ಕೆ.ಆರ್.ಪುರ: ಬಾರಿ ಮಳೆಯಿಂದ ನಗರದಲ್ಲಿ ಸಂಭವಿಸಿರುವ ಅನಾಹುತಗಳು ಒಂದರೆಡಲ್ಲ. ಅದಕ್ಕೆ ಸಾಕ್ಷಿ ಎಂಬಂತೆ ಕಲ್ಕೆರೆ ಕೆರೆ ಕೊಡಿ ಕೂಡ ಒಡೆದಿದ್ದು ಬಾರಿ ಅನಾಹುತ ಉಂಟು ಮಾಡಿದೆ. ಪೇಟೆ ಕೃಷ್ಣಪ್ಪ ಬಡಾವಣೆ ಸಂಪೂರ್ಣವಾಗಿ ಜಲಾವೃತಗೊಂಡು ನಿವಾಸಿಗಳು ಮನೆಯಿಂದ ಹೊರಬರಲು ಸಾಧ್ಯವಾಗದೆ ನಡುಗಡ್ಡೆಯ ಜೀವನ ಸಾಗಿಸುತ್ತಿದ್ದಾರೆ.
ಕಲ್ಕೆರೆ ಪಕ್ಕದಲ್ಲಿರುವ ಚನ್ನಸಂದ್ರ ಪೇಟೆ ಕೃಷ್ಣಪ್ಪಬಡಾವಣೆ ಕೆರೆಯಂತಾಗಿದ್ದು ಜನರ ಮನೆಯಿಂದ ಹೊರಬರಲೂ ಸಾಧ್ಯವಾಗುತ್ತಿಲ್ಲ. “ಅಧಿಕಾರಿಗಳಿಗೆ ಕರೆ ಮಾಡಿದರು ಯಾವುದೆ ಪ್ರಯೋಜನವಾಗಿಲ್ಲ. ಆಹಾರ, ಔಷಧವಿಲ್ಲದೆ ನಾವು ಪರದಾಡುವಂತಾಗಿದೆ. ಬಡಾವಣೆಯ ಪೂರ್ತಿ 4 ಅಡಿಗಷ್ಟು ನೀರು ನಿಂತಿದ್ದು, ವಿಷಜಂತುಗಳು ನೀರಿನಲ್ಲಿ ತೇಲಿ ಮನೆಗಳಿಗೆ ನುಗ್ಗುತ್ತಿವೆ. ಇನ್ನೊಂದೆಡೆ ಸಾಂಕ್ರಮಿಕ ರೋಗ ಹರಡುವ ಭೀತಿಯೂ ಕಾಡುತ್ತಿದೆ.
ಎರಡು ದಿನಗಳಿಂದ ಬಾಹ್ಯ ಜಗತ್ತಿನ ಸಂಪರ್ಕವಿಲ್ಲದೆ ಪ್ರಾಣ ಭೀತಿ ಎದುರಿಸಿದ್ದೇವೆ,’ ಎಂದು ನಾಗರಿಕರು ಅಳಲು ತೋಡಿಕೊಂಡಿದ್ದಾರೆ. ಕಲ್ಕೆರೆಯಿಂದ ರಾಂಪುರ ಕೆರೆಗೆ ಹಾದು ಹೋಗುವ ರಾಜಕಾಲುವೆ ಸಂಪೂರ್ಣ ಒತ್ತುವರಿಯಾಗಿದೆ. ಭಾನುವಾರ ಸುರಿದ ಭಾರೀ ಮಳೆಯಿಂದ ಕಲ್ಕೆರೆ ಕೆರೆ ಕೋಡಿ ಒಡೆದಿದೆ. ಪೇಟೆ ಕೃಷ್ಣಪ್ಪ ಬಡಾವಣೆ ಕೆರೆಯ ಪಕ್ಕದ ಜನವಸತಿ ಪ್ರದೇಶವಾದ್ದರಿಂದ ನೀರೆಲ್ಲ ಮನೆಗಳಿಗೆ ನುಗ್ಗಿದೆ.
“ಮನೆಯಲ್ಲಿ ಧವಸ ಧಾನ್ಯ, ಪೀಠೊಪಕರಣಗಳು, ಎಲೆಕ್ಟ್ರಿಕ್ ಉಪಕರಣಗಳು ಸೇರಿ ಅಪಾರ ಪ್ರಮಾಣದ ಹಾನಿಯಾಗಿವೆ. ಮಂಗಳವಾರ ಸ್ಥಳಕ್ಕೆ ಬಂದ ಬಿಬಿಎಂಪಿ ಅಧಿಕಾರಿ ಮತ್ತೆ ಇತ್ತಕಡೆ ಸುಳಿಯಲೂ ಇಲ್ಲ. ಕಾಟಾಚಾರಕ್ಕೆ ಬಂದು ಹೋಗಿದ್ದಾರೆ ನಾವು ಮನೆ ನಿರ್ಮಿಸುವ ಮುಂಚೆ ಈ ಪ್ರದೇಶ ಎತ್ತರವಿತ್ತು. ಆದರೆ, ಇತ್ತೀಚೆಗೆ ಬಡಾವಣೆಯ ಅಕ್ಕಪಕ್ಕ ಕಟ್ಟಡ ತ್ಯಾಜ್ಯ ತುಂಬಿದ್ದರಿಂದ ನಾವಿರುವ ಪ್ರದೇಶ ತಗ್ಗಾಗಿದೆ.
ರಾಜಕಾಲುವೆಯನ್ನು ಮುಚ್ಚಿರುವುದರಿಂದ ಮಳೆ ನೀರು ಬೇರಡೆ ಹರಿಯಲು ಸಾಧ್ಯವಾಗದೆ ಮನೆಯೊಳಕ್ಕೆ ಬರುತ್ತಿದೆ ಎಂದು ನಿವಾಸಿಯೊಬ್ಬರು ಬೇಸರ ವ್ಯಕ್ತಪಡಿಸಿದರು. ಮಂಗಳವಾರ ಸಂಜೆ ಸ್ಥಳೀಯರು ಮತ್ತು ಪಾಲಿಕೆ ಸದಸ್ಯೆ ಪದ್ಮಾವತಿ ಶ್ರೀನಿವಾಸ್ ಜೊತೆಗೂಡಿ ಬಡಾವಣೆ ಜನರಿಗೆ ಆಹಾರದ ವ್ಯವಸ್ಥೆ ಮಾಡಿದರು. ಜತೆಗೆ ಧವಸ ಧಾನ್ಯ ಮತ್ತು ನೀರು ನೀಡಿ ಸಂತ್ರಸ್ತರಿಗೆ ನೆರವಾದರು.