Advertisement

“ಸೃಜನಾ’ದಿಂದ ಡಾ|ಗಿರಿಜಾ ಶಾಸ್ತ್ರೀ ಅವರ ಕೃತಿ ಬಿಡುಗಡೆ

11:17 AM Apr 30, 2019 | Vishnu Das |

ಮುಂಬಯಿ: ಮರಾಠಿಯ ಪ್ರಸಿದ್ಧ ಪ್ರಕಾಶಕರಾದ ರಾಜಾ ದೇಶು¾ಖ್‌ ಅವರು ಅಕ್ಷರಶಃ ಪು.ಶಿ.ರೇಗೆ ಅವರ ಬೆನ್ನು ಬಿದ್ದು “ಸಾವಿತ್ರಿ’ ಕಾದಂಬರಿಯನ್ನು ಬರೆಸಿಕೊಂಡರು. ಅದರ ಬೆಳವಣಿಗೆಯನ್ನು ಪ್ರತಿ ರಾತ್ರಿ ಪುಣೆಯಿಂದ ಟ್ರಂಕ್‌ ಕಾಲ್‌ ಮಾಡಿ ತಿಳಿದುಕೊಳ್ಳುತ್ತಿದ್ದರು. ಕಾಕಾ ಕಾಳೇಕರ್‌ ಅವರಿಂದ ಮೊದಲ್ಗೊಂಡು ಮರಾಠಿಯ ಅನೇಕ ವಿದ್ವಾಂಸರು ಸಾವಿತ್ರಿ ಯನ್ನು ಮೆಚ್ಚಿಕೊಂಡಿದ್ದರು. “ಸಾವಿತ್ರಿ’ ಆ ಕಾಲಕ್ಕೆ ಬಹಳ ಹೊಸ ರೂಪದ ಕಾದಂಬರಿಯಾಗಿತ್ತು. ಅದರ ಕಾವ್ಯಮಯ ಭಾಷೆಗೆ ಅದು ಹೆಸರಾಗಿದೆ. ಇಂದಿಗೂ ಇದರ ಅನೇಕ ರಂಗ ಪ್ರಯೋಗಗಳು, ಚರ್ಚೆಗಳು ನಡೆಯುತ್ತಿವೆ ಎಂದು ಇಂಡಿಯನ್‌ ಎಕನಾಮಿಕ್‌ ಸರ್ವೀಸ್‌ ಸಂಸ್ಥೆಯ ನಿವೃತ್ತ ಅಧಿಕಾರಿ ಮನೋಜ್‌ ಸಿ. ರೇಗೆ ಐಇಎಸ್‌ ಅವರು ಅಭಿಪ್ರಾಯಿಸಿದರು.

Advertisement

ಎ. 27ರಂದು ಸಂಜೆ ಮಾಟುಂಗಾ ಪೂರ್ವ ಮೈಸೂರು ಅಸೋಸಿಯೇಶನ್‌ ಮುಂಬಯಿ ಇದರ ಕಿರು ಸಭಾಗೃಹ‌ದಲ್ಲಿ ಕನ್ನಡ ಲೇಖಕಿಯರ ಬಳಗ ಮುಂಬಯಿ “ಸೃಜನಾ’ ಸಂಸ್ಥೆಯು ಆಯೋಜಿಸಿದ್ದ ಪು. ಶಿ. ರೇಗೆ ಮರಾಠಿ ಭಾಷೆಯಲ್ಲಿ ರಚಿತ ಡಾ| ಗಿರಿಜಾ ಶಾಸ್ತ್ರೀ ಅವರಿಂದ ಕನ್ನಡ ಭಾಷಾಂತರಗೊಂಡ “ಸಾವಿತ್ರಿ’ ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ತಮಿಳು, ಗುಜರಾತಿ, ಇಂಗ್ಲಿಷ್‌, ಹಿಂದಿಯೇ ಅಲ್ಲದೆ ಅನೇಕ ವಿದೇಶಿ ಭಾಷೆಗಳಲ್ಲೂ ಈ ಕಾದಂಬರಿ ಅನುವಾದಗೊಂಡಿದೆ. ಈಗ ಇದು ಕನ್ನಡಕ್ಕೂ ಬಂದಿರುವುದು ಅತ್ಯಂತ ಸಂತೋಷದ ಸಂಗತಿ ಎಂದು ಹೇಳಿ ಇದಕ್ಕೆ ಕಾರಣಕರ್ತರಾದ ಗಿರಿಜಾ ಶಾಸ್ತ್ರೀ ಅವರನ್ನು ಅಭಿನಂದಿಸಿ, ಸಾವಿತ್ರಿ ಕಾದಂಬರಿ ಹುಟ್ಟಿದ ಸಂದರ್ಭದ ಅನೇಕ ಸ್ವಾರಸ್ಯಕರ ಸಂಗತಿಗಳನ್ನು ಹಂಚಿಕೊಂಡರು.

