Advertisement

ಸೇವಾ ಯಜ್ಞದ ರೂವಾರಿ ಡಾ|ವೀರೇಂದ್ರ ಹೆಗ್ಗಡೆ

11:50 PM Nov 24, 2019 | sudhir |

ಶಿಕ್ಷಣ ಸಂಸ್ಥೆಗಳು ಸುಭದ್ರವಾದ ನಾಡು ಕಟ್ಟಲು ಇರುವ ಅಡಿಪಾಯ. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆ ನಾಡಿನ ಅಸಂಖ್ಯಾತ ವಿದ್ಯಾರ್ಥಿಗಳಿಗೆ ಜ್ಞಾನಾಮೃತ ನೀಡುತ್ತಿದೆ. ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಜನುಮದಿನದ ಸಲುವಾಗಿ ಅವರು ಶಿಕ್ಷಣ, ಆರೋಗ್ಯ, ಗ್ರಾಮೀಣಾಭಿವೃದ್ಧಿ ಕ್ಷೇತ್ರದಲ್ಲಿ ನಡೆಸಿರುವ ಸೇವಾಕೈಂಕರ್ಯದ ಮೆಲುಕು ಇದು.

Advertisement

ಖಾವಂದರೆಂದರೆ ಹಾಗೆಯೇ, ನಾಡಿಗೆಲ್ಲ ಬಲುಪ್ರೀತಿ!
ಹೀಗೆ ಬೇರೆ ಯಾರಿಗಾದರೂ ಹೇಳಲು ಸಾಧ್ಯವೇ? ಡಾ. ಡಿ. ವೀರೇಂದ್ರ ಹೆಗ್ಗಡೆಯವರಿಗಷ್ಟೆ ಈ ಮೇಲಿನ ಸಾಲುಗಳು ಅನ್ವರ್ಥಕವಾಗುತ್ತವೆ. ಬೇರೆ ಯಾರಿಗೆ ಹೇಳಿದರೂ ಈ ಸಾಲುಗಳಿಗೆ ತೂಕ ಕಟ್ಟಕೊಡಲು ಸಾಧ್ಯವೇ ಇಲ್ಲ! ಅವರ ಸೇವಾಯಜ್ಞದಿಂದ ಬದುಕು ಕಟ್ಟಿಕೊಂಡ ನಾಡಿನ ಅಸಂಖ್ಯಾತ ಶ್ರಮಿಕ ಕುಟುಂಬಗಳ ಪಾಲಿಗಂತೂ ಅವರು ಮಾರ್ಗದರ್ಶಕ.

ಧಾರವಾಡ, ಮೈಸೂರು, ಹಾಸನ, ಉಡುಪಿ ಹೀಗೆ ರಾಜ್ಯದ ಮೂಲೆ-ಮೂಲೆಗೂ 50ಕ್ಕೂ ಅಧಿಕ ವಿದ್ಯಾಕೇಂದ್ರಗಳು, ಆಸ್ಪತ್ರೆಗಳು ಹರಡಿಕೊಂಡಿವೆ. ದಿಕ್ಕು-ದಿಕ್ಕುಗಳಲ್ಲಿ ಒಂದೊಂದು ಸಂಸ್ಥೆಗಳನ್ನು ಸ್ಥಾಪಿಸುವ ಬದಲು ಉಜಿರೆಯಲ್ಲಿಯೇ ಎಲ್ಲವನ್ನೂ ಸ್ಥಾಪಿಸಿದ್ದರೆ ಆಡಳಿತ ನಿರ್ವಹಣೆಗೆ ಸಹಕಾರಿಯಾಗುತ್ತಿತ್ತು. ಏತಕ್ಕಾಗಿ ಅವರು ರಾಜ್ಯದ ಉದ್ದಗಲಕ್ಕೂ ಶಿಕ್ಷಣ, ಆರೋಗ್ಯ, ಸ್ವ-ಉದ್ಯೋಗ, ಗ್ರಾಮಾಭಿವೃದ್ಧಿ ಸೇವಾಕಾರ್ಯಗಳನ್ನು ವಿಸ್ತರಿಸಿದರು ಎಂಬ ಪ್ರಶ್ನೆಗೆ ಉತ್ತರ ಹುಡುಕಲು ಹೊರಟಾಗ ಅವರ ಕಾಳಜಿ ಅರ್ಥವಾಗುತ್ತಾ ಹೋಗುತ್ತದೆ. ಜನ ಪ್ರತಿನಿಧಿಗಳಲ್ಲಿ ಇರಬೇಕಾದ ದೂರದೃಷ್ಟಿ, ಸಾಮಾಜಿಕ ನ್ಯಾಯ-ಅಭಿವೃದ್ಧಿಯ ಪರಿಕಲ್ಪನೆ ಅವರಲ್ಲಿ ಕಾಣಿಸುತ್ತದೆ.

