Advertisement
ಮೆಗಾ ಸಿಟಿ ಆಪತ್ತು ನಿಧಿ ಹಾಗೂ ಅಮೃತ್ ಸಿಟಿ ಯೋಜನೆಯಡಿ ನಗರದಲ್ಲಿ ವಿವಿಧ ಪ್ರದೇಶಗಳಲ್ಲಿ ಸಂಗ್ರಹವಾಗುವ ಕೊಳಚೆ ನೀರನ್ನು ಸಂಗ್ರಹಿಸಿ ಆ ನೀರನ್ನು ಶುದ್ಧೀಕರಿಸಿ ನಾಲೆಗಳ ಮೂಲಕ ಹತ್ತಿರದ ಕೆರೆಗಳಿಗೆ ಹರಿಸಲು ನಗರದ 9 ಪ್ರದೇಶಗಳಲ್ಲಿ ಜಲಮಂಡಳಿಯು ತ್ಯಾಜ್ಯನೀರು ಸಂಸ್ಕರಣಾ ಘಟಕಗಳ ನಿರ್ಮಿಸುತ್ತಿದೆ. ಂದು ವರ್ಷದಿಂದ ಆ ಕಾಮಗಾರಿಗಳು ನಡೆಯುತ್ತಿವೆ.
Related Articles
Advertisement
ಇನ್ನು ಇತ್ತೀಚೆಗೆ ಜಲಮಂಡಳಿ ಕಾಮಗಾರಿಗಳಲ್ಲಿ ಅವಘಡಗಳ ಹೆಚ್ಚಾಗುತ್ತಿದ್ದು, ಕಳೆದ ವರ್ಷಾಂತ್ಯದಲ್ಲಿ ರಾಜರಾಜೇಶ್ವರಿ ನಗರದ ಬಳಿ ಜಲಮಂಡಳಿ ಕಾಮಗಾರಿ ವೇಳೆ ಮಣ್ಣು ಕುಸಿದು ಕಾರ್ಮಿಕನೊಬ್ಬ ಮೃತಪಟ್ಟಿದ್ದ. ಆ ಸಮಯದಲ್ಲೂ ಜಲಮಂಡಳಿ ಅಧಿಕಾರಿಗಳನ್ನು ಬಂಧಿಸಿ ವಿಚಾರಣೆ ಮಾಡಲಾಗಿತ್ತು. ಆನಂತರ ಜಲಮಂಡಳಿಯು ಕಾಮಗಾರಿ ಲೋಪದ ಹೊಣೆಯನ್ನು ಗುತ್ತಿಗೆದಾರ ಮೇಲೆಯೇ ಹಾಕಿತ್ತು. ಸಾಕಷ್ಟು ತಂತ್ರಜ್ಞಾನ ನಡುವೆಯೂ ಇಂದಿಗೂ ಜಲಮಂಡಳಿಯ ಕಾಮಗಾರಿಗಳಲ್ಲಿ ಇಂತಹ ಅವಘಡಗಳು ಸಂಭವಿಸುತ್ತಲೇ ಇವೆ.
ಮೊದಲು ತನಿಖೆಯಾಗಲಿ: ಹೆಬ್ಬಾಳದಲ್ಲಿ ಎಸ್‌ಟಿಪಿ ಕಾಮಗಾರಿ ವೇಳೆ ನಡೆದ ಅವಘಡದ ಕುರಿತು ಮೊದಲು ತನಿಖೆಯಾಗಿ ವರದಿ ಬರಲಿ. ಒಂದು ವೇಳೆ ವರದಿಯಲ್ಲಿ ಕಾಮಗಾರಿ ಲೋಪದೋಷ ಕಂಡು ಬಂದಿದ್ದರೆ ಉಳಿದವುಗಳ ತನಿಖೆಗೆ ಚಿಂತನೆ ನಡೆಸಲಾಗುವುದು. ಇನ್ನು ಉಳಿದ ಎಲ್ಲಾ ಎಸ್‌ಟಿಪಿ ಕಾಮಗಾರಿ ತನಿಖೆ ನಡೆಸಬೇಕು ಎಂದರೆ ತನಿಖೆಗೆ ಬರುವ ಸಂಸ್ಥೆಯ ತನಿಖಾ ವೆಚ್ಚ ನೋಡಿಕೊಂಡು ಹಿರಿಯ ಅಧಿಕಾರಿಳೊಂದಿಗೆ ಚರ್ಚಿಸಿ ಕ್ರಮಕೈಗೊಳ್ಳಲಾಗುವುದು ಎಂದು ತ್ಯಾಜ್ಯನೀರು ನಿರ್ವಹಣಾ ವಿಭಾಗದ ಹೆಚ್ಚುವರಿ ಮುಖ್ಯ ಇಂಜಿನಿಯರ್ ನಿತ್ಯಾನಂದಕುಮಾರ್ “ಉದಯವಾಣಿ’ಗೆ ತಿಳಿಸಿದರು.
