ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ನಾಗರಿಕರ ಜೀವ ಹಿಂಡುತ್ತಿರುವ ಟೋಯಿಂಗ್ ಮಾಫಿಯಾಕ್ಕೆ ರಾಜ್ಯ ಸರಕಾರ ಅಂಕುಶ ಹಾಕುವ ಸಾಧ್ಯತೆ ಕ್ಷೀಣವಾಗಿದ್ದು, ಗೃಹ ಸಚಿವ ಆರಗ ಜ್ಞಾನೇಂದ್ರ ನೇತೃತ್ವದಲ್ಲಿ ಬುಧವಾರ ಮಹತ್ವದ ಸಭೆ ನಡೆಯಲಿದೆ.
ವಿಕಾಸ ಸೌಧದಲ್ಲಿರುವ ಸಚಿವರ ಕಚೇರಿಯಲ್ಲಿ ಇಂದು ಸಂಜೆ ಆರು ಗಂಟೆಗೆ ಸಭೆ ನಡೆಯಲಿದ್ದು, ಗೃಹ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯೆಲ್, ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್, ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂಥ್, ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಭಾಗವಹಿಸಲಿದ್ದಾರೆ.
ಎರಡು ದಿನಗಳ ಹಿಂದೆ ಸಿಎಂ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಟೋಯಿಂಗ್ ವ್ಯವಸ್ಥೆಗೆ ಸಂಬಂಧಪಟ್ಟಂತೆ ನಿಯಮ ಬದಲಾವಣೆ ಮಾಡಲು ಸೂಚನೆ ನೀಡಲಾಗಿದೆ. ಆದರೆ ಗೃಹ ಇಲಾಖೆ ಹಾಗೂ ಪೊಲೀಸರ ಧೋರಣೆ ಟೋಯಿಂಗ್ ವ್ಯವಸ್ಥೆಯನ್ನು ಸುಧಾರಣೆ ಮಾಡುವ ಸ್ಥಿತಿಯಲ್ಲಿ ಇಲ್ಲ. ಇಷ್ಟು ದಿನಗಳ ಕಾಲ ಸಂಚಾರ ಪೊಲೀಸರ ರ‍್ತನೆ ವಿರುದ್ಧ ಮಾತನಾಡುತ್ತಿದ್ದ ಗೃಹ ಸಚಿವ ಆರಗ ಜ್ಞಾನೇಂದ್ರ ಈಗ ಪೊಲೀಸರ ರಾಗಕ್ಕೆ ತಾಳ ಹಾಕಲಾರಂಭಿಸಿದ್ದಾರೆ. ಹೀಗಾಗಿ ಟೋಯಿಂಗ್ ಮಾಫಿಯಾಕ್ಕೆ ತಡೆ ಬೀಳುವ ಸಾಧ್ಯತೆ ಕಡಿಮೆ ಇದೆ ಎಂದು ಪೊಲೀಸ್ ಮೂಲಗಳು ಹೇಳುತ್ತಿವೆ.
ಸಂಚಾರ ಪೊಲೀಸರ ರ‍್ತನೆ ಬಗ್ಗೆ ಬಿಜೆಪಿ ವಲಯದಲ್ಲೇ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಇದು ಬಿಬಿಎಂಪಿ ಚುನಾವಣೆ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಪೊಲೀಸರ ವರ್ತನೆಯಿಂದ ನಾಗರಿಕರು ಬೇಸತ್ತು ಹೋಗಿದ್ದಾರೆ ಎಂದು ಬಿಜೆಪಿ ನಾಯಕರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ ಟೋಯಿಂಗ್ ಬದಲು ವಾಹನಗಳನ್ನು ನಿಲ್ಲಿಸಿದ ಸ್ಥಳದಲ್ಲೇ ವೀಲ್ ಕ್ಯಾಪ್ ಹಾಕುವುದಕ್ಕೆ ಚಿಂತನೆ ನಡೆಸಲಾಗುತ್ತಿದೆ. ವಾಹನ ಸವಾರರಿಗೆ ನೋಟಿಸ್ ನೀಡಿ ವಾಹನ ಬಿಡುಗಡೆ ಮಾಡಲಾಗುತ್ತದೆ. ದಂಡವನ್ನು ನ್ಯಾಯಾಲಯದಲ್ಲಿ ಕಟ್ಟುವುದಕ್ಕೆ ಅಥವಾ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಏಕಗವಾಕ್ಷಿ ವ್ಯವಸ್ಥೆ ಸೃಷ್ಟಿಗೆ ಚಿಂತನೆ ನಡೆಸಲಾಗುತ್ತಿದೆ.