ವಿಜಯಪುರ: ಯುನೆಸ್ಕೋ ಜೀವ ವಿಜ್ಞಾನ ಪೀಠದ ಮುಖ್ಯಸ್ಥರಾಗಿ ವಿಜಯಪುರ ಬಿ.ಎಲ್.ಡಿ.ಇ. ಡೀಮ್ಡ್ ವಿಶ್ವವಿದ್ಯಾಲಯ ಪ್ರಾಧ್ಯಾಪಕ ಡಾ. ಕುಶಾಲ ದಾಸ್ ನೇಮಕಗೊಂಡಿದ್ದಾರೆ.
ಇದರೊಂದಿಗೆ ಏಷ್ಯಾ ಖಂಡದಲ್ಲೇ ಈ ಸ್ಥಾನದ ಗೌರವ ಪಡೆದ ಮೊದಲಿಗ ಎಂಬ ಹಿರಿಮೆಗೂ ಪಾತ್ರರಾಗಿದ್ದಾರೆ
ಜೀವ ವಿಜ್ಞಾನ ಪೀಠದಡಿ ಅಮೇರಿಕಾ, ಇಂಗ್ಲೆಂಡ್ ಸೇರಿದಂತೆ 18 ದೇಶಗಳ ವಿವಿಧ ವಿಶ್ವವಿದ್ಯಾನಿಲಯಗಳಿಗೆ ಸ್ನಾತಕೋತ್ತರ ಮತ್ತು ಪಿ.ಎಚ್.ಡಿ ಪಠ್ಯಕ್ರಮವನ್ನು ಸಿದ್ಧಪಡಿಸುವುದು ಸೇರಿದಂತೆ ಜೀವ ವಿಜ್ಞಾನ ಕ್ಷೇತ್ರದಲ್ಲಿ ಯುನೆಸ್ಕೋ ಕೈಗೊಳ್ಳಬೇಕಾದ ಹಲವು ಕ್ರಮಗಳನ್ನು ನೋಡಿಕೊಳ್ಳುವುದು ಈ ಹುದ್ದೆಯ ಜವಾಬ್ದಾರಿಯಾಗಿರಲಿದೆ.
ಈ ಹುದ್ದೆಗೆ ನೇಮಕಗೊಂಡ ಏಷ್ಯಾದ ಮೊದಲ ವ್ಯಕ್ತಿ ಡಾ.ಕುಶಾಲ ದಾಸ್ ಆಗಿದ್ದು, ಪಠ್ಯಕ್ರಮದ ಜೊತೆಗೆ ಸಾರ್ವಜನಿಕ ಆರೋಗ್ಯ ಮತ್ತು ಪರಿಸರ ಸಮಸ್ಯೆಗಳನ್ನು ಪರಿಹರಿಸಲು ಈ ಪೀಠ ಮಾರ್ಗದರ್ಶನ ಮಾಡುತ್ತಲಿದೆ.
ಡಾ.ಕುಶಾಲ ದಾಸ್ ನೇಮಕ ಭಾರತೀಯ ವಿಜ್ಞಾನಿಯೊಬ್ಬರಿಗೆ ನೀಡಿದ ಗೌರವ ಎಂದು ಬಿ.ಎಲ್.ಡಿ.ಇ ಅಧ್ಯಕ್ಷ ಎಂ.ಬಿ.ಪಾಟೀಲ, ಡೀಮ್ಡ್ ವಿಶ್ವವಿದ್ಯಾಲಯದ ಉಪಕುಪತಿ ಡಾ.ಎಂ.ಎಸ್.ಬಿರಾದಾರ ಅವರು ಬಣ್ಣಿಸಿದ್ದಾರೆ.