Advertisement

ಡಾ.ನರಸಮ್ಮ ಸೇವೆ ಅಪಾರ

12:24 PM Jun 17, 2019 | Suhan S |

ತುಮಕೂರು: ಪದ್ಮಶ್ರೀ ಡಾ.ಸೂಲಗಿತ್ತಿ ನರಸಮ್ಮ ತಮ್ಮ ಜೀವನವನ್ನು ಗ್ರಾಮೀಣ ಪ್ರದೇಶದ ಬಡಜನರಿಗೆ ಮುಡಿಪಿಟ್ಟು ಮಾಡಿದ ಸೇವೆ ಅಪಾರ. ಇವರು ಮಾಡಿದ ಸಾಧನೆಗೆ ರಾಷ್ಟ್ರ ಮಟ್ಟದಲ್ಲಿ ಗುರುತಿಸಿದ್ದು ಶ್ಲಾಘನೀಯ ಎಂದು ಸಂಸದ ಜಿ.ಎಸ್‌.ಬಸವರಾಜ್‌ ಹೇಳಿದರು.

Advertisement

ನಗರದ ಕನ್ನಡ ಸಾಹಿತ್ಯ ಪರಿಷತ್‌ ಭವನದಲ್ಲಿ ಏರ್ಪಡಿಸಿದ್ದ ಪದ್ಮಶ್ರೀ ಡಾ. ಸೂಲಗಿತ್ತಿ ನರಸಮ್ಮ 99ನೇ ಜನ್ಮದಿನದ ಪ್ರಯುಕ್ತ ರಾಷ್ಟ್ರೀಯ ಪ್ರಶಸ್ತಿ ವಿತರಣಾ ಸಮಾರಂಭ ಹಾಗೂ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸ್ಮಾರಕ ನಿರ್ಮಾಣ: ಸೂಲಗಿತ್ತಿ ನರಸಮ್ಮನವರ ಸೇವೆ ಪರಿಗಣಿಸಿ ಹಲವಾರು ಪ್ರಶಸ್ತಿಗಳು, ಗೌರವ ಸಮರ್ಪಣೆ ಸಂದಿವೆ. ಪಾವಗಡ ಹಾಗೂ ನೆರೆಯ ತಾಲೂಕುಗಳಲ್ಲಿ ಹೆರಿಗೆ ಸೇವೆ ಮಾಡಿದ್ದಾರೆ. ಅವರಿಗೆ ನಗರದ 12ನೇ ವಾರ್ಡ್‌ನ ಜಾಗವೊಂದರಲ್ಲಿ ಸ್ಮಾರಕ ಕಟ್ಟಲಾಗುತ್ತದೆ ಎಂದು ನುಡಿದರು.

ಮುಖ್ಯವೃತ್ತಕ್ಕೆ ನರಸಮ್ಮ ಹೆಸರು: ಮಹಾನಗರ ಪಾಲಿಕೆ ಆಯುಕ್ತ ಟಿ.ಭೂಬಾಲನ್‌ ಮಾತನಾಡಿ, ಯಾವುದೇ ಜಾತಿ, ಧರ್ಮದ ಭೇದ-ಭಾವವಿಲ್ಲದೆ ಮಾಡಿದ ಅವರ ಸೇವೆಯು ಎಲ್ಲದಕ್ಕೂ ಮೀರಿದ್ದು. ಅಂದಿನ ದಿನದಲ್ಲಿ ವೈದ್ಯಕೀಯ ಸೌಲಭ್ಯಗಳು ಇಲ್ಲದಿದ್ದರೂ ವೈದ್ಯರಿಗೂ ಅಚ್ಚರಿ ಪಡುವಂತೆ ಸೇವೆಗೈದ ಇವರಿಗೆ ನಗರದ ಮುಖ್ಯವೃತ್ತವೊಂದಕ್ಕೆ ಅವರ ನಾಮಾಂಕಿತ ಮಾಡುತ್ತೇವೆ ಎಂದರು.

