ಮಂಗಳೂರು : ಮಂಗಳೂರು ವಿ.ವಿ. ವ್ಯಾಪ್ತಿಯ ಖಾಸಗಿ ಕಾಲೇಜು ಗಳ ಆಡಳಿತ ಮಂಡಳಿ ಆದಷ್ಟೂ ಬೇಗ ಸಂಘಟಿತ ರಾಗಿ ಎಲ್ಲ ಪ್ರಾಂಶುಪಾಲರು, ಪದಾಧಿ ಕಾರಿಗಳೊಂದಿಗೆ ವಿ.ವಿ.ಯ ಆಡಳಿತವನ್ನು ಭೇಟಿಯಾಗಿ ಎದು ರಿಸುತ್ತಿರುವ ಗಂಭೀರ ಸಮಸ್ಯೆಗಳ ಬಗ್ಗೆ ಗಮನ ಸೆಳೆಯಲೇಬೇಕಾದ ಅನಿವಾರ್ಯತೆ ಉಂಟಾಗಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಹೇಳಿದ್ದಾರೆ.
ಖಾಸಗಿ ಕಾಲೇಜುಗಳ ಆಡಳಿತ ಮಂಡಳಿಗಳ ಸಂಘದ 16ನೇ ಮಹಾಸಭೆ ಹಾಗೂ ಉನ್ನತ ಶಿಕ್ಷಣದ ಗುಣಮಟ್ಟ ಸುಧಾರಣೆ ವಿಚಾರಗೋಷ್ಠಿಯನ್ನು ಅವರು ಉದ್ಘಾಟಿಸಿ ಮಾತನಾಡಿ, ಸರಕಾರ ಮತ್ತು ಮಂಗಳೂರು ವಿ.ವಿ. ನಮ್ಮನ್ನು ವಿಶ್ವಾಸಕ್ಕೇ ತೆಗೆದುಕೊಳ್ಳುತ್ತಿಲ್ಲ, ನಮ್ಮ ಸಭೆ ನಡೆಸುವುದಾಗಿ ಒಂದು ವರ್ಷದಿಂದ ಹೇಳಿದರೂ ಇದುವರೆಗೆ ಸಾಧ್ಯವಾಗಿಲ್ಲ ಎಂದರು.
ಮಾನ್ಯತೆಗೆ ಹೆಚ್ಚು ಮೊತ್ತವನ್ನು ಖಾಸಗಿ ಕಾಲೇಜುಗಳು ವಿ.ವಿ.ಗೆ ಪಾವತಿಸಬೇಕಾಗುತ್ತದೆ. ಆದರೆ ಕಳೆದ ಐದು ವರ್ಷಗಳಿಂದ ವಿ.ವಿ.ಯ ವೇಳಾಪಟ್ಟಿಯೇ ಗೊಂದಲದಿಂದ ಕೂಡಿದೆ, ಪರೀಕ್ಷಾ ವ್ಯವಸ್ಥೆ, ಮೌಲ್ಯ ಮಾಪನ ಹದಗೆಟ್ಟು ಹೋಗಿದೆ. ಹೊಸ ಕೋರ್ಸ್ ಆವಿಷ್ಕಾರಗಳು ಆಗುತ್ತಿಲ್ಲ, ಪಿಜಿ ಕೋರ್ಸ್ ಪರಿಚಯಿಸುವಲ್ಲೂ ಹಿಂದಿದ್ದೇವೆ, ಪಿಜಿ ಕೋರ್ಸ್‌ಗಳಲ್ಲಿ ನಮ್ಮಲ್ಲಿ ಎಷ್ಟೇ ಕಷ್ಟಪಟ್ಟರೂ ಶೇ. 55 ಗಳಿಸಲು ಪರದಾಡಬೇಕು, ಆದರೆ ಖಾಸಗಿ ಕಾಲೇಜುಗಳಲ್ಲಿ ಸುಲಭವಾಗಿ ಶೇ. 80 ಗಳಿಸುತ್ತಾರೆ, ಹೀಗಾದರೆ ಸ್ವಾಯತ್ತ ಕಾಲೇಜುಗಳು, ಖಾಸಗಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳೊಂದಿಗೆ ನಮ್ಮ ವಿದ್ಯಾರ್ಥಿಗಳು ಪೈಪೋಟಿ ನೀಡುವುದು ಹೇಗೆ ಎಂದು ಡಾ| ಆಳ್ವ ಪ್ರಶ್ನಿಸಿದರು.
ಸಂಘದ ಉಪಾಧ್ಯಕ್ಷ ಪ್ರೊ| ವೈ. ಭಾಸ್ಕರ ಶೆಟ್ಟಿ ಮಾತನಾಡಿ, ನಮ್ಮ ದೂರು ದುಮ್ಮಾನಗಳನ್ನು ಅನುದಾನಿತ ಹಾಗೂ ಅನುದಾನಿತ ಖಾಸಗಿ ಕಾಲೇಜುಗಳೆಂಬ ಭೇದವಿಲ್ಲದೆ ಆದಷ್ಟು ತುರ್ತಾಗಿ ಮಂಗಳೂರು ವಿ.ವಿ.ಯ ಹಿರಿಯ ಅಧಿಕಾರಿಗಳ ಗಮನಕ್ಕೆ ತರೋಣ ಎಂದರು.
ವಿವೇಕಾನಂದ ಕಾಲೇಜಿನ ಆಡಳಿತ ಸಮಿತಿ ಅಧ್ಯಕ್ಷ ಡಾ| ಶ್ರೀಪತಿ ಕಲ್ಲೂರಾಯ, ಕಾರ್ಯದರ್ಶಿ ಪ್ರೊ| ಎ.ವಿ. ನಾರಾಯಣ, ಪದುವ ಕಾಲೇಜಿನ ಪ್ರಾಂಶುಪಾಲ ಫಾ| ಅರುಣ್ ವಿಲ್ಸನ್
ಲೋಬೊ ಉಪಸ್ಥಿತರಿದ್ದರು. ಕೆಥೋಲಿಕ್ ಶಿಕ್ಷಣ ಮಂಡಳಿ ಕಾರ್ಯದರ್ಶಿ ವಂ| ಆ್ಯಂಟನಿ ಎಂ. ಶೆರಾ ಸ್ವಾಗತಿಸಿದರು.