ಖಾವಂದ ಎಂಬುದು ಪಾರ್ಸಿ ಪದ. ಧಣಿ, ರಕ್ಷಕ, ಒಡೆಯ ಎಂಬ ಅರ್ಥ ಆ ಪದಕ್ಕಿದೆ. ಒಂದು ಶ್ರೀಕ್ಷೇತ್ರಕ್ಕೆ ಅಥವಾ ಒಂದು ಪ್ರಾಂತ್ಯಕ್ಕೆ ಒಡೆಯರಾದವರನ್ನು ಖಾವಂದರು ಎಂದು ಕರೆಯುವ ವಾಡಿಕೆ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿದೆ. ಆದರೆ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಧರ್ಮಾಧಿಕಾರಿಯಾದ ಡಾ. ವೀರೇಂದ್ರ ಹೆಗ್ಗಡೆಯವರನ್ನು ಇಡೀ ರಾಜ್ಯವೇ ಖಾವಂದರು ಎನ್ನುತ್ತದೆ, ಪ್ರೀತಿಯಿಂದ, ಗೌರವದಿಂದ.
ನಾಡಿನ ಹೆಮ್ಮೆ ಎಸ್‌.ಡಿ.ಎಂ. ಸಂಸ್ಥೆ ಶಿಕ್ಷಣ ಸಂಸ್ಥೆಗಳು ಸುಭದ್ರವಾದ ನಾಡು ಕಟ್ಟಲು ಇರುವ ಅಡಿಪಾಯವಿದ್ದಂತೆ. ಕೆ.ಎಲ್‌.ಇ., ಸಿದ್ದಗಂಗೆ, ಸುತ್ತೂರು ಶಿಕ್ಷಣ ಸಂಸ್ಥೆಗಳಂತೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಯೂ ನಾಡಿನ ಅಸಂಖ್ಯಾತ ವಿದ್ಯಾರ್ಥಿಗಳಿಗೆ ಜ್ಞಾನಾಮೃತವನ್ನು ನೀಡುತ್ತಿದೆ.

ಹೆಗ್ಗಡೆಯವರ ಸಮರ್ಥ ಮಾರ್ಗದರ್ಶನದಲ್ಲಿ ಪ್ರಾಥಮಿಕ ಶಿಕ್ಷಣದಿಂದ ಹಿಡಿದು ವಿಜ್ಞಾನ, ವೈದ್ಯಕೀಯ, ಇಂಜಿನಿಯರಿಂಗ್‌, ಮ್ಯಾನೇಜ್‌ಮೆಂಟ್‌ ಹೀಗೆ ಆಧುನಿಕ ಜಗತ್ತಿನ ಎಲ್ಲ ಮಾದರಿಯ ಶಿಕ್ಷಣವನ್ನು ಅತ್ಯಂತ ಸೃಜನಾತ್ಮಕವಾಗಿ ಮತ್ತು ಗುಣಾತ್ಮಕವಾಗಿ ಸಂಸ್ಥೆ ನೀಡುತ್ತದೆ. ಶಿಕ್ಷಣ ಸಂಸ್ಥೆಗಳೊಂದಿಗೆ ಆಸ್ಪತ್ರೆಗಳನ್ನು ತೆರೆದು ಅತ್ಯಾಧುನಿಕ ಮಾದರಿಯ ಚಿಕಿತ್ಸೆಯ ಜೊತೆಗೆ ಬಡವರಿಗೆ ಉಚಿತ ಮತ್ತು ಯೋಗ್ಯ ದರದ ಸೇವೆಗಳು ಹಾಗೂ ಸಂಪೂರ್ಣ ಸುರûಾ ಎಂಬ ಆರೋಗ್ಯ ವಿಮಾ ಸೌಲಭ್ಯ ಜೊತೆಗೆ ರಾಜ್ಯದ ಎಲ್ಲ ಭಾಗದಲ್ಲಿಯೂ ನಿರಂತರವಾಗಿ ನಡೆಯುವ ಉಚಿತ ಆರೋಗ್ಯ ಶಿಬಿರಗಳು ನಡೆಯುತ್ತವೆ. ಈ ಎಲ್ಲ ಆಂಶಗಳಿಂದ ಎಸ್‌.ಡಿ.ಎಂ. ಸಂಸ್ಥೆ ನಾಡಿನ ಹೆಮ್ಮೆಯಾಗಿದೆ.

