ಬಾಗಲಕೋಟೆ: ಜಿಲ್ಲಾಡಳಿತ ಭವನದ ಎದುರಿಗೆ ಇರುವ ಉದ್ಯಾನವನದಲ್ಲಿ ನಿರ್ಮಿಸಲಾದ ಸಂವಿಧಾನ ಶಿಲ್ಪಿ ಡಾ| ಬಿ.ಆರ್.ಅಂಬೇಡ್ಕರ್ ಪುತ್ಥಳಿಯನ್ನು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಮಂಗಳವಾರ ಅನಾವರಣಗೊಳಿಸಿದರು.
ಅಂಬೇಡ್ಕರ ಪುತ್ಥಳಿ ಅನಾವರಣಗೊಳಿಸಿ ನಂತರ ಮಾತನಾಡಿದ ಅವರು, ಹಳೆಯ ಬಾಗಲಕೋಟೆ ಮುಳುಗಡೆಯಾದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಭವನದಲ್ಲಿ ಅಂಬೇಡ್ಕರ್ ಅವರ ಪುತ್ಥಳಿಯನ್ನು ನಿರ್ಮಿಸಲಾಗಿದೆ. ಇದಕ್ಕೆ ಒಟ್ಟು 67 ಲಕ್ಷ ರೂ.ಗಳ ವೆಚ್ಚ ಮಾಡಲಾಗಿದೆ ಎಂದರು.
ಉದ್ಯಾನವನ ಹಾಗೂ ಅಂಬೇಡ್ಕರ ಮೂರ್ತಿ ನಿರ್ವಹಣೆಗೆ ಓರ್ವ ಶಾಶ್ವತ ವ್ಯಕ್ತಿಯನ್ನು ನೇಮಿಸಲು ಕ್ರಮ ಕೈಗೊಳ್ಳಲಾಗುವುದು. ಈ ಉದ್ಯಾನವನವನ್ನು ಸುಂದರ ತಾಣವನ್ನಾಗಿ ಮಾಡಲು ಎಲ್ಲ ರೀತಿಯ ಪ್ರಯತ್ನ ಮಾಡಲಾಗುವುದೆಂದು ತಿಳಿಸಿದರು.
ಇದನ್ನೂ ಓದಿ:ಕೃಷಿ ಕಾಯ್ದೆ ರೈತರ ಪಾಲಿಗೆ ಮರಣ ಶಾಸನ
ಶಾಸಕ ಡಾ|ವೀರಣ್ಣ ಚರಂತಿಮಠ ಮಾತನಾಡಿ, ಹಳೆಯ ಬಾಗಲಕೋಟೆ ಮುಳುಗಡೆ ಹಿನ್ನೆಲೆಯಲ್ಲಿ ಅಂಬೇಡ್ಕರ ಮೂರ್ತಿ ಸ್ಥಳಾಂತರ ಮಾಡುವ ವಿಚಾರ ಬಂದಾಗ ಅಂದಿನ ಜಿಲ್ಲಾಧಿಕಾರಿ ಎ.ಎಂ. ಕುಂಜಪ್ಪ ಅವರ ಜತೆಗೆ ಚರ್ಚಿಸಿ ಜಿಲ್ಲಾಡಳಿತ ಭವನದಲ್ಲಿ ಅಂಬೇಡ್ಕರ ಮೂರ್ತಿ ನಿರ್ಮಿಸಲು ಒಪ್ಪಿಗೆ ಪಡೆಯಲಾಯಿತು. ಈ ನಿಟ್ಟಿನಲ್ಲಿ ನಗರಸಭೆಯಿಂದ ಅನುದಾನವನ್ನು ಭರಿಸಿ ಸುಂದರವಾದ ಅಂಬೇಡ್ಕರ ಪುತ್ಥಳಿ ನಿರ್ಮಿಸಲಾಗಿದೆ ಎಂದರು.
ಜಿಪಂ ಅಧ್ಯಕ್ಷೆ ಬಾಯಕ್ಕ ಮೇಟಿ, ಸಂಸದ ಪಿ.ಸಿ.ಗದ್ದಿಗೌಡರ, ನಗರಸಭೆ ಅಧ್ಯಕ್ಷೆ ಜ್ಯೋತಿ ಭಜಂತ್ರಿ, ತಾ.ಪಂ ಅಧ್ಯಕ್ಷ ಚನ್ನನಗೌಡರ ಪರನಗೌಡ್ರ, ಜಿಲ್ಲಾಧಿಕಾರಿ
ಕ್ಯಾಪ್ಟನ್ ಡಾ| ಕೆ.ರಾಜೇಂದ್ರ, ಜಿಪಂ ಸಿಇಒ ಟಿ.ಭೂಬಾಲನ್, ಎಸ್ಪಿ ಲೋಕೇಶ ಜಗಲಾಸರ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಯೋಜನಾ ನಿರ್ದೇಶಕ ಗಣಪತಿ ಪಾಟೀಲ,ನಗರಸಭೆ ಪೌರಾಯುಕ್ತ ಮುನಿಷಾಮಪ್ಪ ಮುಂತಾದವರು ಉಪಸ್ಥಿತರಿದ್ದರು.