Advertisement
ಬೆಂ. ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಎನ್ ಡಿಎ ಅಭ್ಯರ್ಥಿಯಾಗಿ ಡಾ.ಸಿ.ಎನ್.ಮಂಜುನಾಥ್ ಕಣಕ್ಕಿಳಿಯುವುದು ಬಹುತೇಕ ಖಚಿತಗೊಂಡಿದೆ. ಡಿ.ಕೆ.ಸುರೇಶ್ ವಿರುದ್ಧ ಇವರನ್ನು ಕಣಕ್ಕಿಳಿಸಲು ಬಿಜೆಪಿ ಮತ್ತು ಜೆಡಿಎಸ್ ಪಕ್ಷದಲ್ಲಿ ಸಹಮತ ವ್ಯಕ್ತವಾಗಿದೆ. ಇನ್ನು ಅಧಿಕೃತ ಘೋಷಣೆಯಷ್ಟೇ ಬಾಕಿ ಎಂದು ಉನ್ನತ ಮೂಲಗಳು ಮಾಹಿತಿ ಇತ್ತಿವೆ.
Related Articles
Advertisement
ಉಭಯ ಪಕ್ಷಗಳ ಸಭೆ: ಡಾ.ಮಂಜುನಾಥ್ ಅಭ್ಯರ್ಥಿ ಎಂಬ ಸಂಗತಿ ಖಚಿತವಾದ ಬೆನ್ನಲ್ಲೇ ಜೆಡಿಎಸ್ ಮತ್ತು ಬಿಜೆಪಿ ಮುಖಂಡರು ಪ್ರತ್ಯೇಕ ಸಭೆ ನಡೆಸಿ ಚುನಾವಣೆಗೆ ಸಂಬಂಧಿಸಿದಂತೆ ಚರ್ಚೆ ನಡೆಸಿದ್ದಾರೆ. ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ತಮ್ಮ ನಿವಾಸದಲ್ಲಿ ರಾಮನಗರ ತಾಲೂಕಿನ ಜೆಡಿಎಸ್ ಮುಖಂಡರ ಸಭೆ ನಡೆಸಿ, ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಒಗ್ಗಟ್ಟಿನಿಂದ ಶ್ರಮಿಸುವಂತೆ ಕರೆನೀಡಿದ್ದಾರೆ. ಇತ್ತ ಬಿಜೆಪಿ ಗ್ರಾಮಾಂತರ ಲೋಕಸಭಾ ಕ್ಷೇತ್ರ ವ್ಯಾಪ್ತಿ ಕೋರ್‌ಕಮಿಟಿ ಸಭೆ ನಡೆಸಿ ಚುನಾವಣಾ ತಂತ್ರಗಾರಿಕೆ ಬಗ್ಗೆ ಚರ್ಚೆ ನಡೆಸಿದೆ. ಎರಡೂ ಸಭೆಯಲ್ಲೂ ಡಾ.ಮಂಜುನಾಥ್ ಅಭ್ಯರ್ಥಿಯಾಗುವ ಬಗ್ಗೆ ಚರ್ಚೆ ನಡೆದಿದೆ.
5ನೇ ಸಲ ಎಚ್‌ಡಿಡಿ-ಡಿಕೆಶಿ ಕುಟುಂಬ ಮುಖಾಮುಖಿ : ಒಕ್ಕಲಿಗರ ಕೋಟೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ನಡುವಿನ ರಾಜಕೀಯ ಸಂಘರ್ಷಕ್ಕೆ ಸುದೀರ್ಘ ಇತಿಹಾಸವಿದೆ. ಕೆಲವೊಂದು ಚುನಾವಣೆಗಳಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಮತ್ತು ಡಿ.ಕೆ.ಶಿವಕುಮಾರ್ ನೇರವಾಗಿ ಸ್ಪರ್ಧೆಮಾಡಿದ್ದರೆ, ಮತ್ತೆ ಕೆಲ ಚುನಾವಣೆಯಲ್ಲಿ ಅವರ ಕುಟುಂಬದವರು ಮುಖಾಮುಖೀಯಾಗಿದ್ದಾರೆ. ಬೆಂ. ಗ್ರಾಮಾಂತರದಿಂದ ಡಾ.ಮಂಜುನಾಥ್ ಸ್ಪರ್ಧೆಮಾಡಿದ್ದೇ ಆದಲ್ಲಿ 5ನೇ ಬಾರಿಗೆ ಎರಡೂ ಕುಟುಂಬಗಳು ರಾಜಕೀಯವಾಗಿ ಮುಖಾಮುಖಿಯಾಗಲಿದೆ.
