ಧರ್ಮಸ್ಥಳ: ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಸಿನಿಮಾವೊಂದಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಈ ವಿಚಾರವನ್ನು ಚಿತ್ರತಂಡ ಅಧಿಕೃತ ಮಾಡಿದ್ದಾರೆ.
ಕನ್ನಡದ ಹಿರಿಯ ನಿರ್ದೇಶಕ ಎಸ್.ವಿ.ರಾಜೇಂದ್ರ ಸಿಂಗ್ ಬಾಬು ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ‘ವೀರ ಕಂಬಳ’ ಸಿನಿಮಾದಲ್ಲಿ ಅವರು ಅತಿಥಿ ಪಾತ್ರವನ್ನು ಮಾಡುತ್ತಿದ್ದಾರೆ. ಸಂಪೂರ್ಣವಾಗಿ ಕಂಬಳ ಕ್ರೀಡೆಯನ್ನು ಹಿನ್ನೆಲೆಯಾಗಿಟ್ಟುಕೊಂಡು ಮೂಡಿ ಬರುತ್ತಿರುವ ಸಿನಿಮಾ ಇದಾಗಿದ್ದು, ಈ ಸಿನಿಮಾ ಕನ್ನಡ, ತುಳು ಸೇರಿದಂತೆ ಹಲವು ಭಾಷೆಗಳಲ್ಲಿ ಮೂಡಿ ಬರಲಿದೆ.
ತುಳುನಾಡಿನ ಕೋಣಗಳ ಓಟದ ಹೆಮ್ಮೆಯ ಕಂಬಳ ಸ್ಪರ್ಧೆಯನ್ನು ಕೇಂದ್ರ ಬಿಂದುವಾಗಿಟ್ಟುಕೊಂಡು ತಯಾರಾಗುತ್ತಿರುವ ವೀರ ಕಂಬಳ ಸಿನೆಮಾದ ಶೂಟಿಂಗ್ ಭರದಿಂದ ಸಾಗುತ್ತಿದೆ. ‘ವೀರ ಕಂಬಳ’ ಚಿತ್ರದ ಕೊನೆ ಹಂತದ ಚಿತ್ರೀಕರಣ ಸದ್ಯ ನಡೆಯುತ್ತಿದ್ದು, ಈ ಚಿತ್ರಕ್ಕಾಗಿ ಡಾ. ಡಿ. ವೀರೇಂದ್ರ ಹೆಗ್ಗಡೆ ಬಣ್ಣ ಹಚ್ಚುತ್ತಿದ್ದು, ಅವರಿಗೆ ಮೇಕಪ್ ಮಾಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ತುಳುನಾಡಿನ ಸಂಸ್ಕೃತಿಯ ಏಳ್ಗೆಗೆ ಡಾ.ವೀರೇಂದ್ರ ಹೆಗ್ಗಡೆಯವರು ಶ್ರಮಿಸುತ್ತಲೇ ಬಂದಿದ್ದಾರೆ. ‘ವೀರ ಕಂಬಳ’ ಕೂಡ ತುಳುನಾಡಿನ ಸಂಸ್ಕೃತಿಗೆ ಸಂಬಂಧಿಸಿದ್ದಾಗಿದೆ. ಹೀಗಾಗಿ, ಅವರು ಈ ಚಿತ್ರದಲ್ಲಿ ನಟಿಸಲು ಒಪ್ಪಿದ್ದಾರೆ. ತುಳುವಿನಲ್ಲಿ ಈ ಚಿತ್ರಕ್ಕೆ ‘ಬಿರ್ದ್‌ದ ಕಂಬಳ’ ಎಂದು ಹೆಸರಿಡಲಾಗಿದೆ. ಈವರೆಗೆ ಹಲವು ಚಲನಚಿತ್ರಗಳಲ್ಲಿ ಕಂಬಳವನ್ನು ಚಿತ್ರದ ಭಾಗವಾಗಿ ನೋಡಿದ್ದೇವೆ ಹೊರತು ಸಂಪೂರ್ಣ ಕಂಬಳದ ಬಗ್ಗೆ ಚಿತ್ರ ಬಂದಿಲ್ಲ. ವೀರ ಕಂಬಳ ಎಂಬ ಸಿನೆಮಾ ಕಂಬಳ ಎಂಬ ಜಾನಪದ ಕ್ರೀಡೆಯನ್ನು ಕೇಂದ್ರವಾಗಿ ಇಟ್ಟುಕೊಂಡು ಮೂಡಿಬಂದಿರುವ ಚಿತ್ರವಾಗಿದೆ.
ಎಸ್.ವಿ ರಾಜೇಂದ್ರ ಸಿಂಗ್ ಬಾಬು ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಚಿತ್ರಕ್ಕೆ ಬರೋಬ್ಬರಿ 7 ವರ್ಷಗಳ ಕಾಲ ಸಂಶೋಧನೆ ಮಾಡಿ ಕಥೆ ಬರೆಯಲಾಗಿದೆ. ಈ ಚಿತ್ರಕ್ಕೆ ಅರುಣ್ ರೈ ತೋಡಾರ್ ಎಂಬವರು ಬಂಡವಾಳ ಹೂಡಿದ್ದಾರೆ. ಮಣಿಕಾಂತ್ ಕದ್ರಿ ಸಂಗೀತ ಸಂಯೋಜನೆಯಲ್ಲಿ ಹಾಡುಗಳು ಮೂಡಿ ಬರಲಿದೆ. ತುಳುನಾಡಿನ ಪ್ರಸಿದ್ಧ ಕಲಾವಿದರು ಕೂಡ ಈ ಚಿತ್ರದಲ್ಲಿ ಬಣ್ಣ ಹಚ್ಚಿದ್ದು, ಇವರೊಂದಿಗೆ ಪ್ರಕಾಶ್ ರಾಜ್, ಆರ್ಮುಗ ರವಿಶಂಕರ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.