Advertisement

ಮೈಸೂರಿಗೆ ಶೀಘ್ರದಲ್ಲೇ ಡಬಲ್‌ ಡೆಕ್ಕರ್‌ ಬಸ್‌

09:04 PM Feb 24, 2020 | Lakshmi GovindaRaj |

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿರುವ ಪ್ರವಾಸಿ ತಾಣಗಳನ್ನು ಡಬಲ್‌ ಡೆಕ್ಕರ್‌ ಬಸ್‌ನಲ್ಲಿ ಕುಳಿತು ವೀಕ್ಷಿಸುವ ಮೈಸೂರಿಗರ ಬಹುದಿನಗಳ ಕನಸು ಮಾರ್ಚ್‌ ಅಂತ್ಯದ ವೇಳೆಗೆ ಈಡೇರಲಿದೆ. ದಸರಾ ಸಂದರ್ಭದಲ್ಲಿ ಡಬಲ್‌ ಡೆಕ್ಕರ್‌ ಬಸ್‌ನಲ್ಲಿ ಕುಳಿತು ಮೈಸೂರಿನ ಅಂದ ಸವಿಯುವ ಅವಕಾಶವನ್ನು ಕೆಲವೇ ಕೆಲವು ಮಂದಿ ಪಡೆದುಕೊಂಡಿದ್ದರು. ಬಸ್‌ ಹತ್ತಲು ಅವಕಾಶ ಸಿಗದವರು ಮತ್ತೆ ದಸರಾ ಬರುವುದನ್ನೇ ಕಾಯುತ್ತಿದ್ದರು.

Advertisement

ಇದೀಗ ಅವರೆಲ್ಲರ ಕಾಯುವಿಕೆ ಕೊನೆಯಾಗಲಿದೆ. ಮಾರ್ಚ್‌ ಅಂತ್ಯದ ವೇಳೆಗೆ ಡಬಲ್‌ ಡೆಕ್ಕರ್‌ ಬಸ್‌ ಮೈಸೂರಿನಲ್ಲಿ ಸೇವೆ ಆರಂಭಿಸಲಿದ್ದು, ನೆಚ್ಚಿನ ಪ್ರವಾಸಿತಾಣಗಳಲ್ಲಿ ಸಂಚರಿಸಬಹುದು. ವಿಶ್ವಖ್ಯಾತ ಅಂಬಾವಿಲಾಸ ಅರಮನೆ, ಮೃಗಾಲಯ, ಜಗನ್‌ಮೋಹನ ಅರಮನೆ ಸೇರಿದಂತೆ ಪ್ರಮುಖ ಪ್ರವಾಸಿತಾಣಗಳನ್ನು ಡಬಲ್‌ ಡೆಕ್ಕರ್‌ ಬಸ್‌ಗಳಲ್ಲಿ ಕುಳಿತು ನೋಡಬಹುದಾಗಿದೆ. ಬಸ್‌ಗೆ ಅಂಬಾರಿ ಎಂದು ಹೆಸರಿಡಲಾಗಿದೆ.

2019ರಲ್ಲಿ ಆರಂಭವಾಗಿದ್ದ ಯೋಜನೆ: ವಿಶ್ವ ಪ್ರಸಿದ್ಧ ಪ್ರವಾಸಿತಾಣಗಳಾದ ಮೈಸೂರು ಹಾಗೂ ಹಂಪಿಯ ಪ್ರವಾಸೋದ್ಯಮ ಅಭಿವೃದ್ಧಿಪಡಿಸಲು, ಪ್ರವಾಸಿಗರಿಗೆ ಅನುಕೂಲ ಕಲ್ಪಿಸಲು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಡಬಲ್‌ ಡೆಕ್ಕರ್‌ ಬಸ್‌ಗಳನ್ನು ಪರಿಚುಸಲು ಯೋಜನೆ ರೂಪಿಸಿತ್ತು. 2019ರ ಜುಲೈನಲ್ಲಿ ಅಂದಿನ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ 5 ಕೋಟಿ ರೂ ಅನುದಾನ ನೀಡಿದ್ದರು.