ಪರಿಶೀಲನೆ ಕಡ್ಡಾಯವಾಗಲಿ: “ಹೆಬ್ಬಾಳದಲ್ಲಿ ನಿರ್ಮಾಣ ಹಂತದ ತ್ಯಾಜ್ಯ ಸಂಸ್ಕರಣಾ ಘಟಕಗಳ ಮೆಲ್ಛಾವಣಿ ಕುಸಿದಿರುವುದಕ್ಕೆ ಸೆಂಟ್ರಿಂಗ್ ಸೂಕ್ತವಾಗಿ ಇಲ್ಲದಿರುವುದು ಕಾರಣವಾಗಿರಬಹುದು. ಜತೆಗೆ ಇಲ್ಲಿ ಒಂದು ಕಂಪನಿಗೆ ನೀಡಿದ ಗುತ್ತಿಗೆಯನ್ನು ಆ ಕಂಪನಿ ಮತ್ತೂಂದು ಕಂಪನಿಗೆ ಮರು ಗುತ್ತಿಗೆ ನೀಡಿದೆ. ಈ ವೇಳೆ ಮರುಗುತ್ತಿಗೆ ಪಡೆದ ಕಂಪನಿಯ ಅನುಭವ ಕಾರ್ಯಕ್ಷಮತೆ ಪರಿಶೀಲನೆ ಅಗತ್ಯವಾಗಿರುತ್ತದೆ. ಕಾಮಗಾರಿ ಗುತ್ತಿಗೆಗಳು ವರ್ಗಾವಣೆಯಾದಾಗ ನಿರ್ದಿಷ್ಟ ವ್ಯಕ್ತಿಗಳಿಂದ ಜವಾಬ್ದಾರಿ ಸಾಧ್ಯವಾಗುವುದಿಲ್ಲ. ಅಲ್ಲದೇ ತ್ಯಾಜ್ಯ ಸಂಸ್ಕರಣಾ ಘಟಕಗಳ ಟ್ಯಾಂಕ್‌ಗಳ ನಿರ್ಮಾಣವು ಸಾಮಾನ್ಯ ಕಟ್ಟಡಗಳ ಕಾಮಗಾರಿಯಂತಲ್ಲ.