ಹೌದು.., 1985 ರಲ್ಲಿ ಸಾತನೂರು ಕ್ಷೇತ್ರದಿಂದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಸ್ಪರ್ಧೆಮಾಡಿದ್ದರು. ಅವರ ವಿರುದ್ಧವಾಗಿ ಕಾಂಗ್ರೆಸ್ ಪಕ್ಷದಿಂದ ಡಿ.ಕೆ.ಶಿವಕುಮಾರ್ ಸ್ಪರ್ಧೆಮಾಡಿದ್ದರು. ಇದು ಡಿ.ಕೆ.ಶಿವಕುಮಾರ್ ಮೊದಲ ಚುನಾವಣೆ. ಈ ಚುನಾವಣೆಯಲ್ಲಿ ದೇವೇಗೌಡರು ಗೆಲುವು ಸಾಧಿಸಿದರು. ಬಳಿಕ 1999ರಲ್ಲಿ ಸಾತನೂರು ವಿಧಾನಸಭಾ ಕ್ಷೇತ್ರದಿಂದ ಡಿ.ಕೆ.ಶಿವಕುಮಾರ್ ವಿರುದ್ಧ ಎಚ್.ಡಿ.ಕುಮಾರಸ್ವಾಮಿ ಸ್ಪರ್ಧೆಮಾಡಿದ್ದರು. ಈ ಚುನಾವಣೆಯಲ್ಲಿ ಗೆಲುವು ಡಿ.ಕೆ.ಶಿವಕುಮಾರ್ ಪಾಲಾಗಿತ್ತು.
ಬಳಿಕ 2002ರಲ್ಲಿ ನಡೆದ ಕನಕಪುರ ಲೋಕಸಭಾ ಉಪಚುನಾವಣೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ವಿರುದ್ಧ ಡಿ.ಕೆ.ಶಿವಕುಮಾರ್ ಸ್ಪರ್ಧೆಮಾಡಿದ್ದರು. ಚುನಾವಣೆಯಲ್ಲಿ ದೇವೇಗೌಡರು ವಿಜೇತರಾದರು.
ಬಳಿಕ 2013ರಲ್ಲಿ ಕುಮಾರಸ್ವಾಮಿ ರಾಜೀನಾಮೆಯಿಂದ ಎದುರಾದ ಬೆಂ. ಗ್ರಾಮಾಂತರ ಲೋಕಸಭಾ ಚುನಾವಣೆಯಲ್ಲಿ ಡಿ.ಸುರೇಶ್ ವಿರುದ್ಧ ಅನಿತಾಕುಮಾರಸ್ವಾಮಿ ಸ್ಪರ್ಧಿಸಿದ್ದರು. ಈ ಚುನಾವಣೆಯಲ್ಲಿ ಡಿ.ಕೆ.ಸುರೇಶ್ ಗೆಲುವು ಸಾಧಿಸಿದರು.
ದೇವೇಗೌಡರನ್ನು ಒಪ್ಪಿಸಿರುವ ಎಚ್‌ಡಿಕೆ : ಡಾ.ಮಂಜುನಾಥ್ ಸ್ಪರ್ಧೆಗೆ ಬಹುಮುಖ್ಯ ಅಡ ಚಣೆ ಇದಿದ್ದು ಮಾಜಿ ಪ್ರಧಾನಿ ದೇವೇಗೌಡರದ್ದು. ತಮ್ಮ ಅಳಿಯನ ಸ್ಪರ್ಧೆಗೆ ಮಾಜಿ ಪ್ರಧಾನಿಗಳು ಹಸಿರು ನಿಶಾನ ತೋರಿರಲಿಲ್ಲ. ಅವರು ಆರೋಗ್ಯ ಕ್ಷೇತ್ರದಲ್ಲಿ ಒಳ್ಳೆಯ ಹೆಸರು ಮಾಡಿದ್ದಾರೆ. ಅವರನ್ನು ರಾಜಕೀಯಕ್ಕೆ ಯಾಕೆ ತರಬೇಕು ಎಂಬುದು ದೇವೇ ಗೌಡರ ವಾದವಾಗಿತ್ತು. ಆದರೆ, ಮಾಜಿ ಪ್ರಧಾನಿ ದೇವೇಗೌಡರನ್ನು ಭೇಟಿ ಮಾಡಿದ ಎಚ್.ಡಿ.ಕುಮಾರ ಸ್ವಾಮಿ ಡಾ.ಮಂಜುನಾಥ್ ಅವರನ್ನು ಕಣಕ್ಕಿಳಿಸುವ ಅನಿವಾರ್ಯತೆ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಎಚ್.ಡಿ.ಕುಮಾರಸ್ವಾಮಿ ಭೇಟಿ ಬಳಿಕ ಡಾ.ಮಂಜು ನಾಥ್ ಸ್ಪರ್ಧೆಗೆ ದೇವೇಗೌಡರು ಸಹಮತ ವ್ಯಕ್ತಪಡಿಸಿ ದ್ದಾರೆ ಎಂದು ಮೂಲಗಳು ತಿಳಿಸಿವೆ. ಇನ್ನು ಮಾಜಿ ಪ್ರಧಾನಿಗಳನ್ನು ಈ ವಿಚಾರಕ್ಕೆ ಎಂಎಲ್‌ಸಿ ಯೋಗೇಶ್ವರ್ ಭೇಟಿ ಮಾಡಿ ಮಾತುಕತೆ ನಡೆಸಿದ್ದರು.
– ಸು.ನಾ.ನಂದಕುಮಾರ್