Advertisement

ವಿದೇಶಿ ಕನ್ನಡ ಸಂಘಗಳು ಕಸಾಪ ಅಂಗಸಂಸ್ಥೆಯಾಗಲಿವೆ

01:32 AM Feb 04, 2023 | Team Udayavani |

ಮಣಿಪಾಲ: ವಿದೇಶ ಗಳಲ್ಲಿ ಇರುವ ಕನ್ನಡ ಸಂಘಟನೆ ಗಳನ್ನು ಕನ್ನಡ ಸಾಹಿತ್ಯ ಪರಿಷತ್‌ನ ಅಂಗ ಸಂಸ್ಥೆಯಾಗಿ ಪರಿ ಗಣಿಸುವ ಯೋಜನೆ ರೂಪಿಸುತ್ತಿದ್ದೇವೆ. ಈ ಮೂಲಕ ವಿಶ್ವಮಟ್ಟದಲ್ಲಿ ಕನ್ನಡ ಸಂಘಟನೆಗೆ ಬಲ ನೀಡುವ ಉದ್ದೇಶ ಹೊಂದಿದ್ದೇವೆ ಎಂದು ಕಸಾಪ ರಾಜ್ಯಾಧ್ಯಕ್ಷ ಡಾ| ಮಹೇಶ್‌ ಜೋಷಿ ಹೇಳಿದರು.

Advertisement

ಶುಕ್ರವಾರ ಉದಯವಾಣಿ ಕಚೇರಿಯಲ್ಲಿ ಸಂವಾದದಲ್ಲಿ ಮಾತನಾಡಿದ ಅವರು, ವಿದೇಶ ದಲ್ಲಿರುವ ಎಲ್ಲ ಕನ್ನಡಿಗರನ್ನು ಒಂದಾಗಿಸಲು ಅಲ್ಲಿರುವ ಕನ್ನಡ ಸಂಘಟನೆಗಳನ್ನು ಕಸಾಪ ಅಂಗ ಸಂಸ್ಥೆ ಆಗಿಸಿ, ಅಲ್ಲಿರುವವರನ್ನು ಸದಸ್ಯರನ್ನಾಗಿ ಮಾಡಲಿದ್ದೇವೆ. ವಿದೇಶದಲ್ಲಿ ಕನ್ನಡಿಗರಿಗೆ ಏನೇ ಆದರೂ ಪರಿಷತ್‌ ನಮ್ಮ ಜತೆ ಇರಲಿದೆ ಎಂಬ ನಂಬಿಕೆ ಅವರಲ್ಲಿ ಬರಲಿದೆ ಎಂದು ಹೇಳಿದರು.

ಸಹೋದರ ಭಾಷೆಗಳು ಬೇಕು
ಕನ್ನಡದ ಸಹೋದರ ಭಾಷೆಗಳನ್ನು ಜತೆ ಜತೆಗೆ ತೆಗೆದುಕೊಂಡು ಹೋಗಲಿದ್ದೇವೆ. ಕನ್ನಡದ ಜತೆಗೆ ತುಳು, ಕೊಂಕಣಿಯೂ ಬೆಳೆಯಬೇಕು. ತುಳು, ಕೊಂಕಣಿಯನ್ನು ಬರೆಯು ವಾಗ ಬಹುಪಾಲು ಕನ್ನಡವನ್ನೇ ಬಳಸುತ್ತಾರೆ. ಹೀಗಾಗಿ ಸಹೋದರ ಭಾಷೆಯ ಜತೆಗೆ ಸೇರಿಕೊಂಡು ಹೋಗುತ್ತೇವೆ. ನಮ್ಮಲ್ಲಿ ಸ್ಪರ್ಧೆಯಿಲ್ಲ.

ಕನ್ನಡ ಉಳಿಯಬೇಕು
ಕನ್ನಡ ಶಾಲೆಗಳು ಮುಚ್ಚಬಾರದು. ಕನ್ನಡ ಶಾಲೆ ಉಳಿಯದೇ ಇದ್ದಲ್ಲಿ, ಮುಂದಿನ 6-8 ವರ್ಷದಲ್ಲಿ ಕನ್ನಡವೇ ಮಾಯವಾಗಲಿದೆ ಎಂದರು.

