Advertisement

ಕ್ಯಾನ್ಸರ್‌ಗೆ ಸುಧಾರಿತ ಚಿಕಿತ್ಸೆ ಲಭ್ಯ: ಡಾ|ಭಟ್ನಗರ್‌

11:58 PM Jan 07, 2023 | Team Udayavani |

ಮಣಿಪಾಲ: ಪ್ರತೀ ರೋಗಿಯ ರೋಗದ ಹಿನ್ನೆಲೆ ಮತ್ತು ಜೀನ್‌ ವಿಭಿನ್ನವಾಗಿರುತ್ತದೆ. ಇದನ್ನರಿತು ಚಿಕಿತ್ಸೆ ನೀಡಬೇಕಾಗುತ್ತದೆ. ಕ್ಯಾನ್ಸರ್‌ ಎರಡನೇ ಹಂತಕ್ಕೆ ತಲುಪಿದರೂ ಚಿಕಿತ್ಸೆ ನೀಡಬಹುದಾದ ತಂತ್ರಜ್ಞಾನ ಪ್ರಸ್ತುತ ಅಭಿವೃದ್ಧಿಯಾಗಿದೆ ಎಂದು ಕೇಂದ್ರ ಸರಕಾರದ ನ್ಯಾಶನಲ್‌ ಕ್ಯಾನ್ಸರ್‌ ಸೆಂಟರ್‌ನ ಮುಖ್ಯಸ್ಥೆ ಡಾ| ಸುಷ್ಮಾ ಭಟ್ನಗರ್‌ ಹೇಳಿದರು.

Advertisement

ಮಣಿಪಾಲ ಸಮಗ್ರ ಕ್ಯಾನ್ಸರ್‌ ಕೇರ್‌ ಸೆಂಟರ್‌, ಕಸ್ತೂರ್ಬಾ ವೈದ್ಯಕೀಯ ಆಸ್ಪತ್ರೆ, ಗ್ಲೋಬಲ್‌ ಕ್ಯಾನ್ಸರ್‌ ಒಕ್ಕೂಟದ ಆಶ್ರಯದಲ್ಲಿ ಶನಿವಾರ ವ್ಯಾಲಿ ವ್ಯೂ ಹೊಟೇಲ್‌ನಲ್ಲಿ ಹಮ್ಮಿಕೊಂಡಿದ್ದ 2ನೇ ಅಂತಾರಾಷ್ಟ್ರೀಯ ಗ್ಲೋಬಲ್‌ ಕ್ಯಾನ್ಸರ್‌ ಒಕ್ಕೂಟ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಸ್ತುತ ಕ್ಯಾನ್ಸರ್‌ ಚಿಕಿತ್ಸಾ ವಿಧಾನದಲ್ಲಿ ಸಾಕಷ್ಟು ಸುಧಾರಣೆಗಳಾಗಿವೆ. ಆರಂಭಿಕ ಹಂತ ಮೀರಿ ಹೋದ ಅನಂತರದಲ್ಲಿಯೂ ಚಿಕಿತ್ಸೆ ನೀಡಬಹುದಾದ ತಂತ್ರ ಜ್ಞಾನಗಳು ಅಭಿವೃದ್ಧಿಯಾಗಿವೆ. ಇದೆಲ್ಲವನ್ನು ಸಮರ್ಪಕವಾಗಿ ಬಳಸಿಕೊಂಡು ರೋಗಿಗೆ ಉತ್ತಮ ರೀತಿಯಲ್ಲಿ ಚಿಕಿತ್ಸೆ ದೊರೆಯುವಂತೆ ಆಗಬೇಕು ಎಂದರು.