Advertisement

ಬದಲಾವಣೆಯೇ ವಿಶ್ರಾಂತಿ!
ಕಳೆದ ಬಾರಿ ಉಜಿರೆಯ ನಿಸರ್ಗೊಪಚಾರ ಕೇಂದ್ರದಲ್ಲಿ ನಿಸರ್ಗ ಚಿಕಿತ್ಸೆ ಪಡೆದು ಕಡೆಯ ದಿನ ಮಂಜುನಾಥನ ದರ್ಶನ ಪಡೆದು ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾದೆ. 30 ನಿಮಿಷದ ಭೇಟಿ ನನ್ನಲ್ಲಿಯ ಉತ್ಸಾಹವನ್ನು- ಚೈತನ್ಯವನ್ನು ಇಮ್ಮಡಿಗೊಳಿಸುವ ಕಾರ್ಯ ಗಾರವಿದ್ದಂತಿತ್ತು. ನಿಸರ್ಗೊಪಚಾರದಿಂದ ಸಿಕ್ಕ ಅಹ್ಲಾದ ಮತ್ತು ವಿಶ್ರಾಂತಿಯ ಬಗ್ಗೆ ಪ್ರಸ್ತಾಪಿಸಿದಾಗ ಅವರು “ವಿಶ್ರಾಂತಿ’ ಪದಕ್ಕಿರುವ ನಿಜವಾದ ವ್ಯಾಖ್ಯಾನವನ್ನೆ ನೀಡಿದರು. ನಮಗೆ ಕೆಲಸ ಮಾಡಲು ಅವಕಾಶ ದೊರೆಯುವುದೇ ಒಂದು ಸೌಭಾಗ್ಯ. ದೊರೆತ ಅವಕಾಶದಲ್ಲಿ ನಿರಂತರ ಶ್ರದ್ಧೆ, ಶ್ರಮವಿರಬೇಕು. ಒಂದು ಕೆಲಸದಿಂದ ಮತ್ತೂಂದು ಕೆಲಸದಲ್ಲಿ ಬದಲಾವಣೆಯಾಗುವುದೇ ವಿಶ್ರಾಂತಿ ಎಂದರು.