ಸಮಗ್ರ ಕನ್ನಡ ಭಾಷೆ ಅಭಿವೃದ್ಧಿ ಮಸೂದೆಯನ್ನು ಬಜೆಟ್‌ ಅಧಿವೇಶನದಲ್ಲಿ ಮಂಡಿಸಲು ಸರಕಾರಕ್ಕೆ ಒತ್ತಡ ಹೇರಿದ್ದೇವೆ. ಇದರಿಂದ ಕನ್ನಡ ಅನ್ನದ ಭಾಷೆಯಾಗಲಿದೆ. ಕನ್ನಡಿಗ ರಿಗೆ ಹೆಚ್ಚಿನ ಉದ್ಯೋಗ ಸಿಗಲಿದೆ. ಶಿಕ್ಷಣ, ವ್ಯಾಪಾರ, ನ್ಯಾಯಾಲಯ ಸಹಿತವಾಗಿ ಎಲ್ಲೆಡೆಯಲ್ಲೂ ಕನ್ನಡ ಬರಲಿದೆ. ಕನ್ನಡ, ಕನ್ನಡಿಗ ಹಾಗೂ ಕರ್ನಾಟಕ ಅಭಿವೃದ್ಧಿ, ರಕ್ಷಣೆಗೆ ಪರಿಷತ್‌ ಬದ್ಧವಾಗಿದೆ.

Advertisement

ಮುಂದಿನ ನಾಲ್ಕು ವರ್ಷದ ಅವಧಿಯಲ್ಲಿ ಸಾಹಿತ್ಯ ಪರಿಷತ್ತಿನ ಸದಸ್ಯರ ಸಂಖ್ಯೆ ಕನಿಷ್ಠ 1 ಕೋಟಿ ಹೊಂದುವ ಗುರಿಯಿದೆ. ಇದರಲ್ಲಿ ಶೇ.60ರಷ್ಟು ಯುವ ಜನತೆ ಇರಬೇಕು. ಇದಕ್ಕಾಗಿ ತಂತ್ರಜ್ಞಾನವನ್ನು ಪೂರ್ಣ ಪ್ರಮಾಣದಲ್ಲಿ ಅಳವಡಿಸಿಕೊಳ್ಳುತ್ತಿದ್ದೇವೆ. ಮುಂದೆ ಚುನಾವಣೆಯನ್ನು ಖರ್ಚು ರಹಿತವಾಗಿ ಓಟಿಪಿ ಆಧಾರಿತವಾದ ಆ್ಯಪ್‌ ಮೂಲಕ ಮಾಡುವ ಯೋಜನೆಯಲ್ಲಿದೆ ಎಂದರು.

ಮಂಡ್ಯದಲ್ಲೇ ಸಮ್ಮೇಳನ
2023-24ನೇ ಆರ್ಥಿಕ ವರ್ಷದಲ್ಲಿ ಮಂಡ್ಯದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲಿದ್ದೇವೆ. ವಿಶ್ವ ಕನ್ನಡ ಸಮ್ಮೇಳನವನ್ನು ನಡೆಸಲು ಯೋಜನೆ ಹಾಕಿದ್ದೇವೆ ಎಂದರು.

ಕಸಾಪ ನಡೆ ಕಾಲೇಜು ಕಡೆ
ಯುವಕರನ್ನು ಸಾಹಿತ್ಯ ಹಾಗೂ ಕನ್ನಡ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಕಸಾಪ ನಡಿಗೆ ವಿಶ್ವವಿದ್ಯಾಲಯ, ಕಾಲೇಜು ಕಡೆಗೆ ಕಾರ್ಯಕ್ರಮ ಆರಂಭಿಸಲಿದ್ದೇವೆ ಎಂದರು.

ಕೇಂದ್ರ ಸರಕಾರದ ಕೆಲವು ಉದ್ಯಮಗಳಲ್ಲಿ ಹಿಂದಿ ಹೇರಿಕೆಯಿದೆ. ಭಾಷೆ ಉಳಿಸುವ ನಿಟ್ಟಿನಲ್ಲಿ ಕೋರ್ಟ್‌ಗೆ ಹೋಗಲು ಹಿಂಜರಿ ಯುವುದಿಲ್ಲ. ಕನ್ನಡ ಬಾವುಟದ ಸ್ಥಾನಮಾನ ವಿಷಯದಲ್ಲಿ ಸರಕಾರ ನಿರ್ಧಾರ ತೆಗೆದು ಕೊಳ್ಳಬೇಕು. ರಾಜ್ಯಕ್ಕೆ ಪ್ರತ್ಯೇಕ ಬಾವುಟ ಬೇಕು ಎಂದರು.

 

Advertisement

Udayavani is now on Telegram. Click here to join our channel and stay updated with the latest news.

Next