ಕೊರಟಗೆರೆ: ಮದ್ಯ ವೆಂಕಟಾಪುರ ಮತ್ತು ಸುತ್ತಮುತ್ತಲ ಗ್ರಾಮಸ್ಥರ ಸುಮಾರು 40 ವರ್ಷಗಳ ಕಾಲದ ಸಮಸ್ಯೆಯನ್ನು ಶಾಸಕ ಡಾ.ಜಿ.ಪರಮೇಶ್ವರ್ ಅವರು ಪರಿಹರಿಸಿಕೊಟ್ಟಿದ್ದಾರೆ.
ತಾಲೂಕಿನ ಹೊಳವನಹಳ್ಳಿ ಹೋಬಳಿಯ ಮದ್ಯವೆಂಕಟಾಪುರ, ಬಂದ್ರೆಹಳ್ಳಿ, ಭಕ್ತರಹಳ್ಳಿ, ನಾಗರಹಳ್ಳಿ ಗ್ರಾಮಗಳ ಜನರು ಸುಮಾರು 40 ವರ್ಷಗಳಿಂದ ಪಡಿತರ ತರಲು 4-5 ಕಿಲೋಮೀಟರ್ ಹೋಗಿ ಬರಬೇಕಿತ್ತು ಇದನ್ನು ಗ್ರಾಮಸ್ಥರು, ಮುಖಂಡರೊಂದಿಗೆ ಶಾಸಕ ಡಾ.ಜಿ ಪರಮೇಶ್ವರ್ ರವರಿಗೆ ಮನವಿ ಮಾಡಿದರು. ಮನವಿಗೆ ಸ್ಪಂದಿಸಿದ ಶಾಸಕರು ಅಧಿಕಾರಿಗಳೊಂದಿಗೆ ಮಾತನಾಡಿ ಸೋಮವಾರದಂದು ಮದ್ಯ ವೆಂಕಟಾಪುರದಲ್ಲಿ ಪಡಿತರ ಉಪಕೇಂದ್ರಕ್ಕೆ ಚಾಲನೆ ನೀಡಿ ಪಡಿತರ ನೀಡಿದರು.
ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಶಾಸಕ ಡಾ.ಜಿ.ಪರಮೇಶ್ವರ್ ಈ ನಾಲ್ಕು ಗ್ರಾಮಗಳ ಗ್ರಾಮಸ್ಥರು ಕೆಲವು ವರ್ಷಗಳ ಹಿಂದೆ ಮಾವತ್ತೂರು ಗ್ರಾಮಕ್ಕೆ ಪಡಿತರ ತರಲು ೫ ಕಿಲೊಮೀಟರ್ ನಡೆದು ಹೋಗುತ್ತಿದ್ದರು, ನಂತರ ಇದನ್ನು ಲಿಂಗಾಪುರ ಪಡಿತರ ಕೇಂದ್ರಕ್ಕೆ ವರ್ಗಾಯಿಸಿದರು ಆದರೂ ಆ ಕೇಂದ್ರದಿಂದ ಪಡಿತರ ತರಲು ೪ ಕಿಲೊಮೀಟರ್ ನಡೆದುಕೊಂಡು ಹೋಗಿ ವಾಪಸ್ಸು ಬರುವ ಸಮಸ್ಯೆ ಇತ್ತು, ಇದರಿಂದ ರೈತರಿಗೆ, ಕೂಲಿ ಕಾರ್ಮಿಕರಿಗೆ, ಮಹಿಳೆಯರಿಗೆ ಹಾಗೂ ವೃದ್ದರಿಗೆ ಅತಿಯಾದ ಸಮಸ್ಯೆಯಾಗುತ್ತಿತ್ತು, ಇದರೊಂದಿಗೆ ಪಡಿತರ ವ್ಯವಸ್ಥೆ ಆನ್-ಲೈನ್ ವ್ಯವಸ್ಥೆಯಿದ್ದು ಪಡಿತರ ಕೇಂದ್ರದಲ್ಲಿ ನೆಟ್ ವರ್ಕ್ ಬಾರದೇ ಇದ್ದಾಗ ಮತ್ತೆ ವಾಪಸ್ ಹೋಗಿ ಬರಬೇಕಿತ್ತು ಇದನ್ನು ಮನಗೊಂಡು ಗ್ರಾಮಸ್ಥರ ಮನವಿಗೆ ಸ್ಪಂದಿಸಲಾಗಿದೆ.ಅವರಿಗೆ ಕೊಟ್ಟ ಮಾತು ಉಳಿಸಿಕೊಂಡಿದ್ದೇನೆ ಎಂದರು.