ಪ್ರಶಸ್ತಿಗೆ ಸಂತಸ: ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತೆ, ಸಮಾನತೆ ಹೋರಾಟಗಾರ್ತಿ ಗಿನ್ನಿಮಹಿ ಮಾತನಾಡಿ, ನರಸಮ್ಮನವರ ಹೆಸರಲ್ಲಿ ನನಗೆ ಪ್ರಶಸ್ತಿ ಸಂದಿದ್ದು, ಸಂತಸ ತಂದಿದೆ. ಪ್ರಸ್ತುತ ದಿನಗಳಲ್ಲಿ ಮಕ್ಕಳನ್ನು ಪೋಷಿಸುವುದು ಸವಾಲಿನ ಸಂಗತಿ. ಆದರೆ ಅವರು ಸಾವಿರಾರು ಮಕ್ಕಳನ್ನು ಪೋಷಿಸುವಲ್ಲಿ ಸಶಕ್ತರಾಗಿರುವುದು ಗಮನೀಯ. ಸಂವಿಧಾನ ಶಿಲ್ಪಿ ಅಂಬೇಡ್ಕರ್‌ ಸಂಘರ್ಷದಿಂದ ಮಹಿಳೆಯರು ಸಮಾನತೆಯೆಡೆಗೆ ಸಾಗುತ್ತಿದ್ದಾರೆ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲೂ ಹೆಣ್ಣುಮಕ್ಕಳು ಮುನ್ನುಗ್ಗುತ್ತಿರುವುದು ಸಂತಸದ ವಿಷಯ ಎಂದು ಹೇಳಿದರು.

Advertisement

ಮಹಾತಾಯಿ: ಸಾಮಾಜಿಕ ಹೋರಾಟಗಾರ್ತಿ ಕೆ.ನೀಲಾ ಮಾತನಾಡಿ, ನರಸಮ್ಮನವರ ಸೂಲಗಿತ್ತಿ ಕೆಲಸ ಯಾವ ಆಸ್ಪತ್ರೆಯೂ ಮಾಡಲ್ಲ. ವೈದ್ಯರಷ್ಟೇ ಜ್ಞಾನ ಹೊಂದಿದ್ದರೂ, ಕೋಟಿ ಕೊಟ್ಟರೂ ಸಿಗದ ಡಾಕ್ಟರೇಟ್ ಪದವಿಯನ್ನು ನಿಸ್ವಾರ್ಥ ಸೇವೆಯಿಂದ ಪಡೆದರು. ಹೆರಿಗೆ ಸೇವೆ ಮಾಡಿದ ಅವರು ಸಾವಿರಾರು ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ. ಚಾತುರ್ವರ್ಣ ಚೌಕಟ್ಟು ಹೊಂದಿರುವ ಈ ಸಮಾಜದಲ್ಲಿ ಸಮಾನತೆ ಕಾಣಬೇಕು. ಜಾತಿ ಹೆಸರಿನ ದೌರ್ಜನ್ಯವನ್ನು ಹೋಗಲಾಡಿಸುವ ಸಿದ್ಧಾಂತ ಕಟ್ಟಬೇಕು ಎಂದು ಹೇಳಿದರು.

ಸಮಾರಂಭದಲ್ಲಿ ಎಸ್‌ಎಸ್‌ಎಲ್ಸಿ, ಪಿಯುಸಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಗೌರವಿಸಲಾಯಿತು. ತುಮಕೂರು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್‌, ಮೇಯರ್‌ ಲಲಿತಾ ರವೀಶ್‌, ಜಿಲ್ಲಾ ಕಸಾಪ ಅಧ್ಯಕ್ಷೆ ಬಾ.ಹ.ರಮಾಕುಮಾರಿ, ಸಾಮಾಜಿಕ ಹೋರಾಟಗಾರ ಜಿ.ಎಸ್‌.ಪ್ರಸನ್ನ ಕುಮಾರ್‌, ಪತ್ರಿಕೋದ್ಯಮಿ ಎಸ್‌.ನಾಗಣ್ಣ, ಸಾಮಾಜಿಕ ಹೋರಾಟಗರ, ಚಿಂತಕ ಪ್ರೊ.ಕೆ.ದೊರೆರಾಜ್‌, ನಗರ ಪಾಲಿಕೆ ಸದಸ್ಯೆ ಗಿರಿಜಾ ಧನಿಯಾ ಕುಮಾರ್‌, ಸ್ಮಾರ್ಟ್‌ಸಿಟಿ ಅಧಿಕಾರಿ ತಿಪ್ಪೇರುದ್ರ ಸ್ವಾಮಿ ಹಾಗೂ ನರಸಮ್ಮ ಅವರ ಪುತ್ರ ಪಾವಗಡ ಶ್ರೀರಾಮ್‌, ಕನ್ನಡ ಸಾಹಿತ್ಯ ಪರಿಷತ್‌ ತಾಲೂಕು ಅಧ್ಯಕ್ಷೆ ಶೈಲಾ ನಾಗರಾಜ್‌, ವರದಕ್ಷಿಣೆ ವಿರೋಧಿ ವೇದಿಕೆ ಅಧ್ಯಕ್ಷೆ ಅನ್ನಪೂರ್ಣಾ ವೆಂಕಟನಂಜಪ್ಪ, ಅನುಸೂಯಮ್ಮ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next