ಬೆಂಗಳೂರು:ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಯಾತ್ರೆಗೆ ಪರ್ಯಾಯ ಎಂದೇ ಬಿಂಬಿತವಾಗಿರುವ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರ ಯಾತ್ರೆ ಡಿ.21 ರಿಂದಲೇ ಆರಂಭವಾಗಲಿದೆ.
ಈ ಮುಂಚೆ ಡಿ.27 ಅಥವಾ 28 ರಂದು ಯಾತ್ರೆಗೆ ದಿನಾಂಕ ನಿಗದಿಯಾಗಿತ್ತಾದರೂ ಇದೀಗ ಡಿ.21 ರಿಂದಲೇ ಪ್ರಾರಂಭವಾಗುವ ಬಗ್ಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧಿಕೃತ ವೇಳಾಪಟ್ಟಿ ಹೊರಡಿಸಿಸಲಾಗಿದೆ.
ಡಿ.21ರಂದು ಕೋಲಾರ ಜಿಲ್ಲೆ ಮುಳಬಾಗಿಲಿನ ಕುರುಡಮಲೆ ಗಣಪತಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಆರಂಭವಾಗಲಿರುವ ಯಾತ್ರೆ ಎರಡು ದಿನಗಳ ಕಾಲ ಕೋಲಾರ ಲೋಕಸಭೆ ಕ್ಷೇತ್ರದ ಎಲ್ಲ ವಿಧಾನಸಭೆ ಕ್ಷೇತ್ರಗಳಲ್ಲಿ ಸಂಚರಿಸಿ ನಂತರ ಡಿ.29 ಮತ್ತು ಡಿ.30 ರಂದು ಮತ್ತೆ ಎರಡು ದಿನ ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರದ ವಿಧಾನಸಭೆ ಕ್ಷೇತ್ರಗಳಲ್ಲಿ ಸಂಚರಿಸಲಿದೆ.
ಯಾತ್ರೆ ಸಂದರ್ಭದಲ್ಲಿ ಪ್ರತಿ ವಿಧಾನಸಭೆ ಕ್ಷೇತ್ರದಲ್ಲೂ ಸಮಾವೇಶ ಆಯೋಜಿಸಲಾಗಿದ್ದು, ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್, ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕಾರ್ಯಾಧ್ಯಕ್ಷರಾದ ದಿನೇಶ್‌ಗುಂಡೂರಾವ್, ಎಸ್.ಆರ್.ಪಾಟೀಲ್, ಕೇಂದ್ರ ಮಾಜಿ ಸಚಿವರಾದ ವೀರಪ್ಪಮೊಯಿಲಿ, ಕೆ.ಎಚ್.ಮುನಿಯಪ್ಪ, ಆಸ್ಕರ್ ಫರ್ನಾಂಡಿಸ್ , ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ.ಹರಿಪ್ರಸಾದ್, ಸಚಿವರಾದ ರಮೇಶ್‌ಕುಮಾರ್, ಎಚ್.ಎಂ.ರೇವಣ್ಣ, ರಾಮಲಿಂಗಾರೆಡ್ಡಿ, ಕೆಪಿಸಿಸಿ ಉಪಾಧ್ಯಕ್ಷೆ ರಾಣಿ ಸತೀಶ್ ಪಾಲ್ಗೊಳ್ಳಲಿದ್ದಾರೆ ಎಂದು ಕೆಪಿಸಿಸಿ ಪ್ರಕಟಣೆ ತಿಳಿಸಿದೆ.