ಸಿದ್ದಾಪುರ: ಸಮಾಜದಲ್ಲಿ ಬಹಳಷ್ಟು ಮಂದಿ ಶ್ರೀಮಂತರಿದ್ದಾರೆ. ದಾನ- ಧರ್ಮ ವಿಚಾರ ಬಂದಾಗ ಹಿಂದಕ್ಕೆ ಸರಿಯುತ್ತಾರೆ. ಆದರೆ ಡಾ| ಜಿ. ಶಂಕರ್ ಮಾತ್ರ ಸ್ವಂತಕ್ಕಿಂತ ಹೆಚ್ಚು ಸಮಾಜಕ್ಕಾಗಿ ಖರ್ಚು ಮಾಡಿ ಮಾದರಿಯಾಗಿದ್ದಾರೆ. ರಕ್ತದಾನ ಮತ್ತು ಆರೋಗ್ಯ ಶಿಬಿರದ ಮೂಲಕ ಆರೋಗ್ಯವಂತ ಸಮಾಜ ನಿರ್ಮಿಸಿದ್ದಾರೆ ಎಂದು ಮಣಿಪಾಲದ ಮಾಹೆಯ ಸಹಕುಲಾಧಿಪತಿ ಡಾ| ಎಚ್.ಎಸ್. ಬಲ್ಲಾಳ್ ಹೇಳಿದರು. ಅವರು ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಅಂಬಲಪಾಡಿ ಮತ್ತು ಶ್ಯಾಮಿಲಿ ಸಂಸ್ಥೆ ವತಿಯಿಂದ ಹಾಲಾಡಿಯಲ್ಲಿ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ನೂತನವಾಗಿ ನಿರ್ಮಿಸಿದ “ಶಾಲಿನಿ ಜಿ. ಶಂಕರ್ ಕನ್ವೆನ್ಶನ್ ಸೆಂಟರ್ ಮತ್ತು ಓಪನ್ ಗಾರ್ಡನ್ ಸಭಾಂಗಣವನ್ನು ಸೋಮವಾರ ಲೋಕಾರ್ಪಣೆಗೈದು ಮಾತನಾಡಿದರು.
ಶ್ರೀಮಂತರು ಸಂಪತ್ತು ಗಳಿಕೆಯ ಕನಸು ಕಂಡರೇ ಡಾ| ಜಿ. ಶಂಕರ್ ಸಮಾಜದ ಏಳಿಗೆಗಾಗಿ ದುಡಿಯುವ ಸೇವಾ ನಿಷ್ಠೆ ಹೊಂದಿದ್ದಾರೆ. ತಮ್ಮ ದುಡಿಮೆಯ ಬಹುಪಾಲನ್ನು ಗ್ರಾಮೀಣ ಭಾಗದ ಬಡ ಜನರ ಅಭಿವೃದ್ಧಿಗಾಗಿ ನೀಡಿದ್ದಾರೆ ಎಂದರು.
ವಿದ್ವಾನ್ ಕಬ್ಯಾಡಿ ಜಯರಾಮ ಆಚಾರ್ಯ ಮಾತನಾಡಿ, ಡಾ| ಜಿ. ಶಂಕರ್ ಅವರು ಧಾರ್ಮಿಕ, ಶೈಕ್ಷಣಿಕ, ವೈದ್ಯಕೀಯ ಸೇರಿದಂತೆ ಸಮಾಜ ಸೇವೆಗಾಗಿ ನೀಡಿದ ಕೊಡುಗೆಗಳು ಸರ್ವಶ್ರೇಷ್ಠವಾಗಿವೆ. ಪ್ರಸ್ತುತ 3 ಸಭಾಂಗಣಗಳನ್ನು ನಿರ್ಮಿಸಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನೂ ಎರಡು ಸಭಾಂಗಣಗಳನ್ನು ನಿರ್ಮಿಸುವ ಕನಸು ಹೊಂದಿದ್ದಾರೆ. ಜಿ. ಶಂಕರ್ ಅವರು ಹಲವು ಸಮಾಜಮುಖೀ ಕಾರ್ಯಕ್ರಮಗಳ ಮೂಲಕ ಸಮಾಜದ ಅಭಿವೃದ್ಧಿ ಮಾಡುತ್ತಿದ್ದಾರೆ ಎಂದರು.
