ಲಕ್ನೋ: ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಸಂಸದ ರಿತೇಶ್ ಪಾಂಡೆ ಅವರು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಭಾನುವಾರ ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ಬ್ರಜೇಶ್ ಪಾಠಕ್ ಮತ್ತು ಇತರ ಹಿರಿಯ ನಾಯಕರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಪಾಂಡೆ ಅವರು ಅಂಬೇಡ್ಕರ್ ನಗರ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದರು.
ರಾಜೀನಾಮೆ ಪತ್ರವನ್ನು ಎಕ್ಸ್‌ನಲ್ಲಿ ಪೋಸ್ಟ್ ಮಾಡಿ ಬಿಎಸ್‌ಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಎಂದು ಶೀರ್ಷಿಕೆ ನೀಡಿದ್ದರು.
ಸುದ್ದಿ ಸಂಸ್ಥೆ ಎಎನ್‌ಐ ಜತೆ ಮಾತನಾಡಿದ ಪಾಂಡೆ, ತಾನು ಕಳೆದ 15 ವರ್ಷಗಳಿಂದ ಬಿಎಸ್‌ಪಿಗಾಗಿ ಕೆಲಸ ಮಾಡಿದ್ದೇನೆ ಮತ್ತು ಪಕ್ಷದ ವರಿಷ್ಠೆ ಮಾಯಾವತಿ ಅವರ ಚಿಂತನೆ ಮತ್ತು ಚಟುವಟಿಕೆಗಳ ಬಗ್ಗೆ ಪ್ರತಿಕ್ರಿಯಿಸಲು ಬಯಸುವುದಿಲ್ಲ ಎಂದರು.
ಈ ತಿಂಗಳ ಆರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್ತಿನ ಕ್ಯಾಂಟೀನ್‌ನಲ್ಲಿ ತಮ್ಮೊಂದಿಗೆ ಊಟಕ್ಕೆ ಕರೆದ ಎಂಟು ಸಂಸದರಲ್ಲಿ ಪಾಂಡೆ ಕೂಡ ಒಬ್ಬರಾಗಿದ್ದರು ಎನ್ನುವುದು ವಿಶೇಷ.
ಕೈ ಹಿಡಿಯಲಿರುವ ಮತ್ತೋರ್ವ ಸಂಸದ
ಜೌನ್‌ಪುರದ ಬಿಎಸ್‌ಪಿ ಸಂಸದ ಶ್ಯಾಮ್ ಸಿಂಗ್ ಯಾದವ್ ಅವರು ಭಾನುವಾರ ಆಗ್ರಾದ ಭಾರತ್ ಜೋಡೋ ನ್ಯಾಯ್ ಯಾತ್ರೆಯಲ್ಲಿ ಪಾಲ್ಗೊಂಡಿದ್ದು ಕಾಂಗ್ರೆಸ್‌ಗೆ ಸೇರುವ ಸಾಧ್ಯತೆಯಿದೆ. ಲೋಕಸಭೆ ಚುನಾವಣೆಗೆ ಮುಂಚಿತವಾಗಿ ಮೈತ್ರಿ ವಿಚಾರವನ್ನು ಮಾಯಾವತಿ ತಳ್ಳಿಹಾಕಿದ ಸುಮಾರು ಒಂದು ವಾರದ ನಂತರ ಈ ಬೆಳವಣಿಗೆಗಳು ನಡೆದಿವೆ.