ಕೊರಟಗೆರೆ ಕ್ಷೇತ್ರದಲ್ಲಿ ಶಾಸಕ ಹಾಗೂ ಮಂತ್ರಿಯಾದ ಕಾಲದಿಂದಲೂ ಜನರ ಸಮಸ್ಯೆಗೆ ಸಾಕಷ್ಟು ಸ್ಪಂದಿಸಿ ಪರಿಹರಿಸಿದ್ದೇನೆ, ಕ್ಷೇತ್ರದ ಪ್ರತಿ ಗ್ರಾಮಗಳ ಮೂಲಭೂತ ಸಮಸ್ಯೆಗಳ ಪರಿಹಾರಕ್ಕೆ ಶಕ್ತಿ ಮೀರಿ ಕೆಲಸ ಮಾಡಲಾಗಿದೆ, ಕ್ಷೇತ್ರದಲ್ಲಿ 160 ಕೋಟಿಗಳ ವಸತಿ ವಿದ್ಯಾಕೇಂದ್ರಗಳನ್ನು ಗ್ರಾಮೀಣ ಭಾಗದ ಮಕ್ಕಳ ಉತ್ತಮ ಶಿಕ್ಷಣಕ್ಕಾಗಿ ಆರಂಭಿಸಿದ್ದೇನೆ. ಇದರೊಂದಿಗೆ ಸಾಕಷ್ಟು ಜನರ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ಮಾಡಿದ್ದು,
ಕೊರೊನಾದಂತಹ ಸಂಕಷ್ಟ ಪರಿಸ್ಥಿತಿಯಲ್ಲಿ ನನ್ನ ಕ್ಷೇತ್ರದಲ್ಲಿ ಪ್ರಾರಂಭಿಸಿದ ವೈದ್ಯರ ನಡಿಗೆ ಹಳ್ಳಿಯ ಕಡೆಗೆ-ರೋಗಿಗಳ ಮನೆ ಮನೆಗಳಿಗೆ ಕಾರ್ಯವೂ ರಾಜ್ಯದಲ್ಲೇ ಮಾದರಿಯಾಗಿದೆ, ಜನರ ಸೇವೆಯನ್ನು ಪ್ರಾಮಾಣಿಕವಾಗಿ ಮಾಡುತ್ತಿದ್ದೇನೆ ಎಂದರು.
ಈ ಸಂಧರ್ಭದಲ್ಲಿ ಗ್ರಾ,ಪಂ ಸದಸ್ಯೆ ಗಂಗಮ್ಮ, ಮಾಜಿ ಸದಸ್ಯೆ ರಾಮಕ್ಕ ಕೆಪಿಸಿಸಿ ಸದಸ್ಯ ಎ.ಡಿ.ಬಲರಾಮಯ್ಯ. ಮುಖಂಡರುಗಳಾದ ಮಾವತ್ತೂರು ವೆಂಕಟಪ್ಪ, ಸಿದ್ದರಾಜು, ಶ್ರೀನಿವಾಸ್, ರಂಗಣ್ಣ, ಕಿಟ್ಟಪ್ಪ, ಚಿಕ್ಕರಂಗಯ್ಯ, ರಮೇಶ್ ಸೇರಿದಂತೆ ಇತರರು ಹಾಜರಿದ್ದರು.