ನಗರದ ಹಿರಿಯ ಸಾಹಿತಿ, ಸೃಜನಾ ಬಳಗದ ಮಾರ್ಗದರ್ಶಿ ಡಾ| ಸುನೀತಾ ಎಂ. ಶೆಟ್ಟಿ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಅತಿಥಿಗಳನ್ನು ಪ್ರಹ್ಲಾದ ದಿವಾಣಜಿ ಉಪಸ್ಥಿತರಿದ್ದು ಗೌರವಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಡಾ| ಸುನೀತಾ ಎಂ. ಶೆಟ್ಟಿ ಅವರು ಮಾತನಾಡಿ, ಅನುವಾದ ಕಾರ್ಯ ಎಂದರೆ ಅದು ಅನುಸೃಷ್ಟಿ ಎಂದೇ ಹೇಳಬಹುದು. ಕಾದಂಬರಿಗಳ ರೂಪಾಂತರ ಅಥವಾ ಭಾಷಾಂತರ ಸುಲಭದ ಮಾತಲ್ಲ. ಭಾಷಾಂತರದ ಕೆಲಸವು ಕಠಿನ ಮತ್ತು ಉತ್ಕೃಷ್ಟವಾದ ಕೆಲಸವಾಗಿದೆ. ಅನುವಾದಿತ “ಸಾವಿತ್ರಿ’ ಕೃತಿ ಉತ್ತಮವಾಗಿ ಮೂಡಿ ಬಂದಿದ್ದು, ಗಿರಿಜಾ ಶಾಸ್ತ್ರೀ ಅವರ ಬರಹ ಶೈಲಿಯೂ ಅಷ್ಟೇ ಚೆನ್ನಾಗಿದೆ. ಮೂಲ ಭಾಷೆಯಿಂದ ಇತರ ಭಾಷೆಗಳಿಗೆ ಅನುವಾದ ಮಾಡುವವರು ಹಲವು ವಿಶೇಷತೆಗಳನ್ನು ಅರಿತಿರಬೇಕು. ಆಗ ಮಾತ್ರ ಭಾಷಾಂತರ ಕಾರ್ಯ ಅರ್ಥಬದ್ಧವಾಗುತ್ತದೆ. ಗಿರಿಜಾ ಶಾಸ್ತ್ರೀ ಅವರು ಓರ್ವ ಉತ್ತಮ ಲೇಖಕಿ, ಸಂಶೋಧಕಿ, ಒಳ್ಳೆಯ ವಿಮರ್ಶಕಿ ಮತ್ತು ಅನುವಾದಕಿಯಾಗಿದ್ದಾರೆ. ಆದ್ದರಿಂದ ಈ

ಕೃತಿಯು ಅರ್ಥಪೂರ್ಣವಾಗಿ ಮೂಡಿಬಂದಿದೆ. ಅನುವಾದಕರು ಅವರ ಭಾಷೆಯಲ್ಲಿ ಮಾತ್ರವಲ್ಲದೆ ಎರಡೂ ಭಾಷೆಗಳಲ್ಲಿ
ಹಿಡಿತವಿದ್ದು ಸಹನೆವುಳ್ಳವರಾಗಿದ್ದಾಗ ಮಾತ್ರ ಕೃತಿಯೂ ಮೌಲಿಕವಾಗಿ ರೂಪುಗೊಳ್ಳುತ್ತದೆ. ಮೂಲಭಾಷೆಗೆ ಧಕ್ಕೆ ಯಾಗದಂತೆ ಅನುವಾದ ಕಾರ್ಯವಾದಾಗಲೇ ರೂಪಾಂತರಿತ ಕೃತಿ ಮಹತ್ವದ್ದಾಗುತ್ತದೆ ಎಂದರು.

