳುವಂತೆ ಸೂಚಿಸಿದ್ದೆ. ಇವತ್ತು ಮತ್ತೊಮ್ಮೆ ಅಧಿಕಾರಿಗಳ ಜೊತೆ ಸಭೆ ನಡೆಸಿ ಪರಿಶೀಲನೆ ನಡೆಸಿ, ಶೀಘ್ರದಲ್ಲೇ ಫೆಬ್ರಿನ್ ರೋಗಕ್ಕೆ ಕಡಿವಾಣ ಹಾಕುವಂತೆ ಸೂಚಿಸಿದ್ದೇನೆ. ನಾನೇ ಖುದ್ದಾಗಿ ಭೇಟ ನೀಡಿ ಪರಿಶೀಲಿಸುತ್ತೇನೆ ಎಂದು ಸಚಿವ ಡಾ.ನಾರಾಯಣಗೌಡ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

ಇದರ ಜೊತೆಗೆ ಬೆಂಗಳೂರಿನ ಓಕುಳೀಪುರಂನಲ್ಲಿ ನಿರ್ಮಿಸಲು ಉದ್ದೇಶಿಸಿರುವ ರೇಷ್ಮೆ ಭವನ ನಿರ್ಮಾಣದ ಪ್ರಗತಿ, ರಾಮನಗರ ಹೈಟೆಕ್ ರೇಷ್ಮೆ ಮಾರುಕಟ್ಟೆ ನಿರ್ಮಾಣ ಪ್ರಗತಿ ಕುರಿತು, ಕಲಬುರಗಿ ಹಾಗೂ ಹಾವೇರಿಯಲ್ಲಿ ಹೈಟೆಕ್ ರೇಷ್ಮೆಗೂಡಿನ ಮಾರುಕಟ್ಟೆ ನಿರ್ಮಾಣ ಹಾಗೂ ಕೆ ಆರ್ ಪೇಟೆ ತಾಲೂಕಿನಲ್ಲಿ ರೇಷ್ಮೆ ಪಾರ್ಕ್ ಸ್ಥಾಪನೆ ಬಗ್ಗೆ ಪ್ರಗತಿ ಪರಿಶೀಲನೆ ನಡೆಸಿದರು.

ಇದರ ಜೊತೆಗೆ ರೇಷ್ಮೆ ನೂಲು ಮತ್ತು ಸೀರೆ ಉತ್ಪಾದನೆ ಹೆಚ್ಚಳಕ್ಕೆ ಸಂಬಂಧಿಸಿದಂತೆ ಸಚಿವರು ಅಧಿಕಾರಿಗಳ ಜೊತೆ ಚರ್ಚಿಸಿದರು. ಇಟಲಿಯನ್ ಎಆರ್‌ಎಂ ಅಳವಡಿಸುವ ಸಂಬಂಧ ಚರ್ಚಿಸಲಾಯಿತು. ಮೈಸೂರು ನೇಯ್ಗೆ ಕಾರ್ಖಾನೆಯಲ್ಲಿ ಎರಡು ಶಿಫ್ಟ್ ನಲ್ಲಿ ಕಾರ್ಯನಿರ್ವಹಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸಚಿವ ಡಾ.ನಾರಾಯಣಗೌಡ ಅವರು ಸೂಚಿಸಿದರು.

ರೇಷ್ಮೆ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ, ಕೆಎಸ್‌ಐಸಿ ಅಧ್ಯಕ್ಷ ಎಸ್ ಆರ್ ಗೌಡ, ಕೆಎಸ್ಎಂಬಿ ಸವಿತಾ ಅಮರಶೆಟ್ಟಿ, ರೇಷ್ಮೆ ಇಲಾಖೆ ಆಯುಕ್ತೆ ಸಿಂಧು ರೂಪೇಶ್, ಕೆಎಸ್‌ಐಸಿ ಎಂಡಿ ಜೋಸ್ನಾ, ಕೆಎಸ್‌ಎಂಬಿ ಎಂಡಿ ಅನುರಾಧ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next