ಹೊಸದಿಲ್ಲಿ: ಟೀಂ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಅವರು ಇದೀಗ ವಿಕೆಟ್ ಕೀಪಿಂಗ್ ಗ್ಲೌಸ್ ಬಿಟ್ಟು ಬೌಲಿಂಗ್ ಮಾಡಿ ಮಿಂಚಿದ್ದಾರೆ. ಚೊಚ್ಚಲ ಡೆಲ್ಲಿ ಪ್ರೀಮಿಯರ್ ಲೀಗ್ ನಲ್ಲಿ ಭಾಗವಹಿಸಿರುವ ರಿಷಭ್ ಪಂತ್ ಅವರು ಬೌಲಿಂಗ್ ಮಾಡಿ ಅಚ್ಚರಿ ಮೂಡಿಸಿದ್ದಾರೆ.
ಅವರು ಶನಿವಾರದಂದು ಪುರಾನಿ ಡಿಲ್ಲಿ 6 ಮತ್ತು ಸೌತ್ ದೆಹಲಿ ಸೂಪರ್‌ಸ್ಟಾರ್ಸ್ ನಡುವಿನ ಡೆಲ್ಲಿ ಪ್ರೀಮಿಯರ್ ಲೀಗ್ ಪಂದ್ಯದ ಅಂತಿಮ ಓವರ್ ನಲ್ಲಿ ಬೌಲಿಂಗ್ ಮಾಡಿದರು.
ಪಂತ್ ಬೌಲಿಂಗ್ ಮಾಡುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಗೌತಮ್ ಗಂಭೀರ್ ಅವರ ಇತ್ತೀಚೆಗೆ ಭಾರತ ಮುಖ್ಯ ಕೋಚ್ ಆಗಿ ನೇಮಕಗೊಂಡ ಬಳಿಕ ಸೂರ್ಯಕುಮಾರ್ ಯಾದವ್, ಶುಭಮನ್ ಗಿಲ್ ಮತ್ತು ರೋಹಿತ್ ಶರ್ಮಾ ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಬೌಲಿಂಗ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹಲವರು ಇದೀಗ ಪಂತ್ ಬೌಲಿಂಗ್ ವಿಚಾರವನ್ನು ಅದಕ್ಕೆ ತಳುಕು ಹಾಕಿದ್ದಾರೆ.
ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಚೊಚ್ಚಲ ಡೆಲ್ಲಿ ಪ್ರೀಮಿಯರ್ ಲೀಗ್ ನ ಮೊದಲ ಪಂದ್ಯದಲ್ಲಿ ಸೌತ್ ದೆಹಲಿ ಸೂಪರ್‌ಸ್ಟಾರ್ಸ್ ಮೂರು ವಿಕೆಟ್ ಅಂತರದ ಗೆಲುವು ಸಾಧಿಸಿತು. ಪಂತ್ ಪ್ರತಿನಿಧಿಸಿದ ತಂಡವು ಸೋಲು ಕಂಡಿತು.
ಮೊದಲು ಬ್ಯಾಟಿಂಗ್ ಮಾಡಿದ ಪುರಾನಿ ಡಿಲ್ಲಿ6 ತಂಡವು ಅರ್ಪಿತ್ ರಾಣಾ ಅವರು 51 ರನ್ ಮತ್ತು ವನ್ಶ್ ಬೇಡಿ ಅವರ 47 ರನ್ ಸಹಾಯದಿಂದ ಮೂರು ವಿಕೆಟ್ ನಷ್ಟಕ್ಕೆ 197 ರನ್ ಗಳಿಸಿತು. ಆದರೆ ಸೌತ್ ದೆಹಲಿ ಸೂಪರ್‌ಸ್ಟಾರ್ಸ್ ತಂಡವು 19.1 ಓವರ್ ಗಳಲ್ಲಿ ಏಳು ವಿಕೆಟ್ ಕಳೆದುಕೊಂಡು ಗುರಿ ತಲುಪಿತು.
ಪುರಾನಿ ದಿಲ್ಲಿ ತಂಡದ ಸ್ಟಾರ್ ಬ್ಯಾಟರ್ ರಿಷಭ್ ಪಂತ್ ಅವರು ನಿರಾಸೆ ಮೂಡಿಸಿದರು. ನಾಯಕ ಪಂತ್ 35 ರನ್ ಗಳಿಸಿದರೂ ಅದಕ್ಕೆ 32 ಎಸೆತಗಳನ್ನು ಬಳಿಸಿದರು. ಎದುರಾಳಿ ತಂಡದಲ್ಲಿ ರಾಷ್ಟ್ರೀಯ ತಂಡದಲ್ಲಿ ಆಡಿದ ಯಾವುದೇ ಬೌಲರ್ ಇರಲಿಲ್ಲ.