ನಾಡಿನ ಜಲಮೂಲಗಳ ಕುರಿತು ಅಪಾರ ಕಾಳಜಿ ಹೊಂದಿರುವ ವೀರೇಂದ್ರ ಹೆಗ್ಗಡೆಯವರು ಜಲಸಂಪನ್ಮೂಲ ಸದ್ಬಳಕೆ- ಸಂರಕ್ಷಣೆ ಕುರಿತು ವಿಶೇಷ ಆಸಕ್ತಿ ಹೊಂದಿದ್ದಾರೆ. ಎಸ್‌.ಕೆ.ಡಿ.ಆರ್‌.ಡಿ.ಪಿ ಮೂಲಕ ಪ್ರತಿವರ್ಷ ನೂರಾರು ಕೆರೆಗಳನ್ನು ಹೂಳೆತ್ತುವುದು ಸೇರಿದಂತೆ ಕೆರೆಗಳ ಪುನಶ್ಚೇತನ ಕಾರ್ಯವನ್ನು ಅತ್ಯಂತ ಉತ್ಸಾಹ ದಿಂದ ಮಾಡುತ್ತಾರೆ. ನೀರು ನಿರ್ವಹಣೆ ಬಗ್ಗೆ ನನಗಿರುವ ಆಸಕ್ತಿ ಅರಿತಿರುವ ಅವರು ನದಿಗಳ ಮೂಲಕ ಸುತ್ತಲಿನ ಕೆರೆಗಳನ್ನು ತುಂಬಿಸಿ ಸಮೃದ್ಧವಾಗಿಸುವ ಜೊತೆಗೆ ಅಂತರ್ಜಲ ವೃದ್ಧಿಸುವ ಹಾಗೂ ಜಲ ಜಾಗೃತಿಯ ಕಾರ್ಯದಲ್ಲಿ ತೊಡಗುವಂತೆ ಪ್ರೇರೇಪಿಸಿದರು.

ಎಸ್‌.ಕೆ.ಡಿ.ಆರ್‌.ಡಿ.ಪಿ. ಎಂಬ ಕಲ್ಪವೃಕ್ಷ
ಗ್ರಾಮೀಣ ಪ್ರದೇಶದ ಜನರ ಆರ್ಥಿಕಾಭಿವೃದ್ಧಿಗಾಗಿ ಶ್ರೀಕ್ಷೇತ್ರದಿಂದ ಹಲವಾರು ಯೋಜನೆಗಳನ್ನು ರೂಪಿಸುವ ಮೂಲಕ ದೇಶದ ಪ್ರಗತಿಗೆ ಅವರು ತಮ್ಮದೇ ಕೊಡುಗೆ ನೀಡಿದ್ದಾರೆ. ಜನರ ಕಷ್ಟಗಳನ್ನು ಅರಿತು ಪ್ರತಿ ಬಡ ಕುಟುಂಬಕ್ಕೆ ಸ್ವಾವಲಂಬನೆಯ ಬದುಕನ್ನು ಕಟ್ಟಿಕೊಡಬೇಕು ಎಂಬ ಧ್ಯೇಯದೊಂದಿಗೆ “”ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಯೋಜನೆ”ಯನ್ನು 1982ರಲ್ಲಿ ಸ್ಥಾಪಿಸಿದರು.

ಪ್ರಾರಂಭದಲ್ಲಿ ಬೆಳ್ತಂಗಡಿ ತಾಲೂಕಿನ 2 ಗ್ರಾಮಗಳ ಸಂಪೂರ್ಣ ವಿಕಾಸ ಹಾಗೂ ಕೃಷಿ ಮತ್ತು ಶ್ರಮಿಕ ಕುಟುಂಬಗಳ ಆರ್ಥಿಕ ಸಬಲೀಕರಣದಿಂದ ಪ್ರಾರಂಭಗೊಂಡ ಈ ಯೋಜನೆಯ ಫ‌ಲ ಇಂದು ರಾಜ್ಯದ 29 ಜಿಲ್ಲೆಗಳ 40,96,777ಕ್ಕೂ ಅಧಿಕ ಜನರನ್ನು ತಲುಪಿದೆ. ಆರ್ಥಿಕ ಸ್ವಾವಲಂಬನೆಗಾಗಿ 4,77,250 ಸ್ವ-ಸಹಾಯ ಸಂಘಗಳ ಮೂಲಕ 9,625 ಕೋಟಿ ರೂ. ಸಾಲದ ರೂಪದಲ್ಲಿ ನೆರವು ನೀಡಲಾಗಿದೆ.