ಅರ್ಚಕ ವಿಘ್ನೇಶ ಅಡಿಗ, ಕಿದಿಯೂರು ಹೊಟೇಲ್ ಮಾಲಕ ಭುವನೇಂದ್ರ ಕಿದಿಯೂರು, ಮೊಗವೀರ ಮಹಾಜನ ಸೇವಾ ಸಂಘದ ಬಗ್ವಾಡಿ ಹೋಬಳಿಯ ಕುಂದಾಪುರ ಶಾಖಾಧ್ಯಕ್ಷ ಕೆ.ಕೆ. ಕಾಂಚನ್, ಮೊಗವೀರ ಸಂಯುಕ್ತ ಸಭಾ ಬೆಣ್ಣೆಕುದ್ರು ಅಧ್ಯಕ್ಷ ಸತೀಶ ಅಮೀನ್ ಬಾಕೂìರು, ಮೊಗವೀರ ಯುವ ಸಂಘಟನೆಯ ಉಡುಪಿ ಜಿಲ್ಲಾಧ್ಯಕ್ಷ ಶಿವರಾಮ ಕೆ.ಎಂ. ಕೋಟ, ಡಾ| ಜಿ. ಶಂಕರ್ ಅವರ ಪತ್ನಿ ಶಾಲಿನಿ ಜಿ. ಶಂಕರ್, ಅಳಿಯ ನವೀನ್, ಪುತ್ರಿ ಶಾಮಿಲಿ, ಮೊಮ್ಮಗಳು ಶನಾಯ, ಸಹೋದರ ಶಿವ ಜಿ. ಕರ್ಕೇರ, ವಸಂತಿ ಶಿವ ಕರ್ಕೇರ, ಕಟ್ಟಡದ ವಿನ್ಯಾಸಗಾರರಾದ ಯೋಗೀಶ್ಚಂದ್ರ, ಗೋಪಾಲ ಭಟ್ ಉಪಸ್ಥಿತರಿದ್ದರು. ಗಣೇಶ ಕಾಂಚನ್ ಕಾರ್ಯಕ್ರಮ ನಿರೂಪಿಸಿದರು.
ಸಮಾಜದ ಒಳಿತಿಗಾಗಿ ಈ ಸಭಾಭವನ
ಗ್ರಾಮೀಣ ಭಾಗದ ಜನರ ಅನುಕೂಲಕ್ಕಾಗಿ ಸಭಾಭವನ ನಿರ್ಮಿಸಲಾಗಿದೆ. ಬಡವರ ಶಕ್ತಿ ಕೇಂದ್ರವಾಗಲಿರುವ ಈ ಸಭಾಭವನದಲ್ಲಿ ಉಚಿತ ಸಾಮೂಹಿಕ ವಿವಾಹ, ಮೊಗವೀರ ಸಂಘಟನೆಯ ಆಶಯದಂತೆ ಮುಂದಿನ ದಿನಗಳಲ್ಲಿ ಮಕ್ಕಳ ಆರೋಗ್ಯದ ಬಗ್ಗೆ, ವಿದ್ಯಾರ್ಥಿವೇತನ ನೀಡುವ ಕಾರ್ಯ, ಗುರಿಕಾರ ಸಮ್ಮಾನ ಕಾರ್ಯಕ್ರಮ ಮಾಡಲಾಗುತ್ತದೆ.
ಬಡವರು ಮದುವೆ ಮಾಡಲು ಕಷ್ಟ ಎಂದು ಬಂದಲ್ಲಿ ಸಭಾ ಭವನವನ್ನು ಉಚಿತವಾಗಿ ನೀಡಲಾಗುತ್ತದೆ. ಸಮಾಜದ 50 ಜೋಡಿಗಾದರೂ ಸಾಮೂಹಿಕ ಮದುವೆ ಮಾಡಿಸುವ ಉದ್ದೇಶ ಹೊಂದಿದ್ದೇವೆ. ಕೇವಲ ಮೊಗವೀರ ಸಮಾಜವಲ್ಲದೆ ಇತರ ಸಮಾಜದ 20ರಿಂದ 30 ಜೋಡಿಗಳಿಗೆ ಮದುವೆ ಮಾಡಿಸುವವರು ಮುಂದೆ ಬಂದಲ್ಲಿ ಸಭಾಭವನವನ್ನು ಉಚಿತವಾಗಿ ನೀಡಲಾಗುವುದು. ಸಮಾಜದ ಒಳಿತಿಗಾಗಿ ಈ ಸಭಾಭವನ ನಿರ್ಮಿಸಲಾಗಿದೆ.
– ಡಾ| ಜಿ. ಶಂಕರ್, ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಅಂಬಲಪಾಡಿ, ಉಡುಪಿ