Advertisement
ಕೋವಿಡ್ ನಿರ್ವಹಣೆ ಕುರಿತ ಅಧಿಕಾರಿಗಳು ಮತ್ತು ತಜ್ಞರ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ.19 ರವರೆಗೆ ಬೆಂಗಳೂರಿನಲ್ಲಿ 13.20 ಲಕ್ಷ ಪರೀಕ್ಷೆ ಮಾಡಲಾಗಿದೆ. ಒಂದೇ ತಿಂಗಳಲ್ಲಿ 22.90 ಲಕ್ಷ ಪರೀಕ್ಷೆ ಮಾಡಲಾಗಿದೆ. ಅಂದರೆ, ಪರೀಕ್ಷಾ ಸಾಮರ್ಥ್ಯವನ್ನು ಶೇ.73 ರಷ್ಟು ಹೆಚ್ಚಿಸಲಾಗಿದೆ. ಕಳೆದ ತಿಂಗಳಿಗೆ ಹೋಲಿಸಿದರೆ, 9.70 ಲಕ್ಷದಷ್ಟು ಪರೀಕ್ಷೆ ಹೆಚ್ಚಿಸಲಾಗಿದೆ. ಮುಂಬೈ, ಚೆನ್ನೈ, ಅಹಮದಾಬಾದ್, ದೆಹಲಿ ನಗರಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲಿ ಪರೀಕ್ಷೆ ಅತಿ ಹೆಚ್ಚಿದೆ. ಬೇರೆ ನಗರಗಳ ಸರಾಸರಿ ಪರೀಕ್ಷಾ ಹೆಚ್ಚಳ ಪ್ರಮಾಣ ಶೇ.49 ರಷ್ಟಿದೆ ಎಂದು ವಿವರಿಸಿದರು.
Related Articles
Advertisement
ಇಡೀ ದೇಶದಲ್ಲಿ ಕರ್ನಾಟಕದಲ್ಲಿ ದೊಡ್ಡ ಸಂಖ್ಯೆಯಲ್ಲಿ ಕೋವಿಡ್ ಪರೀಕ್ಷೆ ಮಾಡಲಾಗುತ್ತಿದೆ. ಆರ್ ಟಿಪಿಸಿಆರ್ 80 ಸಾವಿರ, ಆಂಟಿಜೆನ್ ಪರೀಕ್ಷೆ 30-40 ಸಾವಿರದಷ್ಟು ಆಗುತ್ತಿದೆ. ಹಬ್ಬದ ಸಮಯದಲ್ಲಿ ಜನರು ಕೋವಿಡ್ ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸೋಂಕು ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಮುಂದಿನ ಮೂರು ತಿಂಗಳು ಚಳಿಗಾಲ ಮತ್ತು ಹಬ್ಬಗಳು ಇವೆ. ಈ ಹಂತದಲ್ಲಿ ಎಚ್ಚರ ತಪ್ಪಬಾರದು ಎಂದರು.
ಜನವರಿಯಲ್ಲಿ ಲಸಿಕೆ ಸಿಗುವ ಸಾಧ್ಯತೆ ಇದೆ. ಅಲ್ಲಿಯವರೆಗೆ ಜನರು ಸಹಕಾರ ನೀಡಬೇಕು. ಲಸಿಕೆ ಬಂದ ಬಳಿಕ ಅದನ್ನು ಹೇಗೆ ಮತ್ತು ಮೊದಲು ಯಾರಿಗೆ ವಿತರಿಸಬೇಕು ಎಂದು ತಜ್ಞರ ಜೊತೆ ಸಮಾಲೋಚಿಸಲಾಗುವುದು. ಕೆಲವರು ಪರೀಕ್ಷೆ ವೇಳೆ ತಪ್ಪು ಮಾಹಿತಿ ನೀಡಿ, ವಂಚನೆ ಮಾಡಿಕೊಳ್ಳುತ್ತಿದ್ದಾರೆ. ಅಂತಹವರಿಗೆ ಸರ್ಕಾರದಿಂದ ಉಚಿತ ಚಿಕಿತ್ಸೆ ಕೂಡ ಸಿಗದಂತಾಗುತ್ತದೆ ಎಂದು ಹೇಳಿದರು.
ನಿರ್ದಾಕ್ಷಿಣ್ಯ ಕ್ರಮ : ಕೆಲ ಖಾಸಗಿ ಆಸ್ಪತ್ರೆಗಳು ದಲ್ಲಾಳಿಗಳ ಮೂಲಕ ಹಾಸಿಗೆ ಹಂಚಿಕೆ ಮಾಡುವ ದೂರುಗಳಿವೆ. ಇದು ಗಮನಕ್ಕೆ ಬಂದರೆ ದೂರು ನೀಡಬೇಕು. ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ಸಚಿವ ಸುಧಾಕರ್ ಎಚ್ಚರಿಕೆ ನೀಡಿದ್ದಾರೆ.