ಕೇವಲ ಉಪದೇಶ ನೀಡುವುದರಿಂದ ಮಾತ್ರ ಸಮಾಜದ ಪರಿವರ್ತನೆಯ ದಾರಿ ತೆರೆದುಕೊಳ್ಳುವುದಿಲ್ಲ ಎಂಬುದನ್ನು ಅರಿತಿರುವ ಅವರು “ಗ್ರಾಮ ವಿಕಾಸವಾದರೆ ಮಾತ್ರ ರಾಷ್ಟ್ರ ವಿಕಾಸ” ಎಂಬ ಪರಿಕಲ್ಪನೆಯಡಿ ಕಾರ್ಯನಿರ್ವಹಿಸುತ್ತಿದ್ದಾರೆ. ಜನರ ಧಾರ್ಮಿಕ ಭಾವನೆಗಳನ್ನು ಸಮಾಜ ನಿರ್ಮಾಣಕ್ಕೆ ಹೇಗೆ ಉಪಯೋಗಿಸಿ ಕೊಳ್ಳಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಯೋಜನೆಯು ದುರ್ಬಲ ವರ್ಗದ ಜನರನ್ನು ಸಶಕ್ತರನ್ನಾಗಿಸಿದೆ. ಸ್ಥಳೀಯ ಸಂಘಟನೆಗಳನ್ನು ಬಳಕೆ ಮಾಡಿ, ಗ್ರಾಮೀಣ ಜನರನ್ನು ಸಂಘಟಿಸಿ ಗ್ರಾಮವಿಕಾಸಕ್ಕೆ ನಾಂದಿ ಹಾಡಿದೆ. ನೈಸರ್ಗಿಕ ಹಾಗೂ ಮಾನವ ಸಂಪನ್ಮೂಲಗಳ ಸದ್ವಿನಿಯೋಗ, ಸುಸ್ಥಿರ ಕೃಷಿ ಅಭಿವೃದ್ದಿಯ ಕಾರ್ಯದಲ್ಲಿ ಯೋಜನೆ ನಮ್ಮ ರಾಜ್ಯದಲ್ಲಿ ಬಹಳಷ್ಟು ಯಶಸ್ವಿಯಾಗಿದೆ.

ಒಟ್ಟಲ್ಲಿ ಹತ್ತು ಹಲವು ಕಾರ್ಯಕ್ರಮಗಳ ಮೂಲಕ ಮಹಾತ್ಮಾ ಗಾಂಧೀಜಿಯವರ ಗ್ರಾಮಸ್ವರಾಜ್ಯದ ಕಲ್ಪನೆಯನ್ನು ಎಸ್‌.ಕೆ.ಡಿ.ಆರ್‌.ಡಿ.ಪಿ. ಮೂಲಕ ಡಾ. ವೀರೇಂದ್ರ ಹೆಗ್ಗಡೆಯವರು ಸಾಕಾರಗೊಳಿಸುತ್ತಿದ್ದಾರೆ.

ಮಾದರಿಯಾದ ರುಡ್‌ಸೆಟ್‌
ಕೇಂದ್ರ ಸರ್ಕಾರ ಇಂದು ಸ್ಕಿಲ್‌ ಇಂಡಿಯಾ ಮಂತ್ರ ಪಠಿಸುತ್ತಿದೆ. ಈ ಆಲೋಚನೆ ದಶಕಗಳ ಹಿಂದೆಯೇ ವೀರೇಂದ್ರ ಹೆಗ್ಗಡೆಯವರಲ್ಲಿತ್ತು. ಅದ್ದರಿಂದ ಅವರು ಸ್ವಾವಲಂಬನೆಯ ಕನಸು ಸಾಕಾರಗೊಳಿಸಲು ಸ್ವ-ಉದ್ಯೋಗ ತರಬೇತಿ ಕೇಂದ್ರ ರುಡ್‌ಸೆಟ್‌ ಪ್ರಾರಂಭಿಸಿದ್ದಾರೆ. ನಮ್ಮ ದೇಶವನ್ನು ನಿರುದ್ಯೋಗ ಸಮಸ್ಯೆ ಬಹುವಾಗಿ ಕಾಡುತ್ತಿದೆ. ನಮ್ಮ ಶಿಕ್ಷಣದಲ್ಲಿ ಕೌಶಲದ ಕೊರತೆಯೂ ಕಾಣುತ್ತಿದೆ. ಹೀಗಾಗಿ ಪದವಿ ಮುಗಿಸಿದರೂ ಉದ್ಯೋಗ ಸಿಗದೇ ನಮ್ಮ ಯುವಕ-ಯುವತಿಯರು ನಿರುದ್ಯೋಗಿಗಳಾಗಿದ್ದಾರೆ. ಇದು ಬಡ ಕುಟುಂಬಗಳ ಆರ್ಥಿಕ ಪರಿಸ್ಥಿತಿಯ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ.

