ಮಂಗಳೂರು: ಐಕಳಬಾವ ಕಾಂತಾಬಾರೆ ಬೂದಾಬಾರೆ ಕುಂಬಳ ಸಮಿತಿ, ಐಕಳ ಮತ್ತು ಮುಂಬಯಿ ವತಿಯಿಂದ ಫೆ. 26ರಂದು ನಡೆಯುವ ಐಕಳ ಕಂಬಳ್ಳೋತ್ಸವದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಅಧ್ಯಕ್ಷ ಡಾ| ಎಂ.ಎನ್. ರಾಜೇಂದ್ರ ಕುಮಾರ್ ಅವರಿಗೆ “ಸಾಧನ ಚಕ್ರವರ್ತಿ’ ಪ್ರಶಸ್ತಿ ನೀಡಲಾಗುವುದು ಎಂದು ಕಂಬಳ್ಳೋತ್ಸವ ಸಮಿತಿಯ ಅಧ್ಯಕ್ಷ ಐಕಳಬಾವ ದೇವಿಪ್ರಸಾದ್ ಶೆಟ್ಟಿ ಬೆಳಪು ತಿಳಿಸಿದ್ದಾರೆ.
ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ 28 ವರ್ಷಗಳಿಂದ ಸಹಕಾರ ಕ್ಷೇತ್ರದಲ್ಲಿ ಸಾರ್ಥಕ ಸೇವೆ ಸಲ್ಲಿಸುತ್ತಿರುವ ಡಾ| ರಾಜೇಂದ್ರ ಕುಮಾರ್ ಬ್ಯಾಂಕನ್ನು “ಜನಸ್ನೇಹಿ’ ಬ್ಯಾಂಕನ್ನಾಗಿ ರೂಪಿಸಿದ ಹೆಗ್ಗಳಿಕೆಗೆ ಪಾತ್ರರಾಗಿರುವರು. ಗ್ರಾಮೀಣ ಪ್ರದೇಶಗಳಲ್ಲಿ ಬ್ಯಾಂಕಿಂಗ್ ಸೇವೆಯ ಪರಿಕಲ್ಪನೆಯನ್ನು ಅನುಷ್ಠಾನಗೊಳಿಸಿ ಸಹ ಕಾರಿ ರಂಗಕ್ಕೆ ಹೊಸ ಆಯಾ ಮವನ್ನು ತಂದು ಕೊಟ್ಟವರು. ಕೋರ್ ಬ್ಯಾಂಕಿಂಗ್ ನಂತಹ ಉತ್ಕೃಷ್ಟ ತಂತ್ರಜ್ಞಾನವನ್ನು ಎಸ್‌ಸಿಡಿಸಿಸಿ ಬ್ಯಾಂಕ್‌ನಲ್ಲಿ ಅಳವಡಿಸಿದ್ದಾರೆ. ಸುಸಜ್ಜಿತ ವಾಹನದಲ್ಲಿ ಮೊಬೈಲ್ ಬ್ಯಾಂಕ್ ಸೇವೆಯನ್ನು ರಾಜ್ಯದ ಸಹಕಾರಿ ರಂಗದಲ್ಲಿ ಮೊದಲ ಬಾರಿಗೆ ಪರಿಚಯಿಸಿದವರು ಅವರು ಎಂದು ಪ್ರಕಟನೆ ತಿಳಿಸಿದೆ.
ರಾಜೇಂದ್ರ ಕುಮಾರ್ ಅವರ ಸಾಮಾಜಿಕ ಸ್ಪಂದನೆಯ ಕಾರ್ಯಗಳನ್ನು ಪರಿಗಣಿಸಿ ಅವರಿಗೆ ಹಲವಾರು ರಾಷ್ಟ್ರೀಯ – ಅಂತಾರಾಷ್ಟ್ರೀಯ ಪ್ರಶಸ್ತಿಗಳು ಲಭಿಸಿವೆ. ಇತ್ತೀಚೆಗೆ ಶ್ರೀಲಂಕಾದ ಕೊಲಂಬೊದಲ್ಲಿ “ಇಂಟರ್ ನ್ಯಾಶನಲ್ ಐಕಾನ್ ಅವಾರ್ಡ್’ ಕೂಡ ಲಭಿಸಿದೆ. ಮಾತ್ರವಲ್ಲ ಶ್ರೀಲಂಕಾದ ಕೊಲಂಬೊ ಮುಕ್ತ ವಿಶ್ವವಿದ್ಯಾಲಯ “ಗೌರವ ಡಾಕ್ಟರೆಟ್’, ಕರ್ನಾಟಕ ಸರಕಾರದಿಂದ “ಸಹಕಾರ ರತ್ನ’ ಪ್ರಶಸ್ತಿ, “ಸಹಕಾರ ವಿಶ್ವ ಬಂಧುಶ್ರೀ ಅಂತಾ ರಾಷ್ಟ್ರೀಯ ಪ್ರಶಸ್ತಿ’, “ಮದರ್ ತೆರೆಸಾ ಸದ್ಭಾ ವನಾ ಪ್ರಶಸ್ತಿ’, “ಮಹಾತ್ಮಾ ಗಾಂಧಿ ಸಮ್ಮಾನ್ ಪ್ರಶಸ್ತಿ’ , “ಬೆಸ್ಟ್ ಚೇರ್‌ಮನ್ ನ್ಯಾಶನಲ್ ಎವಾರ್ಡ್’, “ನ್ಯಾಷನಲ್ ಎಕ್ಸಲೆನ್ಸ್ ಎವಾರ್ಡ್’, “ಔಟ್ ಸ್ಟೆಂಡಿಂಗ್ ಗ್ಲೋಬಲ್ ಲೀಡರ್‌ಶಿಪ್ ಅವಾರ್ಡ್ -2019′ ,”ಬಹು ಪ್ರಭಾವಶಾಲಿ ಸಹಕಾರ ನಾಯಕ -2019ರ ಪ್ರಶಸ್ತಿ’ ಹೀಗೆ ಹತ್ತು ಹಲವು ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರಶಸ್ತಿಗಳು ಇವರಿಗೆ ಸಂದಿವೆ.
ಎಸ್‌ಸಿಡಿಸಿಸಿ ಬ್ಯಾಂಕಿನ ಅಧ್ಯಕ್ಷ ರಾದ ಬಳಿಕ ಬ್ಯಾಂಕಿಗೆ 19 ಬಾರಿ ರಾಜ್ಯ ಅಪೆಕ್ಸ್ ಬ್ಯಾಂಕ್ ಪ್ರಶಸ್ತಿ ಹಾಗೂ 18 ಬಾರಿ ನಬಾರ್ಡ್ ಪ್ರಶಸ್ತಿ, ಬ್ಯಾಂಕಿಂಗ್ ಪ್ರೋಂಟಿಯರ್ಸ್ ಪ್ರಶಸ್ತಿ ಹಾಗೂ ಬ್ಯಾಂಕೊ ಬ್ಲೂ ರಿಬ್ಬನ್ ಪ್ರಶಸ್ತಿ ತಲಾ ಎರಡು ಬಾರಿ ಲಭಿಸಿದೆ.