ಇದೀಗ ಒಂದು ಬಸ್‌ ಸಿದ್ಧವಾಗಿದ್ದು, ಉಳಿದ ಐದು ಬಸ್‌ಗಳು ಮಾರ್ಚ್‌ ಅಂತ್ಯಕ್ಕೆ ಸಿದ್ಧವಾಗಲಿವೆ. ಬೆಂಗಳೂರು ಮೂಲದ ಕೆಎಂಎಸ್‌ ಕೋಚ್‌ ಬಿಲ್ಡರ್ಸ್‌ ಸಂಸ್ಥೆ 6 ಡಬಲ್‌ ಡೆಕ್ಕರ್‌ ಬಸ್‌ಗಳ ಬಾಡಿ ತಯಾರು ಮಾಡುತ್ತಿದ್ದು, ಪ್ರಾಯೋಗಿಕವಾಗಿ ಒಂದು ಬಸ್‌ ಸಿದ್ಧವಾಗಿದೆ. ಇದರಲ್ಲಿ ನಾಲ್ಕು ಮೈಸೂರಿನಲ್ಲಿ ಹಾಗೂ ಉಳಿದ 2 ಬಸ್‌ಗಳು ಹಂಪಿಯಲ್ಲಿ ಸಂಚರಿಸಲಿವೆ.

40 ಆಸನದ ಡಬಲ್‌ ಡೆಕ್ಕರ್‌: ಮೊದಲ ಹಂತದಲ್ಲಿ ಸಿದ್ಧವಾಗಿರುವ ಡಬಲ್‌ ಡೆಕ್ಕರ್‌ ಬಸ್‌ನಲ್ಲಿ ಒಟ್ಟು 40 ಆಸನಗಳ ವ್ಯವಸ್ಥೆ ಮಾಡಲಾಗಿದೆ. ಇದರಲ್ಲಿ ಕೆಳಭಾಗದಲ್ಲಿ 20 ಹಾಗೂ ಮೇಲಾºಗದಲ್ಲಿ 20 ಆಸನಗಳ ವ್ಯವಸ್ಥೆ ಮಾಡಲಾಗಿದೆ. ಕೆಳ ಹಂತ ಸಂಪೂರ್ಣ ಹವಾ ನಿಯಂತ್ರಿತವಾಗಿರಲಿದ್ದು, ಮೇಲಾºಗ ತೆರೆದಿರುತ್ತದೆ. ಅಲ್ಲದೆ ಬಸ್‌ನಲ್ಲಿ ಆಡಿಯೋ ಹಾಗೂ ವಿಡಿಯೋದಲ್ಲಿ ತೆರಳುತ್ತಿರುವ ಮಾರ್ಗದ ಮಾಹಿತಿ ದೊರೆಯಲಿದೆ. ಈಗಾಗಲೇ ಬಸ್‌ನ ಮಾರ್ಗ ಸಿದ್ಧವಾಗಿದೆ.