ಈ ಎಲ್ಲ ಕಾಳಜಿಯೊಂದಿಗೆ ಪ್ರಾರಂಭವಾದ ರುಡ್‌ಸೆಟ್‌ ನಿರುದ್ಯೋಗಿ ಯುವಕ-ಯುವತಿಯರಿಗೆ ವಿವಿಧ ಮಾದರಿಯ ಸ್ವ-ಉದ್ಯೋಗ ಕೌಶಲ್ಯ ತರಬೇತಿ ನೀಡುತ್ತದೆ. ತರಬೇತಿ ಬಳಿಕ ರಾಷ್ಟ್ರೀಕೃತ ಬ್ಯಾಂಕ್‌ ಸಹಕಾರದೊಂದಿಗೆ ಸ್ವಂತ ಉದ್ಯಮ ಪ್ರಾರಂಭಿಸಲು ಅನುಕೂಲ ಮಾಡಿಕೊಡುತ್ತದೆ. ಉದ್ಯಮ ಅಭಿವೃದ್ಧಿಗೆ ಸಮರ್ಥ ಮಾರ್ಗದರ್ಶನ ನೀಡುತ್ತದೆ. ಅಲ್ಲದೇ ಗೃಹಿಣಿಯರಿಗೆ ಹಲವಾರು ಕಿರು ಉದ್ಯಮ ಸ್ಥಾಪಿಸಲು ತರಬೇತಿ, ಸ್ವ ಸಹಾಯ ಸಂಘಗಳ ಮೂಲಕ ಧನಸಹಾಯ ಮಾಡುತ್ತದೆ. ಹೀಗಾಗಿ ವೀರೇಂದ್ರ ಹೆಗ್ಗಡೆಯವರ ಹೊಸಚಿಂತನೆ ಹಾಗೂ ಕ್ರಿಯಾಶೀಲ ನಾಯಕತ್ವದಲ್ಲಿ ರುಡ್‌ಸೆಟ್‌ ರಾಷ್ಟ್ರಕ್ಕೆ ಮಾದರಿಯಾಗಿದೆ.

ವ್ಯಸನಮುಕ್ತ ಸಮಾಜದ ಸಂಕಲ್ಪ
ಮದ್ಯ ವ್ಯಸನವನ್ನು ತಡೆಗಟ್ಟಲು ರಾಜ್ಯ ಸರ್ಕಾರವೇನೋ ಸಾರಾಯಿ ನಿಷೇಧ ಮಾಡಿತು. ಇದರಿಂದ 10 ರೂ. ಕೊಟ್ಟು ಪ್ಯಾಕೆಟ್‌ ಸಾರಾಯಿ ಕುಡಿಯುತ್ತಿದ್ದ ಕುಡುಕ 50-100 ಬೆಲೆಯ ಮದ್ಯಕ್ಕೆ ದಾಸನಾದ. ಕೇವಲ ಕಾನೂನು ಜಾರಿಗೆ ತರುವುದರಿಂದ ಒಂದು ಪಿಡುಗನ್ನು ಹೋಗಲಾಡಿಸಲು ಸಾಧ್ಯವಿಲ್ಲ. ವ್ಯಕ್ತಿಯ ಮನಃಪರಿವರ್ತನೆ ಮಾಡಿದಾಗ ಮಾತ್ರ ವ್ಯಸನದಿಂದ ಮುಕ್ತಿ ನೀಡಲು ಸಾಧ್ಯ. ಕುಡಿತ ಬಡಕುಟುಂಬಗಳ ಪಾಲಿಗೆ ನಿಜಕ್ಕೂ ಶಾಪ. ಅದು ಕುಟುಂಬದ ಆರ್ಥಿಕ ಹಾಗೂ ಕೌಟುಂಬಿಕ ಅಧಃಪತನಕ್ಕೆ ಕಾರಣವಾಗಿ ಬಿಡುತ್ತದೆ. ಸುಖ, ಶಾಂತಿ, ನೆಮ್ಮದಿಯನ್ನು ದೋಚುತ್ತದೆ.