ಈ ಕಾಮಗಾರಿಗಳಿಗೆ ಭದ್ರತೆ ಹಾಗೂ ದೀರ್ಘಕಾಲದ ಬಾಳಿಕೆ ಅಗತ್ಯವಾಗಿರುತ್ತದೆ. ತ್ಯಾಜ್ಯನೀರು ಸಂಗ್ರಹಿಸುವುದು ಶುದ್ಧೀಕರಿಸುವುದರಿಂದ ಅವುಗಳನ್ನು ಅತ್ಯುತ್ತಮ ಗುಣಮಟ್ಟದಲ್ಲಿ ನಿರ್ಮಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಜಲಮಂಡಳಿಯು ನಗರದ ವಿವಿಧೆಡೆ ವಿವಿಧ ಯೋಜನೆಗಳಲ್ಲಿ ನಿರ್ಮಿಸುತ್ತಿರುವ ಎಲ್ಲಾ ತ್ಯಾಜ್ಯಸಂಸ್ಕರಣಾ ಘಟಕಗಳ ಗುಣಮಟ್ಟವು ಪರಿಶೀಲನೆ ಕಡ್ಡಾಯವಾಗಿ ಆಗಬೇಕು. ಇವುಗಳ ಜತೆಗೆ ಜಲಮಂಡಳಿಯಿಂದ ಮೂರ್‍ನಾಲ್ಕು ದಶಕಗಳ ಹಿಂದೆ ನಿರ್ಮಿಸಿರುವ ಎಸ್‌ಟಿಪಿಗಳಿದ್ದು, ಅವುಗಳ ಸ್ಥಿತಿಗತಿ, ಕಾರ್ಯಕ್ಷಮತೆಯನ್ನೂ ಪರಿಶೀಲನೆ ನಡೆಸಬೇಕು ಎಂದು ಜಲಮಂಡಳಿ ನಿವೃತ್ತ ಮುಖ್ಯ ಇಂಜಿನಿಯರ್ ಎಂ.ಎನ್.ತಿಪ್ಪೇಸ್ವಾಮಿ ಅಭಿಪ್ರಾಯ ವ್ಯಕಪಡಿಸಿದರು.
ಸಿಎಸ್‌ಐಆರ್ ತಂಡದಿಂದ ಇಂದು ಪರಿಶೀಲನೆ: ಹೆಬ್ಬಾಳದಲ್ಲಿ ನಿರ್ಮಾಣ ಹಂತದ ಎಸ್‌ಟಿಪಿಯ ಕಾಮಗಾರಿ ಅವಘಡಕ್ಕೆ ಸಂಬಂಧಿಸಿದಂತೆ ಚೆನೈನ ಸ್ಟ್ರಕ್ಚರಲ್ ಎಂಜಿನಿಯರಿಂಗ್ ರಿಸರ್ಚ್ ಸೆಂಟರ್ (ಸಿಎಸ್‌ಐಆರ್) ಅವಘಡದ ತನಿಖೆ ನಡೆಸಲಿದೆ. ಈ ಕುರಿತು ಮಾಹಿತಿ ನೀಡಿದ ಜಲಮಂಡಳಿ ಅಧ್ಯಕ್ಷ ತುಷಾರ ಗಿರಿನಾಥ್, ತನಿಖೆಗೆ ಕೋರಿ ಭಾರತೀನ ವಿಜ್ಞಾನ ಸಂಸ್ಥೆ ಹಾಗೂ ಚೆನೈನ ಸ್ಟ್ರಕ್ಚರಲ್ ಎಂಜಿನಿಯರಿಂಗ್ ರಿಸರ್ಚ್ ಸೆಂಟರ್‌ಗೆ ಪತ್ರಬರೆಯಲಾಗಿತ್ತು. ಭಾರತೀಯ ವಿಜ್ಞಾನ ಸಂಸ್ಥೆಯ ತನಿಖಾ ವಿಭಾಗದ ಕಾರ್ಯಭಾರ ಹೆಚ್ಚಿದೆ ಎಂದು ಮಾಹಿತಿ ಬಂದಿತ್ತು. ಇನ್ನೊಂದೆಡೆ ಸಿಎಸ್‌ಐಆರ್ ನಮ್ಮ ಪತ್ರಕ್ಕೆ ಪ್ರತಿಕ್ರಿಯಿಸಿದ್ದು, ಬುಧವಾರ ಬೆಳಗ್ಗೆ ತಂಡವನ್ನು ಬೆಂಗಳೂರಿಗೆ ಕಳಿಸುವುದಾಗಿ ತಿಳಿಸಿದ್ದಾರೆ ಎಂದರು.
