Advertisement

ಕರ್ನಾಟಕದಲ್ಲೂ ಏಮ್ಸ್‌ ಮಾದರಿ ಆಸ್ಪತ್ರೆ: ಡಾ|ಹರ್ಷವರ್ಧನ

02:14 AM Sep 01, 2020 | Hari Prasad |

ಬಳ್ಳಾರಿ: ಬಿಜೆಪಿ ನೇತೃತ್ವದಲ್ಲಿ ಏಮ್ಸ್‌ ಮಾದರಿಯ 6 ಆಸ್ಪತ್ರೆಗಳನ್ನು ದೇಶದ ವಿವಿಧೆಡೆ ಆರಂಭಿಸಲಾಗಿದೆ.

Advertisement

ಇದೇ ರೀತಿಯ ಮತ್ತೊಂದು ಆಸ್ಪತ್ರೆಯನ್ನು ಕರ್ನಾಟಕದಲ್ಲಿ ಆರಂಭಿಸಲು ನಿರ್ಧರಿಸಲಾಗಿದ್ದು, ಈ ಯೋಜನೆ ಹಣಕಾಸು ಇಲಾಖೆ ಮುಂದಿದೆ.

ಮತ್ತು ಇದಕ್ಕೆ ಶೀಘ್ರವೇ ಅನುಮತಿ ದೊರೆಯಲಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ| ಹರ್ಷವರ್ಧನ ತಿಳಿಸಿದರು.

ನಗರದ ಟಿಬಿ ಸ್ಯಾನಿಟೋರಿಯಂ ಆಸ್ಪತ್ರೆ ಆವರಣದಲ್ಲಿ ಪ್ರಧಾನಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆಯಡಿ 150 ಕೋ. ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸೂಪರ್‌ ಸ್ಪೆಷಾಲಿಟಿ ಟ್ರಾಮಾಕೇರ್‌ (ತುರ್ತು ಚಿಕಿತ್ಸಾ ಘಟಕ) ಸೆಂಟರ್‌ ಆಸ್ಪತ್ರೆಯನ್ನು ಸಿಎಂ ಬಿ.ಎಸ್‌.ಯಡಿಯೂರಪ್ಪ ಅವರೊಂದಿಗೆ ವರ್ಚ್ಯುವಲ್‌ ತಂತ್ರಜ್ಞಾನದ ಮೂಲಕ ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.

ಮಾಜಿ ಪ್ರಧಾನಿ ವಾಜಪೇಯಿ ಅವರು 2003ರಲ್ಲಿ ಏಮ್ಸ್‌ ಮಾದರಿ ಆಸ್ಪತ್ರೆಗಳನ್ನು ದೇಶದ ಹಲವೆಡೆ ಆರಂಭಿಸಲು ನಿರ್ಧರಿಸಿದ್ದರು. ಕಳೆದ ವರ್ಷ ರಾಯಬರೇಲಿ ಸಹಿತ 7 ಕಡೆ ನಿರ್ಮಿಸಲಾಗಿದೆ. ಈ ಬಾರಿ ಕರ್ನಾಟಕಕ್ಕೂ ಒಂದು ಮಂಜೂರಾಗಲಿದೆ.

Advertisement

ಪ್ರಧಾನಿ ಮೋದಿ ಆಶಯದಂತೆ ದೇಶದಲ್ಲಿ 22 ಏಮ್ಸ್‌ ಆಸ್ಪತ್ರೆಗಳನ್ನು ಆರಂಭಿಸಲು ಉದ್ದೇಶಿಸಲಾಗಿದೆ ಎಂದರು.
ಈ ವರ್ಷ ಕರ್ನಾಟಕದಲ್ಲಿ ಚಿಕ್ಕಬಳ್ಳಾಪುರ, ಯಾದಗಿರಿ, ಚಿಕ್ಕಮಗ ಳೂರು ಸಹಿತ ನಾಲ್ಕು ಕಡೆಗಳಲ್ಲಿ ವೈದ್ಯಕೀಯ ಕಾಲೇಜು ಆರಂಭಿಸಲು ಉದ್ದೇಶಿಸಲಾಗಿದೆ ಎಂದರು.

ಗೃಹ ಕಚೇರಿ ‘ಕೃಷ್ಣಾ’ದಿಂದ ವರ್ಚ್ಯುವಲ್‌ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮುಖ್ಯಮಂತ್ರಿ ಯಡಿಯೂರಪ್ಪ, ಈ ಆಸ್ಪತ್ರೆಯು ಬಳ್ಳಾರಿ ಮತ್ತು ಸುತ್ತಮುತ್ತಲಿನ ಜಿಲ್ಲೆಗಳು, ನೆರೆಯ ಆಂಧ್ರದ ರೋಗಿಗಳಿಗೆ ಸಂಜೀವಿನಿಯಾಗಲಿದೆ ಎಂದರು.

ವಿಮ್ಸ್‌ನ ನೂತನ ಸಿಟಿ ಸ್ಕ್ಯಾನಿಂಗ್‌ ಸೇವೆಗೆ ಸಚಿವ ಡಾ| ಕೆ. ಸುಧಾಕರ್‌ ಚಾಲನೆ ನೀಡಿದರು. ಕೇಂದ್ರ ಆರೋಗ್ಯ ಖಾತೆ ರಾಜ್ಯ ಸಚಿವ ಅಶ್ವಿ‌ನ್‌ ಕುಮಾರ್‌ ಚೌಬೆ ಇತರರು ಉಪಸ್ಥಿತರಿದ್ದರು.

ಡಾ| ಸುಧಾಕರ್‌ಗೆ ಕೇಂದ್ರ ಸಚಿವರ ಮೆಚ್ಚುಗೆ
ವರ್ಚ್ಯುವಲ್‌ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕೇಂದ್ರ ಸಚಿವ ಡಾ| ಹರ್ಷವರ್ಧನ್‌ ಅವರು ಕೋವಿಡ್ ನಿರ್ವಹಣೆಗೆ ಸಂಬಂಧಪಟ್ಟಂತೆ ಸಚಿವ ಡಾ| ಕೆ.ಸುಧಾಕರ್‌ ಕೈಗೊಂಡಿರುವ ಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕೋವಿಡ್‌ ನಿರ್ವಹಣೆಗೆ ಕರ್ನಾಟಕ ಕೈಗೊಂಡಿರುವ ಕ್ರಮಗಳನ್ನು ಅನುಸರಿಸುವಂತೆ ಇತರ ರಾಜ್ಯಗಳಿಗೆ ಪ್ರತ್ಯೇಕ ಸಭೆಗಳಲ್ಲಿ ಸೂಚಿಸಿದ್ದೇನೆ ಎಂದರು. ನಿಮ್ಮ ಮೆಚ್ಚುಗೆಯ ಮಾತುಗಳು ಕೋವಿಡ್‌ ವಿರುದ್ಧ ಹೋರಾಟವನ್ನು ಇನ್ನಷ್ಟು ತೀವ್ರವಾಗಿ ನಡೆಸಲು ಸ್ಫೂರ್ತಿಯಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next