Advertisement

ಡಾ|ಅಪ್ಪ ಶೈಕ್ಷಣಿಕ ಕೊಡುಗೆ ಅಪಾರ

03:29 PM Mar 28, 2017 | |

ಕಲಬುರಗಿ: ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಮೂಲಕ ಡಾ| ಶರಣಬಸವಪ್ಪ ಅಪ್ಪ ಅವರು ಮಾಡಿರುವ ಶೈಕ್ಷಣಿಕ ಕೊಡುಗೆ ಯಾರೂ ಮುಟ್ಟಲು ಸಾಧ್ಯವಿಲ್ಲ ಎಂದು ಹಿರಿಯ ಪತ್ರಕರ್ತ ಟಿ.ವಿ. ಶಿವಾನಂದನ್‌ ಹೇಳಿದರು.

Advertisement

 ಶರಣಬಸವೇಶ್ವರ ಮಹಾದಾಸೋಹ ಸಂಸ್ಥಾನದಲ್ಲಿ ಸಂಸ್ಥಾನದ ಪೀಠಾಧಿಪತಿ ಡಾ| ಶರಣಬಸವಪ್ಪ ಅಪ್ಪ ಅವರ ಸಾನ್ನಿಧ್ಯದಲ್ಲಿ ಸೋಮವಾರ ಸಂಜೆ ನಡೆದ ದಾಸೋಹ ಜ್ಞಾನ ರತ್ನ ಪಾಕ್ಷಿಕ ಪತ್ರಿಕೆ 21ನೇ ವಾರ್ಷಿಕೋತ್ಸವದಲ್ಲಿ ಪತ್ರಿಕೆಯ 22ನೇ ವರ್ಷದ ಮೊದಲ ಸಂಚಿಕೆ ಬಿಡುಗಡೆ ಮಾಡಿ ಅವರು ಮಾತನಾಡಿದರು. 

ಶೈಕ್ಷಣಿಕವಾಗಿ ಎಲ್ಲ ವಿಧದ ಕೋರ್ಸ್‌ಗಳ ಮೂಲಕ ಗುಣಮಟ್ಟದ ಶಿಕ್ಷಣ ನೀಡುತ್ತಾ ಸಂಸ್ಥೆ ಮನೆ ಮಾತಾಗಿದೆ. ಮುಂದಿನ ದಿನಗಳಲ್ಲಿ ಖಾಸಗಿ ವಿಶ್ವವಿದ್ಯಾಲಯ ಸ್ಥಾಪಿಸುತ್ತಿರುವುದು ಸಾಮಾನ್ಯವಾದುದ್ದಲ್ಲ ಎಂದು ಹೇಳಿದರು. ಕಳೆದ 21 ವರ್ಷಗಳಿಂದ ಶರಣಬಸವೇಶ್ವರ ಮಹಾದಾಸೋಹ ಸಂಸ್ಥಾನ ಹಾಗೂ ವಿದ್ಯಾವರ್ಧಕ ಸಂಘದಿಂದ ದಾಸೋಹ ಜ್ಞಾನರತ್ನ ಪಾಕ್ಷಿಕ ಪತ್ರಿಕೆ ಹೊರ ತರುವ ಮೂಲಕ ಸಾಮಾಜಿಕ ಹೊಣೆಗಾರಿಕೆ ನಿರ್ವಹಿಸಿದೆ.

ಶರಣರ ಸಂದೇಶಗಳನ್ನು ತಿಳಿಸುವ ಅದರಲ್ಲೂ ಶರಣರ ಜಾತಿ ರಹಿತ ಸಮಾಜ ನಿರ್ಮಾಣದತ್ತ ಶ್ರಮಿಸುತ್ತಿರುವುದು ಮಾದರಿ ಹಾಗೂ ದೂರದೃಷ್ಟಿಯ ಕೆಲಸವಾಗಿದೆ ಎಂದು ಶಿವಾನಂದನ್‌ ಶ್ಲಾಘಿಸಿದರು. ಜ್ಞಾನ ದಾಸೋಹರತ್ನ ಪಾಕ್ಷಿಕ ಪತ್ರಿಕೆ ಸಂಪಾದಕ ಡಾ| ಎಸ್‌.ಎಂ. ಹಿರೇಮಠ ಅವರು, ಪತ್ರಿಕೆ ಬೆಳೆದು ಬಂದ ರೀತಿ, ಡಾ| ಅಪ್ಪ ಅವರ ಅಂತರದೃಷ್ಟಿ ಲೇಖನಗಳ ಸಾರ ಹಾಗೂ ಜನಮಾಸದಲ್ಲಿ ಬೀರುವ ಪರಿಣಾಮಗಳ ಕುರಿತು ವಿವರಣೆ ನೀಡಿದರು. 

