ಮಂಗಳೂರು: ಮಂಗಳೂರು ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಅವರು ಬೆಂಗಳೂರಿಗೆ ವರ್ಗಾವಣೆಗೊಂಡಿದ್ದು, ತೆರವಾದ ಸ್ಥಾನಕ್ಕೆ ಡಾ| ಎ. ಸುಬ್ರಹ್ಮಣ್ಯೇಶ್ವರ ರಾವ್ ಅವರನ್ನು ನೇಮಕ ಮಾಡಲಾಗಿದೆ.
ಸಂದೀಪ್ ಪಾಟೀಲ್ 2019 ಫೆ. 22ರಂದು ಮಂಗಳೂರಿನ ಪೊಲೀಸ್ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ್ದರು. ಕೇವಲ 5 ತಿಂಗಳ ಅವಧಿ ಯಲ್ಲಿ ನಗರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು, ಶಾಂತಿ ಸೌಹಾರ್ದದ ವಾತಾವರಣ ಸೃಷ್ಟಿಸಲು ಪ್ರಯತ್ನಿಸುವ ಮೂಲಕ ಜನಸ್ನೇಹಿ ಪೊಲೀಸ್ ಎಂಬ ಕೀರ್ತಿಗೆ ಪಾತ್ರರಾಗಿದ್ದರು.
ಸಂದೀಪ್ ಪಾಟೀಲ್ ವಿಶೇಷವಾಗಿ ಡ್ರಗ್ ಮಾಫಿಯಾ ಮತ್ತು ರೌಡಿ ಚಟುವಟಿಕೆಗಳ ವಿರುದ್ಧ ಸಮರ ಸಾರಿ, ಪ್ರತಿರೋಧ ತೋರಿದ ರೌಡಿಗಳ ವಿರುದ್ಧ ಶೂಟೌಟ್ ನಡೆಸಿ ರೌಡಿ ಶೀಟರ್‌ಗಳಲ್ಲಿ ಭಯ ಹುಟ್ಟಿಸಲು ಪ್ರಯತ್ನಿಸಿದ್ದರು. ದನ ಕಳ್ಳರ ವಿರುದ್ಧವೂ ಕಠಿನ ಕ್ರಮಕ್ಕೆ ಮುಂದಾಗಿ ಅನೇಕ ಮಂದಿ ಆರೋಪಿಗಳನ್ನು ಮತ್ತು ಗಾಂಜಾ ಆರೋಪಿಗಳನ್ನು ಬಂಧಿಸಿದ್ದರು. ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದ ಹಲವು ಮಂದಿ ಬುಕ್ಕಿಗಳನ್ನು ಬಂಧಿಸಿದ್ದರು. ಹತ್ತಾರು ವರ್ಷಗಳಿಂದ ಹಲವಾರು ಪ್ರಕರಣಗಳಲ್ಲಿ ಬೇಕಾಗಿದ್ದು, ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿಗಳನ್ನು ಪತ್ತೆ ಮಾಡಿ ಜೈಲಿಗಟ್ಟಿದ್ದರು.
ನಗರದ ಸಂಚಾರ ವ್ಯವಸ್ಥೆ ಸುಧಾರಣೆಯ ಅವರ ಉಪಕ್ರಮಗಳು ಯಶಸ್ವಿಯಾಗಿದ್ದವು. ಮಕ್ಕಳನ್ನು ಶಾಲೆಗೆ ಕರೆದೊಯ್ಯುವ ವಾಹನಗಳಿಗೂ ನಿಯಮ ಪಾಲಿಸುವುದಕ್ಕೆ ಕ್ರಮ ಜರಗಿಸಿದ್ದರು. ಪ್ರಮುಖ ಶಾಲೆಗಳ ಮುಂದೆ ಮಕ್ಕಳು ಬಂದು-ಹೋಗುವ ಸಮಯದಲ್ಲಿ ಸಂಚಾರ ಪೊಲೀಸರನ್ನು ನಿಯೋಜಿಸಿದ್ದರು. ಮಾಹಿತಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿಯೂ ಸ್ವತಃ ಹಂಚಿಕೊಳ್ಳುವ ಮೂಲಕ ತಪ್ಪು ಸಂದೇಶ ರವಾನೆಯಾಗದಂತೆ ಮುತು ವರ್ಜಿ ವಹಿಸಿದ್ದರು.
ನಗರದ ನೂತನ ಪೊಲೀಸ್ ಆಯುಕ್ತರಾಗಿ ನಿಯುಕ್ತರಾ ಗಿರುವ ಡಾ| ಎ. ಸುಬ್ರಹ್ಮಣ್ಯೇಶ್ವರ ರಾವ್ ಇದುವರೆಗೆ ಬೆಂಗಳೂರಿನಲ್ಲಿ ಗುಪ್ತಚರ ವಿಭಾಗದ ಡಿಐಜಿಪಿ ಆಗಿದ್ದರು. ಅವರು 2009- 2011ರ ಅವಧಿಯಲ್ಲಿ ದಕ್ಷಿಣ ಕನ್ನಡ ಎಸ್‌ಪಿ ಮತ್ತು 2004-2006 ಅವಧಿಯಲ್ಲಿ ಪುತ್ತೂರಿನಲ್ಲಿ ಎಎಸ್‌ಪಿ ಆಗಿ ಸೇವೆ ಸಲ್ಲಿಸಿದ್ದಾರೆ. ಎಸ್‌ಪಿ ಆಗಿದ್ದ 2010ರಲ್ಲಿ ಮಂಗಳೂರು ಪೊಲೀಸ್ ಕಮಿಷನರೆಟ್ ಸ್ಥಾಪನೆಯಾಗಿತ್ತು. ಸಯನೈಡ್ ಕಿಲ್ಲರ್ ಮೋಹನ್ ಪ್ರಕರಣ ಮತ್ತು ಇತರ ಹಲವು ಪ್ರಕರಣಗಳನ್ನು ಭೇದಿಸಲಾಗಿತ್ತು.
ಡಿಸಿಪಿ ಹನುಮಂತರಾಯ ವರ್ಗ; ದಾವಣಗೆರೆ ಎಸ್‌ಪಿ ಆಗಿ ನಿಯುಕ್ತಿ ನಗರದ ಕಾನೂನು ಸುವ್ಯವಸ್ಥೆ ವಿಭಾಗದ ಪೊಲೀಸ್ ಉಪ ಆಯುಕ್ತ (ಡಿಸಿಪಿ) ಹನುಮಂತರಾಯ ಅವರನ್ನು ದಾವಣಗೆರೆ ಎಸ್‌ಪಿ ಆಗಿ ನೇಮಕಗೊಳಿಸಿ ಸರಕಾರ ಆದೇಶ ಹೊರಡಿಸಿದೆ. ತೆರವಾದ ಸ್ಥಾನಕ್ಕೆ ಯಾರನ್ನೂ ನಿಯುಕ್ತಿಗೊಳಿಸಿಲ್ಲ.
ಹನುಮಂತ ರಾಯ 2018ರ ಜೂ. 8ರಂದು ಮಂಗಳೂರು ನಗರ ಸಂಚಾರ ಮತ್ತು ಅಪರಾಧ ವಿಭಾಗದ ಉಪ ಪೊಲೀಸ್ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ್ದರು. ಆ ಬಳಿಕ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಶಾಂತರಾಜು ಅವರಿಂದ ತೆರವಾದ ಸ್ಥಾನಕ್ಕೆ ಹನುಮಂತರಾಯ ನಿಯುಕ್ತಿಗೊಂಡಿದ್ದರು.