Advertisement

ದೇಶಕ್ಕೆ ಅವಳಿ ರೂಪಾಂತರಿ ಕಾಟ : ಡಬಲ್‌ ಮ್ಯುಟೆಂಟ್‌ಗೆ ಭಾರತವೇ ಮೂಲ

12:39 AM Apr 19, 2021 | Team Udayavani |

ಹೊಸದಿಲ್ಲಿ: ದೇಶದಲ್ಲಿ ಸೋಂಕು ಕ್ಷಿಪ್ರವಾಗಿ ಮತ್ತು ಮಾರಣಾಂತಿಕವಾಗಿ ವ್ಯಾಪಿಸು ತ್ತಿರುವುದಕ್ಕೆ ಇಲ್ಲೇ ಸೃಷ್ಟಿಯಾದ “ಅವಳಿ ರೂಪಾಂತರಿ’ (ಡಬಲ್‌ ಮ್ಯುಟೆಂಟ್‌) ವೈರಾಣು ಕಾರಣ ಎಂದು ಆರೋಗ್ಯ ತಜ್ಞರು ಅಂದಾಜಿಸಿದ್ದಾರೆ. ದಿನಕ್ಕೆ 2 ಲಕ್ಷಕ್ಕೂ ಹೆಚ್ಚು ಮಂದಿಯನ್ನು ಸೋಂಕುಪೀಡಿತರನ್ನಾಗಿಸುತ್ತಿರುವ ಈ ರೂಪಾಂತರಿ ಹೆಚ್ಚು ಅಪಾಯಕಾರಿ ಯಾಗಿದ್ದು, ವೈರಸ್‌ನ ಹೊಸ ಸ್ವರೂಪಗಳ ಬಗ್ಗೆ ಮಾಹಿತಿ ಇಲ್ಲಿದೆ.

Advertisement

ಡಬಲ್‌ ಮ್ಯುಟೆಂಟ್‌ ಎಂದರೇನು?
ವೈರಸ್‌ನ ಇ 484 ಕ್ಯೂ ಮತ್ತು ಎಲ್‌ 452 ಆರ್‌ ಎಂಬ ಎರಡು ಸ್ವರೂಪಗಳು ಸೇರಿ ಸೃಷ್ಟಿಯಾದ ಹೊಸ ರೂಪಾಂತರಿ ಬಿ.1.617. ಈ ಪೈಕಿ ಎಲ್‌452ಆರ್‌ ಮೊದಲು ಕಂಡುಬಂದದ್ದು ಅಮೆರಿಕದಲ್ಲಿ. ಆದರೆ ಇ484ಕ್ಯೂ ಸೃಷ್ಟಿಯಾದದ್ದು ಭಾರತದಲ್ಲಿ. ಇವೆರಡೂ ಸೇರಿ ಈಗ ಭಾರತದಲ್ಲಿ ಸೋಂಕು ಸ್ಫೋಟಗೊಳ್ಳುವಂತೆ ಮಾಡುತ್ತಿವೆ. ಆರಂಭದಲ್ಲಿ ಮಹಾರಾಷ್ಟ್ರ, ಪಂಜಾಬ್‌ ಮತ್ತು ದಿಲ್ಲಿಯ ಸೋಂಕುಪೀಡಿತರ ಮಾದರಿಗಳಲ್ಲಿ ಈ ಅವಳಿ ರೂಪಾಂತರಿ ಪತ್ತೆಯಾಗಿತ್ತು. ಈಗ ಇದು ಕರ್ನಾಟಕ ಸೇರಿ 10 ರಾಜ್ಯಗಳಿಗೆ ಹಬ್ಬಿದೆ.

ಅಪಾಯ ಕಾರಿಯೇ?
ಖಂಡಿತ. ಈ ಡಬಲ್‌ ಮ್ಯುಟೆಂಟ್‌ ವೈರಸ್‌ನಿಂದಾಗಿ ದೇಶಾದ್ಯಂತ ಈ ರೀತಿ ವೇಗವಾಗಿ ಸೋಂಕು ಹಬ್ಬುತ್ತಿದೆ. ಇದು ಕ್ಷಿಪ್ರವಾಗಿ ಹರಡುತ್ತದೆ ಮಾತ್ರವಲ್ಲ, ಅದನ್ನು ತಟಸ್ಥಗೊಳಿ ಸುವುದೂ ಕಷ್ಟ.