ಜಾಗೃತಿ ಕಾರ್ಯ ಯುಎಸ್‌ಎ ಕೆನ್‌ಟೂಕೀ ವಿಶ್ವ ವಿದ್ಯಾನಿಲಯದ ಮಾರ್ಕಿ ಕ್ಯಾನ್ಸರ್‌ ಸೆಂಟರ್‌ನ ಟ್ರಾನ್ಸ್‌ಡಿಸಿಪ್ಲಿನರಿ ಕೊಲಾಬ್ರೆಷನ್‌ನ ಸಹ ನಿರ್ದೇಶಕ ಡಾ| ವಿವೇಕ್‌ ಎಂ. ರಂಗ್ನೇಕರ್‌ ಮಾತನಾಡಿ, ಗ್ಲೋಬಲ್‌ ಕ್ಯಾನ್ಸರ್‌ ಒಕ್ಕೂಟವು ಕ್ಯಾನ್ಸರ್‌ ಕುರಿತಾಗಿ ಶಿಕ್ಷಣ, ಸಂಶೋಧನೆ ಹಾಗೂ ಸಮುದಾಯಗಳಲ್ಲಿ ಅರಿವು ಮೂಡಿಸುವ ಕಾರ್ಯ ಮಾಡುತ್ತಿದೆ. ಮಹೆ ವಿ.ವಿ. ಸಹಿತವಾಗಿ ಜಾಗತಿಕ ಮಟ್ಟದಲ್ಲಿ ಕೆಲವು ವಿ.ವಿ.ಗಳು ಇದರಲ್ಲಿವೆ. ಕ್ಯಾನ್ಸರ್‌ಗೆ ಚಿಕಿತ್ಸೆ ನೀಡುವುದು ಮಾತ್ರವಲ್ಲ. ಅಡ್ಡಪರಿಣಾಮಗಳು ಆಗದಂತೆ ಜಾಗ್ರತೆ ವಹಿಸುವುದು ನಮ್ಮ ಆದ್ಯತೆಯಾಗಿದೆ ಎಂದರು.
ಮಾಹೆ ಹೆಲ್ತ್‌ಸೈನ್ಸ್‌ ವಿಭಾಗದ ಸಹ ಕುಲಪತಿ ಡಾ| ಶರತ್‌ ಕುಮಾರ್‌ ರಾವ್‌ ಮಾತನಾಡಿ, ಮಾಹೆ ಮತ್ತು ಕಸ್ತೂರ್ಬಾ ವೈದ್ಯಕೀಯ ಕಾಲೇಜು ಕ್ಯಾನ್ಸರ್‌ ಚಿಕಿತ್ಸೆ ಹಾಗೂ ಅರಿವು ನಿಟ್ಟಿನಲ್ಲಿ ಯಾವ ರೀತಿಯ ಕ್ರಮ ಕೈಗೊಳ್ಳುತ್ತಿದೆ ಎಂದು ವಿವರಿಸಿದರು.

ಆಂಕಾಲಜಿ ವಿಭಾಗದ ಮುಖ್ಯಸ್ಥ ಹಾಗೂ ಸಮ್ಮೇಳನದ ಅಧ್ಯಕ್ಷ ಡಾ| ಕಾರ್ತಿಕ್‌ ಎಸ್‌. ಉಡುಪ, ವೈದ್ಯಕೀಯ ಕ್ಯಾನ್ಸರ್‌ ವಿಭಾಗದ ಸಹ ಪ್ರಾಧ್ಯಾಪಕ ಡಾ| ಅನಂತ ಪೈ ಉಪಸ್ಥಿತರಿದ್ದರು.
ಕೆಎಂಸಿ ಡೀನ್‌ ಡಾ| ಪದ್ಮರಾಜ್‌ ಹೆಗ್ಡೆ ಸ್ವಾಗತಿಸಿದರು. ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ| ಅವಿನಾಶ್‌ ಶೆಟ್ಟಿ ವಂದಿಸಿದರು. ಡಾ| ಕೃತಿಕಾ ನಿರೂಪಿಸಿದರು.

Advertisement

ಸಾವಿನ ಭೀತಿ ಅನಗತ್ಯ: ಡಾ| ಬಲ್ಲಾಳ್‌
ಅಧ್ಯಕ್ಷತೆ ವಹಿಸಿದ್ದ ಮಾಹೆ ವಿ.ವಿ.ಯ ಸಹ ಕುಲಾಧಿಪತಿ ಡಾ| ಎಚ್‌.ಎಸ್‌. ಬಲ್ಲಾಳ್‌ ಮಾತನಾಡಿ, ಕ್ಯಾನ್ಸರ್‌ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಮಾಹೆ ವಿ.ವಿ. ಹಾಗೂ ಕಸ್ತೂರ್ಬಾ ಆಸ್ಪತ್ರೆ ಸಾಕಷ್ಟು ಕೆಲಸ ಮಾಡುತ್ತಿದೆ. ಗ್ರಾಮೀಣ ಭಾಗದಲ್ಲಿ ಕ್ಯಾನ್ಸರ್‌ ಬಗ್ಗೆ ಹೆಚ್ಚೆಚ್ಚು ಅರಿವು ಮೂಡಿಸುವ ಕಾರ್ಯ ಆಗಬೇಕಿದೆ. ಕ್ಯಾನ್ಸರ್‌ ಬಂತು ಎಂದರೆ ಸಾವು ಬಂತು ಎಂಬ ಕಲ್ಪನೆ ಸರಿಯಲ್ಲ. ಚಿಕಿತ್ಸೆ ನೀಡುವ ಅನೇಕ ಸುಧಾರಿತ ತಂತ್ರಜ್ಞಾನಗಳು ಅಭಿವೃದ್ಧಿಯಾಗಿವೆ. ಮಾಹೆ ವಿ.ವಿ. ಪ್ರತೀ ವರ್ಷ ಕ್ಯಾನ್ಸರ್‌ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಮ್ಯಾರಥಾನ್‌
ಕೂಡ ನಡೆಸಿಕೊಂಡು ಬರುತ್ತಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next