ಸಾನ್ನಿಧ್ಯ ವಹಿಸಿದ್ದ ಸಂಸ್ಥಾನದ ಪೀಠಾಧಿಪತಿ ಡಾ| ಶರಣಬಸವಪ್ಪ ಅಪ್ಪ ಅವರು, ಸ್ವತಂತ್ರವಾಗಿ ಬರೆಯಬೇಕು. ಸ್ವತಂತ್ರವಾಗಿ ಮಾತನಾಡಬೇಕು ಹಾಗೂ ಸ್ವತಂತ್ರವಾಗಿ ವಿಚಾರ ಮಾಡಬೇಕು. ಈ ಮೂರನ್ನು ಸ್ವತಂತ್ರವಾಗಿ ಮೈಗೂಡಿಸಿಕೊಂಡರೆ ಸ್ವತಂತ್ರ ಬದುಕು ರೂಪಿಸಿಕೊಳ್ಳಲು ಸಾಧ್ಯ ಎಂದು ಹೇಳಿದರು. ಇತ್ತೀಚಿನ ದಿನಗಳಲ್ಲಿ ಬರವಣಿಗೆ ಆಸಕ್ತಿ ಕಡಿಮೆಯಾಗುತ್ತಿದೆ. 

Advertisement

ಬರೆಯುವ ಹವ್ಯಾಸ ಹೆಚ್ಚಿಸಲು ಪೂರಕವಾಗುವ ಇಂತಹ ಪತ್ರಿಕೆಗಳು ಅವಶ್ಯಕವಿದೆ. ಜ್ಞಾನದಾಸೋಹ ಜ್ಞಾನರತ್ನ ಪತ್ರಿಕೆಯ 25ನೇ ವಾರ್ಷಿಕೋತ್ಸವ ವಿಶೇಷ ಸಂಪುಟ ಹೊರ ತರಲು ಉದ್ದೇಶಿಸಲಾಗಿದೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಹಿರಿಯ ಪತ್ರಕರ್ತರಾದ ಜಯತೀರ್ಥ ಕಾಗಲಕರ್‌, ಶೇಷಮೂರ್ತಿ ಅವಧಾನಿ, ಮಹಿಪಾಲರೆಡ್ಡಿ ಮುನ್ನೂರ, ಡಿ. ಶಿವಲಿಂಗಪ್ಪ, ಭವಾನಿಸಿಂಗ್‌ ಠಾಕೂರ,

ಹಣಮಂತರಾವ ಭೈರಾಮಡಗಿ, ಶರಣು ಗೊಬ್ಬುರ, ಶಾಮಸುಂದರ ಕುಲಕರ್ಣಿ, ಜ್ಞಾನದಾಸೋಹ ಜ್ಞಾನ ರತ್ನ ಸಂಪಾದಕ ಮಂಡಳಿ ಹಾಗೂ ಶರಣಬಸವೇಶ್ವರ ಮುದ್ರಾಣಾಲಯದ ಸಿಬ್ಬಂದಿಗಳವರನ್ನು ಸನ್ಮಾನಿಸಲಾಯಿತು. ಸಂಪಾದಕ ಮಂಡಳಿಯ ಡಾ| ಎಸ್‌.ಎ.ಪಾಳೇಕಾರ ಮಾತನಾಡಿದರು. ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಸೇರಿದಂತೆ ಇತರರು ಇದ್ದರು.

ದಾಸೋಹ ಜ್ಞಾನರತ್ನ ಪತ್ರಿಕೆ ಸಂಪಾದಕ ಮಂಡಳಿಯ ಡಾ| ಶಿವರಾಜ ಶಾಸ್ತ್ರೀ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗೋದುತಾಯಿ ಕಲಾ ಮಹಾವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕ ಕೃಪಾಸಾಗರ ಗೊಬ್ಬುರ ನಿರೂಪಿಸಿದರು. ಸಂಪಾದಕ ಮಂಡಳಿ ಸದಸ್ಯರು ಹಾಗೂ ಗೋದುತಾಯಿ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ| ನೀಲಾಂಬಿಕಾ ಪೊಲೀಸ್‌ಪಾಟೀಲ ವಂದಿಸಿದರು.  

Advertisement

Udayavani is now on Telegram. Click here to join our channel and stay updated with the latest news.

Next