ಮೈಸೂರು: ಸಂವಿಧಾನದ ಅರಿವಿದ್ದರೆ ನಾವು ಅನ್ಯಾಯಕ್ಕೆ ಒಳಗಾಗದೆ ಗೌರವಯುತ ಜೀವನ ನಡೆಸಬಹುದು ಎಂದು ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಅಭಿಪ್ರಾಯಪಟ್ಟರು.
ಡಾ.ಬಿ.ಆರ್.ಅಂಬೇಡ್ಕರ್ ಜನ್ಮದಿನ ಅಂಗವಾಗಿ ನಗರದ ಎನ್‌ಎಸ್‌ಎಸ್ ಭವನದಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಹಾಗೂ ಕರ್ನಾಟಕ ಜಾನಪದ ವಿಶ್ವವಿದ್ಯಾ ನಿಲಯ, ಗೋಟಗೋಡಿ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ “ಸಂವಿಧಾನ ಓದು’ ಒಂದು ದಿನದ ಕಾರ್ಯಾಗಾರದಲ್ಲಿ ಮಾತನಾಡಿದರು.
ಸಂವಿಧಾನವು ಪ್ರತಿಯೊಬ್ಬರ ಧರ್ಮ ಗ್ರಂಥವಾ ಗಬೇಕು. ಒಂದು ರಾಷ್ಟ್ರವನ್ನು ಯಶಸ್ವಿಯಾಗಿ ಮುನ್ನಡೆಸ ಬೇಕಾದರೆ ಸಂವಿಧಾನ ಅತ್ಯಗತ್ಯ. ಸಂವಿಧಾನದವಿಲ್ಲದ ದೇಶ ನಾವಿಕನಿಲ್ಲದ ಹಡಗಿನಂತೆ ಎಂದು ಬಣ್ಣಿಸಿದರು. ಸಂವಿಧಾನ ತಿಳಿಯುವುದು ಎಂದರೆ ನಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವುದು ಎಂದರ್ಥ. ಪ್ರಪಂಚಕ್ಕೆ ಒಂದು ಬೃಹತ್ ಲಿಖಿತ ಸಂವಿಧಾನ ನೀಡಿದ ಶ್ರೇಯಸ್ಸು ಅಂಬೇಡ್ಕರ್ ಅವರಿಗೆ ಸಲ್ಲಬೇಕು ಎಂದರು.
ಭಾರತ ವಿವಿಧ ಜಾತಿ, ಧರ್ಮ ಹಾಗೂ ಸಂಸ್ಕೃತಿ ಹೊಂದಿರುವ ವಿಶಿಷ್ಟ ರಾಷ್ಟ್ರವಾಗಿದ್ದು, ಇದನ್ನು ಗಮನದಲ್ಲಿ ಟ್ಟುಕೊಂಡು ಅಂಬೇಡ್ಕರ್ ಅವರ ಎಲ್ಲರನ್ನೂ ಒಳಗೊಳ್ಳುವಿಕೆಗೆ ಹೆಚ್ಚು ಒತ್ತು ನೀಡಿರುವು ಗಮನಾರ್ಹ ಎಂದು ಹೇಳಿದರು.
ನಿವೃತ ಪ್ರಾಧ್ಯಪಕ ಪ್ರೊ.ಎಚ್. ಎಂ.ರಾಜಶೇಖರ್ ಮಾತನಾಡಿ, ಬ್ರಿಟಿಷರಿಂದ ನಮಗೆ ಸ್ವಾತಂತ್ರ್ಯ ದೊರೆತು 74 ವರ್ಷ ಕಳೆದಿವೆ ನಮ್ಮ ಸಂವಿಧಾನದ ಆಶಯಗಳು ಎಷ್ಟರ ಮಟ್ಟಿಗೆ ಜಾರಿಗೊಂಡಿವೆ ಎಂಬುದರ ಬಗ್ಗೆ ಸಂಶೋಧನೆ ನಡೆಸುವ ಅವಶ್ಯಕತೆ ಇದೆ ಎಂದರು.
ಒಂದು ಸಮಾಜದಲ್ಲಿ ಐಕ್ಯತೆ ಮತ್ತು ಸಾಮರಸ್ಯ ಇಲ್ಲದಿದ್ದರೆ ಆ ದೇಶ ಎಂದಿಗೂ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ಭಾರತೀಯ ಸಂವಿಧಾನಕ್ಕೆ ಮಾನವೀಯ ಮುಖವಿದೆ. ಅದನ್ನು ಅರ್ಥ ಮಾಡಿಕೊಳ್ಳುವ ಹಾಗೂ ಅನುಷ್ಠಾನಕ್ಕೆ ತರುವವರ ಆಧಾರದ ಮೇಲೆ ಅದರ ಯಶಸ್ಸು ಆವಲಂಭಿಸಿದೆ ಎಂದು ಅಂಬೇಡ್ಕರ್ ತಿಳಿಸಿರುವುದನ್ನು ನಾವು ಮರೆಯಬಾರದು ಎಂದು ತಿಳಿಸಿದರು.
ಡಾ.ಮಲ್ಲಿಕಾರ್ಜುನ ಬಿ.ಮಾನ್ಪಡೆ, ಪ್ರೊ.ಬಿ.ಚಂದ್ರಶೇಖರ, ಡಾ.ಎಂ.ಬಿ ಸುರೇಶ ಹಾಗೂ ಕಾಳಚನ್ನೇಗೌಡ ಇದ್ದರು.