ಇನ್ನು ಈ ತಂಡವು ಯಾಕೆ ಅವಘಡ ಸಂಭವಿಸಿತು, ಕಾಮಗಾರಿ ಲೋಪವಿದೆಯೇ ಎಂಬ ಎರಡು ಅಂಶ ಕುರಿತು ತನಿಖೆ ನಡೆಸಲಿದೆ. ಉಳಿದಂತೆ ತ್ಯಾಜ್ಯನೀರು ನಿರ್ವಹಣಾ ವಿಭಾಗ ಮುಖ್ಯ ಇಂಜಿನಿಯರ್ ನೇತೃತ್ವದಲ್ಲಿ ಆಂತರಿಕ ತಂಡ ಮಾಡಿದ್ದು, ಈ ತಂಡ ತಾಂತ್ರಿಕೇತರ ಲೋಪಗಳನ್ನು ಪತ್ತೆ ಹಚ್ಚಲಿದೆ. ಉಳಿದಂತೆ ಜಲಮಂಡಳಿಯ ಎಲ್ಲಾ ಕಾಮಗಾರಿಗಳ ಬಳಿ ಕಾಮಗಾರಿ ಮಾಡುವವರು ಮಾಡಬೇಕಾದ ಹಾಗೂ ಮಾಡಬಾರದ ಅಂಶಗಳ ಕುರಿತು ಪಟ್ಟಿ ಸಿದ್ಧಪಡೆಸಿ ಹಾಕಲಾಗುವುದು ಎಂದು ತಿಳಿಸಿದರು.
ಎಲ್ಲೆಡೆ ಕಾಮಗಾರಿ ಸ್ಥಗಿತ: ನಗರದಲ್ಲಿ ಎಸ್‌ಟಿಪಿ ಕಾಮಗಾರಿ ನಡೆಯುತ್ತಿರುವ ವಿವಿಧೆಡೆ ಕಾಮಗಾರಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಹೆಬ್ಬಾಳದ ಅವಘಡದಿಂದ ಕಾರ್ಮಿಕರಲ್ಲಿ ಒಂದಿಷ್ಟು ಆತಂಕ ಇರುತ್ತದೆ ಹೀಗಾಗಿ ಕೆಲಸ ನಿಂತಿದೆ. ಕಾಮಗಾರಿ ಸ್ಥಳದಲ್ಲಿ ಸೂಕ್ತ ಭದ್ರತಾ ಕ್ರಮ ಕೈಗೊಂಡು ಆನಂತರ ಕಾಮಗಾರಿ ಆರಂಭವಾಗಲಿದೆ ಎಂದು ಜಲಮಂಡಳಿ ಅಧ್ಯಕ್ಷರು ತಿಳಿಸಿದರು.
ವಿವಿಧೆಡೆ ನಡೆಯುತ್ತಿರುವ ಎಸ್‌ಟಿಪಿ ಕಾಮಗಾರಿಗಳು(ಮೆಗಾ ಸಿಟಿ ಆಪತ್ತು ನಿಧಿ ಯೋಜನೆ)
ಸ್ಥಳ ಸಾಮರ್ಥ್ಯ
-ಕೆ.ಸಿ.ವ್ಯಾಲಿ 150 ದಶ ಲಕ್ಷ ಲೀ.
-ವೃಷಭಾವತಿ 150 ದಶ ಲಕ್ಷ ಲೀ.
-ಹೆಬ್ಬಾಳ 100 ದಶ ಲಕ್ಷ ಲೀ.
-ದೊಡ್ಡಬೆಲೆ 40 ದಶ ಲಕ್ಷ ಲೀ.
(ಅಮೃತ್ ಸಿಟಿ ಯೋಜನೆ)
-ಸಾರಕ್ಕಿ ಕೆರೆ 5 ದಶ ಲಕ್ಷ ಲೀ.
-ಚಿಕ್ಕಬೇಗೂರು 5 ದಶ ಲಕ್ಷ ಲೀ.
-ಉಳಿಮಾವು 10 ದಶ ಲಕ್ಷ ಲೀ.
-ಅಗರ ಕರೆ 35 ದಶ ಲಕ್ಷ ಲೀ.
-ಕೃಷ್ಣರಾಜಪುರ 20 ದಶ ಲಕ್ಷ ಲೀ. * ಜಯಪ್ರಕಾಶ್ ಬಿರಾದಾರ್