Advertisement

ವಿಮರ್ಶಕಿ, ಲೇಖಕಿ, ಕವಯತ್ರಿ, “ಸಾವಿತ್ರೀ’ ಕಾದಂಬರಿ ಅನುವಾದಕಿ ಡಾ| ಗಿರಿಜಾ ಶಾಸ್ತ್ರೀ ಅವರು ಮಾತನಾಡಿ, ಮನೋಜ್‌ ರೇಗೆ, ಪ್ರಹ್ಲಾದ ದಿವಾಣಜಿ ಎಲೆಮರೆಯ ಕಾಯಿಯಂತಿದ್ದು, ಈ ಕೃತಿಯನ್ನು ರೂಪಿಸಲು ಸಹರಿಸಿದ ಫಲವಾಗಿ ಈ ಕೃತಿ ಸಾರಸ್ವತ ಲೋಕಕ್ಕೆ ಅರ್ಪಿಸುವಂತಾಗಿದೆ. ಅಂತೆಯೇ ಕನ್ನಡಕ್ಕೆ ಅನುವಾದಿಸಲು ಅನೇಕರ ಸಹಯೋಗವಿತ್ತು. ಇಂತಹ ಕೃತಿಯನ್ನು ರಚಿಸಿದ ನನಗೆ ತೃಪ್ತಿಯಿದೆ. ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳು ಎಂದರು.

ಈ ಸಂದರ್ಭದಲ್ಲಿ ಸೃಜನಾ ಬಳಗದ ಜತೆ ಗೌರವ ಕೋಶಾಧಿಕಾರಿ ಅನಿತಾ ಪಿ. ಪೂಜಾರಿ ತಾಕೋಡೆ, ಸದಸ್ಯೆಯರಾದ ಡಾ| ಮಮತಾ ರಾವ್‌, ಸುರೇಖಾ ಎಚ್‌. ದೇವಾಡಿಗ, ಡಾ| ಕರುಣಾಕರ ಶೆಟ್ಟಿ, ಆರ್‌ಜೆ ಕಾಲೇಜು ಘಾಟ್‌ಕೋಪರ್‌ ಕನ್ನಡ ವಿಭಾಗದ ನಿವೃತ್ತ ಮುಖ್ಯಸ್ಥ ಡಾ| ಕೆ. ರಘುನಾಥ್‌, ಡಾ| ವ್ಯಾಸರಾಯ ನಿಂಜೂರು, ಗುರುರಾಜ್‌ ಎನ್‌. ನಾಯಕ್‌, ಸುಧಾಕರ ಪೂಜಾರಿ, ನಾರಾಯಣ ರಾವ್‌, ಡಾ| ಜಿ. ಪಿ. ಕುಸುಮಾ, ಬಾಲಚಂದ್ರ ದೇವಾಡಿಗ, ಭೀಮರಾಯ ಚಿಲ್ಕ, ವಿವೇಕ್‌ ಎಸ್‌. ಶ್ಯಾನುಭಾಗ್‌ ಮತ್ತಿತರರು ಉಪಸ್ಥಿತರಿದ್ದರು.

ಸೃಜನಾ ಬಳಗದ ಗೌರವ ಕೋಶಾಧಿಕಾರಿ ಡಾ| ದಾûಾಯಣಿ ಯಡಹಳ್ಳಿ ಪ್ರಾರ್ಥನೆ ಗೈದರು. ಸೃಜನಾ ಸಂಚಾಲಕಿ ಮೀನಾ ಕಾಳಾವರ ಸ್ವಾಗತಿಸಿ ಪ್ರಸ್ತಾವನೆಗೈದರು. ಅಕ್ಷತಾ ದೇಶಪಾಂಡೆ ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಗೌರವ ಕಾರ್ಯದರ್ಶಿ ಹೇಮಾ ಸದಾನಂದ ಅಮೀನ್‌ ವಂದಿಸಿದರು. ಸಾಹಿತ್ಯಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

ಚಿತ್ರ-ವರದಿ: ರೋನ್ಸ್‌ ಬಂಟ್ವಾಳ್‌

Advertisement

Udayavani is now on Telegram. Click here to join our channel and stay updated with the latest news.

Next