ಗಂಗಾವತಿ: ಸ್ವಾಭಿಮಾನದ ಸಂಕೇತವೇ ಸಂವಿಧಾನದ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಆಗಿದ್ದು, ಶೋಷಿತರೆಲ್ಲ ಶಿಕ್ಷಣ ಪಡೆದು ಮುಖ್ಯವಾಹಿನಿಗೆ ಬರುವಂತೆ ಶತಣಸಾಹಿತಿ, ದಂತ ವೈದ್ಯ ಡಾ. ಶಿವಕುಮಾರ ಮಾಲೀಪಾಟೀಲ್ ಹೇಳಿದರು.
ಅವರು ನಗರದ ವಿರುಪಾಪುರ ತಾಂಡಾ ಮರಿಯಮ್ಮ ದೇವಸ್ಥಾನದ ಆವರಣದಲ್ಲಿ ದಲಿತ ಸಾಹಿತ್ಯ ಪರಿಷತ್ ಹಮ್ಮಿಕೊಂಡಿದ್ದ ‘ಮನೆ ಮನೆಗೆ ಅಂಬೇಡ್ಕರ್ ನಮ್ಮ ನಡಿಗೆ ಅರಿವಿನೆಡೆಗೆ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ದೇಶದ ಎಸ್ಸಿ, ಎಸ್ ಟಿ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ವರ್ಗಗಳು ಮತ್ತು ಬಡವರ್ಗಗಳ ಪ್ರತಿನಿಧಿಯಾಗಿ ಅಂಬೇಡ್ಕರ್ ಕಾಣುತ್ತಿದ್ದಾರೆ. ಶೋಷಣೆಯನ್ನು ಸ್ವತಹ ಅನುಭವಿಸಿದ್ದರಿಂದ ಸಂವಿಧಾನ ರಚನಾ ಸಂದರ್ಭದಲ್ಲಿ ಶೋಷಿತ ವರ್ಗಗಳಿಗೆ ಅವಕಾಶ ಕಲ್ಪಿಸಲು ಕಾನೂನು ಜಾರಿಗೆ ತಂದರು. ಅವರಂತೆ ಎಲ್ಲರೂ ವಿದ್ಯಾಭ್ಯಾಸದ ಮೂಲಕ ಸ್ಥಾನಮಾನ ಜ್ಞಾನ ಗಳಿಸಿ ಶೋಷಿತ ಸಮುದಾಯಗಳ ಪರವಾಗಿ ಕೆಲಸ ಮಾಡಿ ಸಮ ಸಮಾಜ ನಿರ್ಮಿಸಬೇಕಿದೆ ಎಂದರು.
ಪ್ರಾಚಾರ್ಯ ಬಸಪ್ಪ ನಾಗೋಲಿ ಮಾತನಾಡಿ, ಡಾ. ಅಂಬೇಡ್ಕರ್, ಬುದ್ಧ, ಬಸವ ಇವರೆಲ್ಲ ಸಮ ಸಮಾಜದ ಕನಸು ಕಂಡು ಅನುಷ್ಠಾನ ಮಾಡಲು ಯತ್ನಿಸಿದವರು. ಅಂಬೇಡ್ಕರ್ ಸಂವಿಧಾನದ ಮೂಲಕ ಶೋಷಿತ ಸಮುದಾಯಗಳಿಗೆ ಸರಕಾರದ ಯೋಜನೆಗಳು ತಲುಪುವಂತೆ ಮಾಡಿದ್ದು, ಸರಕಾರದ ಯೋಜನೆಗಳನ್ನು ಸದುಪಯೋಗ ಮಾಡಿಕೊಂಡು ಮುಖ್ಯವಾಹಿನಿಗೆ ಬರಯವಂತೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ವಿರೂಪಾಪೂರ ತಾಂಡದ ಪ್ರಮುಖರಾದ ರಾಮ್ ನಾಯಕ್, ಶಿವಪ್ಪ ಜಾಗೋಗೋರ, ವೆಂಕಟೇಶ ಜಾಧವ, ರವಿ, ಕೃಷ್ಣ, ರವಿ ಕೊಡಾವತ್, ಶಂಕರ್, ದಲಿತ ಸಾಹಿತ್ಯ ಪರಿಷತ್ ಗೌರವಾಧ್ಯಕ್ಷ ಕೆ. ನಿಂಗಜ್ಜ, ಅಧ್ಯಕ್ಷ ಛತ್ರಪ್ಪ ತಂಬೂರಿ, ಕಾರ್ಯದರ್ಶಿ ಮೈಲಾರಪ್ಪ ಬೂದಿಹಾಳ್, ರಮೇಶ್ ಗಬ್ಬೂರ್, ಶ್ರೀನಿವಾಸ್ ಉಪ್ಪಾರ್, ರಾಮಣ್ಣ ಸೇರಿದಂತೆ ಅನೇಕರಿದ್ದರು.