Advertisement

ಬೆಟ್ಟಕ್ಕಿಲ್ಲ ಡಬಲ್‌ ಡೆಕ್ಕರ್‌: ಮಾರ್ಚ್‌ ಅಂತ್ಯಕ್ಕೆ ಮೈಸೂರಿನಲ್ಲಿ ಸಂಚಾರ ಮಾಡುವ ಡಬಲ್‌ ಡೆಕ್ಕರ್‌ ಬಸ್‌ ಚಾಮುಂಡಿಬೆಟ್ಟಕ್ಕೆ ಹೋಗುವುದಿಲ್ಲ. ಬೆಟ್ಟಕ್ಕೆ ಹೋಗಿಬರಲು ಹೆಚ್ಚು ಸಮುಯ ತೆಗೆದುಕೊಳ್ಳುವುದಲ್ಲದೇ, ರಸ್ತೆ ತಿರುವುಗಳಿರುವುದರಿಂದ ಬೆಟ್ಟಕ್ಕೆ ತೆರಳುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಸ್‌ನಲ್ಲಿ ಕರ್ನಾಟಕದ ಸಂಸ್ಕೃತಿ ಅನಾವರಣ: ಈ ಕುರಿತು ಮಾಹಿತಿ ನೀಡಿದ ಕೆಎಸ್‌ಟಿಡಿಸಿ ಎಂಡಿ ಕುಮಾರ್‌ ಪುಷ್ಕರ್‌, ಬೇಸಿಗೆ ವೇಳೆಗೆ ಎಲ್ಲಾ ಬಸ್‌ಗಳು ಮೈಸೂರಿನಲ್ಲಿ ಸಂಚರಿಸಲಿವೆ. ಆದರೆ, ಹಂಪಿಯಲ್ಲಿ ಈ ವೇಳೆಗೆ ಬಿಸಿಲು ಹೆಚ್ಚಾಗಿರುವುದರಿಂದ ತಡವಾಗಬಹುದು. ಬಸ್‌ನ ಕೆಳಹಂತ ಸಂಪೂರ್ಣ ಹವಾ ನಿಯಂತ್ರಿತವಾಗಿರಲಿದ್ದು, ಮೇಲಾºಗ ತೆರೆದಿರುವುದರಿಂದ ಬಿಸಿಲಿನಲ್ಲಿ ಸಂಚರಿಸುವುದು ಕಷ್ಟವಾಗಲಿದೆ.

ಬಸ್‌ ನೇರಳೆ ಬಣ್ಣದಲ್ಲಿ ಇರಲಿದ್ದು, ಬಸ್‌ಗೆ ಅಂಬಾರಿ ಎಂದು ಹೆಸರಿಡಲಾಗಿದೆ. ಸುತ್ತಲೂ ಅಂಬಾರಿ ಥೀಮ್‌ ಇರಲಿದೆ. ಅಲ್ಲದೇ ರಾಜ್ಯದ ಕಲೆ ಸಂಸ್ಕೃತಿಯನ್ನು ಬಿಂಬಿಸುವ ಚಿತ್ರಗಳನ್ನು ಬರೆಸಲಾಗುವುದು. ನೋಂದಣಿ ಮುಗಿದ ಬಳಿಕ ಮಾರ್ಚ್‌ 10ರಿಂದ ಮೈಸೂರಿನಲ್ಲಿ ಪ್ರಾಯೋಗಿಕವಾಗಿ ಬಸ್‌ ಸಂಚಾರ ಆರಂಭಿಸಲಾಗುವುದು ಎಂದು ತಿಳಿಸಿದರು.

ಇಂಟರ್‌ ನ್ಯಾಷನಲ್‌ ಸೆಂಟರ್‌ ಫಾರ್‌ ಆಟೋಮೋಟಿವ್‌ ಟೆಕ್ನಾಲಜಿ ತಂಡ ಫೆಬ್ರವರಿ ಮೊದಲ ವಾರದಲ್ಲಿ ಸಿದ್ಧವಾಗಿರುವ ಬಸ್‌ನ ಪರಿಶೀಲನೆ ಮಾಡಿದೆ. ಅದರ ಪ್ರಮಾಣಪತ್ರಕ್ಕಾಗಿ ಕಾಯುತ್ತಿದ್ದು, ನೋಂದಣಿಗೂ ಅರ್ಜಿ ಸಲ್ಲಿಸಲಾಗಿದೆ. ಮಾರ್ಚ್‌ ಅಂತ್ಯದ ವೇಳೆಗೆ ಮೈಸೂರು ಹಾಗೂ ಹಂಪಿಯಲ್ಲಿ ಡಬಲ್‌ ಡೆಕ್ಕರ್‌ ಬಸ್‌ಗಳು ಸಂಚರಿಸಲಿವೆ.
-ಕುಮಾರ್‌ ಪುಷ್ಕರ್‌, ವ್ಯವಸ್ಥಾಪಕ ನಿರ್ದೇಶಕ, ಕೆಎಸ್‌ಟಿಡಿಸಿ

Advertisement

Udayavani is now on Telegram. Click here to join our channel and stay updated with the latest news.

Next