ಲಸಿಕೆ ಪರಿಣಾಮಕಾರಿಯೇ?
ಈ ಕುರಿತ ಪರೀಕ್ಷೆ ಮತ್ತು ಅಧ್ಯಯನ ಇನ್ನೂ ನಡೆಯುತ್ತಿವೆ. ವೈರಾಣುವಿನ ಸ್ಪೈಕ್‌ ಪ್ರೊಟೀನ್‌ ಅನ್ನು ಗುರಿಯಾಗಿಸಿ ಕೊವಿಶೀಲ್ಡ್‌ ಲಸಿಕೆ ಅಭಿವೃದ್ಧಿಪಡಿಸಲಾಗಿದೆ. ಅವಳಿ ರೂಪಾಂತರಿಯ ಮೇಲೆ ಕೊವಿಶೀಲ್ಡ್‌ ಹೇಗೆ ಪರಿಣಾಮಕಾರಿ ಎಂಬುದು ಅಧ್ಯಯನದ ಬಳಿಕವೇ ತಿಳಿಯಲಿದೆ. ಕೊವ್ಯಾಕ್ಸಿನ್‌ ಲಸಿಕೆ ದೇಹದಲ್ಲಿ ಪ್ರತಿಕಾಯಗಳು ಸೃಷ್ಟಿಯಾಗುವಂತೆ ಹೆಚ್ಚು ವೈರಲ್‌ ಆ್ಯಂಟಿಜೆನ್‌ಒದಗಿಸುತ್ತದೆ. ಹೀಗಾಗಿ ಇದು ರೂಪಾಂತರಿ ವಿರುದ್ಧ ಪರಿಣಾಮಕಾರಿ ಆಗಿರಬಹುದು ಎನ್ನಲಾಗಿದೆ.

ಇಷ್ಟೊಂದು ಪ್ರಕರಣಗಳೇಕೆ?
ಎಲ್ಲ ಲಸಿಕೆಗಳೂ ಕೊರೊನಾದ ಗಂಭೀರ ಪರಿಣಾಮ ಮತ್ತು ಸಾವಿನಿಂದ ರಕ್ಷಿಸುತ್ತವೆಯೇ ವಿನಾ ಸೋಂಕಿನಿಂದ ಅಲ್ಲ. ಹೀಗಾಗಿ ಅಲ್ಪ ಪ್ರಮಾಣದಲ್ಲಿ ಸೋಂಕು ತಗಲುವ ಸಾಧ್ಯತೆ ಇರುತ್ತದೆ. ಆದರೆ ಲಸಿಕೆ ಸ್ವೀಕರಿಸುವುದರಿಂದ ದೇಹದಲ್ಲಿ ಪ್ರಬಲ ಪ್ರತಿಕಾಯಗಳು ಸೃಷ್ಟಿಯಾಗುತ್ತವೆ.

Advertisement

ಬೂಸ್ಟರ್‌ ಲಸಿಕೆ ಅಗತ್ಯವೇ?
ಹೌದು. ಲಸಿಕೆಯ ಮೊದಲ ಡೋಸ್‌ ರೋಗನಿರೋಧಕ ವ್ಯವಸ್ಥೆಯನ್ನು ಪ್ರತಿರೋಧಕ್ಕೆ ಸಿದ್ಧಗೊಳಿಸುತ್ತದೆ. ಎರಡನೇ ಡೋಸ್‌ ರೋಗನಿರೋಧಕ ಶಕ್ತಿ ಯನ್ನು ವೃದ್ಧಿಗೊಳಿಸಿ, ಸೋಂಕಿನ ವಿರುದ್ಧದ ಹೋರಾಟಕ್ಕೆ ಶಕ್ತಿ ತುಂಬುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next