Advertisement
ಹೆಬ್ರಿ ಬೀಡಿನ ಪ್ರಪುಲ್ಲಾ ಹೆಗ್ಡೆ ಮತ್ತು ಬೇಳಂಜೆ ಸಂಜೀವ ಹೆಗ್ಡೆಯವರ ಐವರು ಪುತ್ರರಲ್ಲಿ ಡಾ| ಎಚ್.ಎಸ್. ಬಲ್ಲಾಳ್ ಹಿರಿಯರು. ಎಲ್ಲ ಸಹೋದರರೂ ವೈದ್ಯರು. ಉಡುಪಿಯ ಕ್ರಿಶ್ಚಿಯನ್ ಹೈಸ್ಕೂಲಿನಲ್ಲಿ ಮಾಧ್ಯಮಿಕ, ಎಂಜಿಎಂನಲ್ಲಿ ಪಿಯುಸಿ, ಮೈಸೂರಿನ ವೈದ್ಯಕೀಯ ಕಾಲೇಜಿನಿಂದ ವೈದ್ಯಕೀಯ ಪದವಿ, ಬೆಂಗಳೂರಿನ ವೈದ್ಯಕೀಯ ಕಾಲೇಜಿನಿಂದ ರೇಡಿ ಯಾಲಜಿಯಲ್ಲಿ ಸ್ನಾತಕೋತ್ತರ ಪದವಿ ಪಡೆದು ಮುಂದೆ ಅಮೆರಿಕದ ಮುಸೊರಿಯಲ್ಲಿರುವ ಸೈಂಟ್ ಲೂವಿಸ್ ವಿ.ವಿ.ಯಲ್ಲಿ ಆಲ್ಟ್ರಾ ಸೌಂಡ್ ಮತ್ತು ಸಿ.ಟಿ.ಸ್ಕ್ಯಾನ್‌ನಲ್ಲಿ ವಿಸ್ತೃತ ಜ್ಞಾನ ಗಳಿಸಿದರು.
1971ರಲ್ಲಿ ಮಂಗಳೂರಿನ ಕೆಎಂಸಿಯಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ವೃತ್ತಿ ಜೀವನ ಆರಂಭಿಸಿ, ಮುಂದೆ ವಿಭಾಗ ಮುಖ್ಯಸ್ಥರಾಗಿ, ಅಸೋಸಿಯೇಟ್ ಡೀನ್ ಮತ್ತು ಡೀನ್ ಆಗಿ ಪದೋನ್ನತಿ ಪಡೆದರು. ಅನಂತರ ಮಣಿಪಾಲ ಮಾಹೆ ಕುಲಪತಿಯಾಗಿ 2003ರಲ್ಲಿ ಅಧಿಕಾರ ಸ್ವೀಕರಿಸಿದರು. 2007ರಲ್ಲಿ ಪ್ರಥಮ ಸಹಕುಲಾಧಿಪತಿಯಾದರು. ಇಂದು 57 ದೇಶಗಳ 34,000 ವಿದ್ಯಾರ್ಥಿಗಳು, 11,000 ಉದ್ಯೋಗಿ ಗಳು, 5,000 ಆಸ್ಪತ್ರೆ ಬೆಡ್‌ಗಳು, 300 ಕ್ಕೂ ಹೆಚ್ಚು ವಿಷಯಗಳಲ್ಲಿ ಡಿಪ್ಲೊಮಾ, ಸ್ನಾತಕ, ಸ್ನಾತಕೋತ್ತರ ಮತ್ತು ಪಿಎಚ್.ಡಿ. ಪದವಿ ನೀಡುವ ಬೃಹತ್ ಸಂಸ್ಥೆಯನ್ನು ಡಾ| ಬಲ್ಲಾಳರು ಡಾ| ರಾಮದಾಸ ಪೈ ಅವರ ಮಾರ್ಗದರ್ಶನದಲ್ಲಿ ಮುನ್ನಡೆ ಸುತ್ತಿದ್ದಾರೆ. 2017ರಲ್ಲಿ ಮಣಿಪಾಲ ವಿ.ವಿ. ಭಾರತ ಸರಕಾರದಿಂದ ಇನ್‌ಸ್ಟಿಟ್ಯೂಟ್ ಆಫ್ ಎಮಿನೆನ್ಸ್ ಎಂಬ ಪ್ರತಿಷ್ಠಿತ ಗೌರವಕ್ಕೆ ಪಾತ್ರವಾಗಿದೆ. ಇವರ ಆಡಳಿತಾವಧಿಯಲ್ಲಿ ಮಾಹೆ ಅನೇಕ ಸಾಧನೆಗಳನ್ನು, ವಿವಿಧ ಕ್ಯಾಂಪಸ್‌ಗಳಲ್ಲಿ ವಿಸ್ತರಣೆಯನ್ನೂ ಕಂಡಿದೆ. ಹಸುರೀಕರಣದ ಸಾಧನೆಗಳಿಂದ “ಗ್ರೀನ್ ಕ್ಯಾಂಪಸ್’ ಎಂದು ಘೋಷಿಸಲ್ಪಟ್ಟಿದೆ. ಡಾ| ಟಿ.ಎಂ.ಎ ಪೈಯವರಿಂದ ಸ್ಥಾಪಿಸಲ್ಪಟ್ಟ 30 ವಿದ್ಯಾಸಂಸ್ಥೆಗಳನ್ನು ಹೊಂದಿದ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಮಣಿಪಾಲ್‌ನ ಅಧ್ಯಕ್ಷರಾಗಿದ್ದಾರೆ.