ವ್ಯಸನಮುಕ್ತ ಸಮಾಜ ನಿರ್ಮಿಸಬೇಕು, ಪ್ರತಿ ಕುಟುಂಬಗಳೂ ನೆಮ್ಮದಿಯಿಂದ ಬದುಕಬೇಕು ಎಂಬುದು ಹೆಗ್ಗಡೆಯವರ ಕಾಳಜಿ. ಧರ್ಮಸ್ಥಳ ಈ ನಾಡಿನ ಪಾಲಿನ ಅತಿದೊಡ್ಡ ಶ್ರದ್ಧಾಕೇಂದ್ರ. ಧರ್ಮಸ್ಥಳದ ಬಗ್ಗೆ ಪ್ರತಿಯೊಬ್ಬರಲ್ಲಿಯೂ ಭಕ್ತಿಯ ಜೊತೆಗೆ ಭಯವು ಇದೆ. ಎಸ್‌.ಕೆ.ಡಿ.ಆರ್‌.ಡಿ.ಪಿ ನಡೆಸುವ ಮದ‌Âವರ್ಜನ ಶಿಬಿರಗಳು ಈ ಸಾತ್ವಿಕ ಭಯದಿಂದ ಯಶಸ್ವಿಯಾಗುತ್ತವೆ. ಈ ನಿಟ್ಟಿನಲ್ಲಿ ಕುಡಿತದಿಂದ ವ್ಯಾಘ್ರರಾಗುತ್ತಿದ್ದ ಎಷ್ಟೊ ಜನರ ಮನಃಪರಿವರ್ತನೆ ಮಾಡಿ ಸಜ್ಜನರನ್ನಾಗಿಸುವ ಈ ಕಾರ್ಯಕ್ರಮ ತುಂಬಾ ಅರ್ಥಪೂರ್ಣ ವಾಗಿದೆ. ಒಂದು ಧಾರ್ಮಿಕ ಕ್ಷೇತ್ರವನ್ನು ನಂಬಿದ ಭಕ್ತ ಸಮುದಾಯದ ಬದುಕನ್ನು ಹೇಗೆ ಸಂಪನ್ನಗೊಳಿಸಬಹುದು ಎಂಬುದನ್ನು ತೋರಿಸಿ ಕೊಟ್ಟ ಹೆಗ್ಗಡೆಯವರ ಕಾರ್ಯ ನಮ್ಮೆಲ್ಲರಿಗೂ ಅನುಕರಣೀಯ. ಕಳೆದ ಬಾರಿ ರಾಷ್ಟ್ರಪತಿ ಆಯ್ಕೆಯ ಸಂದರ್ಭದಲ್ಲಿ ಅವರಿಗೆ ಅವಕಾಶ ಒದಗಿ ಬಂದಾಗ ಸಾಮಾಜಿಕ ಸಬಲೀಕರಣದಲ್ಲಿ ತೊಡಗಿಕೊಂಡಿರುವುದು ಹಾಗೂ ಶ್ರೀ ಮಂಜುನಾಥನ ಸೇವೆಗಿಂತ ದೊಡ್ಡದು ನನಗೆ ಯಾವುದು ಇಲ್ಲ ಎಂದು ನಯವಾಗಿಯೇ ಅವಕಾಶದಿಂದ ಹಿಂದೆ ಸರಿದ ಅವ ರಿಗೆ ಆದಷ್ಟು ಬೇಗ ಭಾರತರತ್ನ ಪ್ರಶಸ್ತಿ ದೊರೆಯಲಿ ಎಂಬುದು ನಾಡಿನ ಜನ ರ ಆಶಯವಾಗಿದೆ.

– ಸಂಗಮೇಶ ಆರ್‌. ನಿರಾಣಿ

Advertisement

Udayavani is now on Telegram. Click here to join our channel and stay updated with the latest news.

Next