Related Articles
Advertisement
ಅವರ ಕಾರ್ಯಸಾಧನೆಗಳನ್ನು ದಾಖಲಿಸಿ ಮಾಹೆ ಅಭಿನಂದನಾ ಗ್ರಂಥವನ್ನು ಪ್ರಕಟಿಸಿದೆ. ಯಕ್ಷಗಾನ ಕಲೆಯ ಅಭಿಮಾನಿಯಾದ ಅವರು ಸದಾ ಯಕ್ಷ ಕಲಾವಿದರಿಗೆ ಸಹಾಯ ಮಾಡುತ್ತಿದ್ದಾರೆ. ತಂದೆ ಬೇಳಂಜೆ ಸಂಜೀವ ಹೆಗ್ಡೆ ಅವರ ಹೆಸರಿನ ಟ್ರಸ್ಟ್ ಮೂಲಕ ವೈದ್ಯಕೀಯ ಸೇವೆಗಳನ್ನು ಗ್ರಾಮೀಣ ಪ್ರದೇಶದ ಜನರಿಗೆ ವಿಸ್ತರಿಸಿದ್ದಾರೆ.
ಡಾ| ಬಲ್ಲಾಳರ ಪತ್ನಿ ಇಂದಿರಾ ಎಸ್. ಬಲ್ಲಾಳರು ತಂಜಾವೂರು ಶೈಲಿಯ ವರ್ಣಚಿತ್ರ ಕಲಾವಿದೆ. ಅವರ ಕೃತಿಗಳು ಹಲವು ಪ್ರದರ್ಶನಗಳನ್ನು ಕಂಡಿದ್ದು, ಕುಟುಂಬಿಕರ ಮನೆಗಳಲ್ಲಿ ಅಲಂಕೃತಗೊಂಡಿವೆ.
ಸುಮಾರು 2 ವರ್ಷಗಳಿಂದ ಆಸ್ಪತ್ರೆಗಳು, ವಿದ್ಯಾ ಸಂಸ್ಥೆಗಳು, ಮುಚ್ಚಿದ್ದರೂ ಎಲ್ಲ ಸಿಬಂದಿ ವರ್ಗದವರಿಗೂ ಪೂರ್ಣ ಪ್ರಮಾಣದ ವೇತನ ಮತ್ತು ಸೌಲಭ್ಯಗಳನ್ನು ನೀಡಿರುವುದು ಮಣಿಪಾಲ ಸಮೂಹ ಸಂಸ್ಥೆಗಳ ಮಾನವೀಯ ಸ್ಪಂದನೆಗೆ ಸಾಕ್ಷಿ.“ಡಾ| ಮಾಧವ ಪೈ ಅವರ ದೂರದರ್ಶಿತ್ವ, ಡಾ| ರಾಮದಾಸ್ ಎಂ. ಪೈ, ವಸಂತಿ ಆರ್. ಪೈ ಮತ್ತು ಡಾ| ರಂಜನ್ ಆರ್. ಪೈ ಅವರ ಮಾರ್ಗದರ್ಶನ ಸ್ಮರಣೀಯ, ಅಂತೆಯೇ ಎಲ್ಲ ಸಿಬಂದಿಯ ಸಹಕಾರದಿಂದ ಈ ಸಾಧನೆ ಸಾಧ್ಯವಾಯಿತು’ ಎನ್ನುತ್ತಾರೆ
ಡಾ| ಎಚ್. ಎಸ್. ಬಲ್ಲಾಳ್. – ಭುವನ ಪ್ರಸಾದ ಹೆಗ್ಡೆ