Advertisement

ಕೆಎಸ್‌ಆರ್‌ಟಿಸಿಯಿಂದ ಡಬಲ್‌ ಡೆಕರ್‌ ಬಸ್‌ ?

06:00 AM Feb 04, 2018 | Team Udayavani |

ಬೆಂಗಳೂರು: ರಾಜಧಾನಿ ಬೆಂಗಳೂರಿನಿಂದ ಐದು ನಗರಗಳಿಗೆ ಹತ್ತು ಡಬಲ್‌ ಡೆಕರ್‌ ಬಸ್‌ಗಳನ್ನು ಪರಿಚಯಿಸಲು ನಿರ್ಧರಿಸಿರುವ ಕೆಎಸ್‌ಆರ್‌ಟಿಸಿ, ಈ ಸಂಬಂಧ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.

Advertisement

ಕೇಂದ್ರ ಸಾರಿಗೆ ಸಚಿವಾಲಯವು ದೇಶದಲ್ಲಿ ಡಬಲ್‌ ಡೆಕ್ಕರ್‌ ಸೇವೆಗೆ ಮುಂದಾಗಿದ್ದು, ಇದಕ್ಕಾಗಿ ರಾಜ್ಯದ ಐದು ಮಾರ್ಗಗಳು ಸೇರಿದಂತೆ 70 ಮಾರ್ಗಗಳನ್ನು ಗುರುತಿಸಿದೆ. ಈ ಮಾದರಿಯ ಬಸ್‌ಗಳ ಕಾರ್ಯಾಚರಣೆಗೆ ಕಾತುರವಾಗಿರುವ ಕೆಎಸ್‌ಆರ್‌ಟಿಸಿ ಹತ್ತು ಡಬಲ್‌ ಡೆಕರ್‌ ಬಸ್‌ಗಳಿಗೆ ಬೇಡಿಕೆ ಇಟ್ಟಿದೆ. ಜತೆಗೆ ಈಗಾಗಲೇ ಕಂಪೆನಿಗಳೊಂದಿಗೆ ಮಾತುಕತೆ ಕೂಡ ನಡೆಸಿದೆ.

ರಸ್ತೆಗಿಳಿಯಲು ಬೇಕು 6ತಿಂಗಳು
ಈವರೆಗೆ ಡಬಲ್‌ ಡೆಕರ್‌ಗಾಗಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದ ಮೊದಲ ಮತ್ತು ಏಕೈಕ ಸಂಸ್ಥೆ ಕೆಎಸ್‌ಆರ್‌ಟಿಸಿಯಾಗಿದೆ. ಮುಂದಿನ ಆರು ತಿಂಗಳಲ್ಲಿ ಈ ಬಸ್‌ಗಳು ರಸ್ತೆಗಿಳಿಯುವ ಸಾಧ್ಯತೆ ಇದೆ. ಪ್ರಸ್ತುತ ಬಸ್‌ಗಳ ಸರಾಸರಿ ಕಾರ್ಯಾಚರಣೆ ವೆಚ್ಚ ಕಿ.ಮೀ.ಗೆ 34 ರೂ. ಇದೆ. ಡಬಲ್‌ ಡೆಕರ್‌ ಬಸ್‌ಗಳಿಂದ ಈ ವೆಚ್ಚದ ಪ್ರಮಾಣ ಶೇ. 30ರಿಂದ 40ರಷ್ಟು ಕಡಿಮೆ ಆಗುವ ನಿರೀಕ್ಷೆ ಇದೆ ಎಂದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಎಸ್‌.ಆರ್‌. ಉಮಾಶಂಕರ್‌ ವಿಶ್ವಾಸ ವ್ಯಕ್ತಪಡಿಸುತ್ತಾರೆ.

ಕೇಂದ್ರ ಗುರುತಿಸಿರುವ ಬೆಂಗಳೂರು-ಚೆನ್ನೈ, ಬೆಂಗಳೂರು-ಹೈದರಾಬಾದ್‌, ಬೆಂಗಳೂರು-ಮಂಗಳೂರು, ಬೆಂಗಳೂರು-ಹುಬ್ಬಳ್ಳಿ ನಡುವೆ ಈಗಾಗಲೇ ಸಾಮಾನ್ಯ ಮತ್ತು ಪ್ರೀಮಿಯಂ ಬಸ್‌ಗಳನ್ನು ಕಾರ್ಯಾಚರಣೆ ಮಾಡಲಾಗುತ್ತಿದ್ದು, ಈಗ ಡಬಲ್‌ ಡೆಕರ್‌ ಸೇವೆ ಆರಂಭಿಸಲು ಕೆಎಸ್‌ಆರ್‌ಟಿಸಿ ಸಿದ್ಧ. ಕಂಪೆನಿಗಳು ಕೂಡ ಈ ಬಸ್‌ಗಳ ತಯಾರಿಕೆ ಮತ್ತು ಪೂರೈಕೆಗೆ ಆಸಕ್ತಿ ಹೊಂದಿವೆ ಎಂದು ನಿಗಮವು ಪ್ರಸ್ತಾವನೆಯಲ್ಲಿ ತಿಳಿಸಿದೆ. ಅಂದುಕೊಂಡಂತೆ ಎಲ್ಲವೂ ನಡೆದರೆ, ನಿಗಮವು ಎರಡು ನಗರಗಳ ನಡುವೆ ಡಬಲ್‌ ಡೆಕರ್‌ ಸೇವೆ ಆರಂಭಿಸಿದ ಮೊದಲ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.

ಲೋಡ್‌ಫ್ಯಾಕ್ಟರ್‌ ಏರಿಕೆ
ಸಾಮಾನ್ಯವಾಗಿ ಈಗಿರುವ ಬಸ್‌ಗಳಲ್ಲಿ 50 ಆಸನಗಳಿದ್ದು, ಲೋಡ್‌ ಫ್ಯಾಕ್ಟರ್‌ (ಪ್ರಯಾಣಿಕರ ದಟ್ಟಣೆ) ಶೇ. 70ರಷ್ಟು ಇರಲಿದೆ.  ಡಬಲ್‌ ಡೆಕರ್‌ನಲ್ಲಿ ಆಸನಗಳ ಸಂಖ್ಯೆ 82 ಆಗಲಿದ್ದು, ಇದರಿಂದ ಲೋಡ್‌ ಫ್ಯಾಕ್ಟರ್‌ ಕೂಡ ಹೆಚ್ಚಲಿದೆ. ಹೆಚ್ಚು-ಕಡಿಮೆ ಎರಡು ಬಸ್‌ಗಳಷ್ಟು ಪ್ರಯಾಣಿಕರನ್ನು ಈ ಡಬಲ್‌ ಡೆಕರ್‌ ಏಕಕಾಲದಲ್ಲಿ ಕೊಂಡೊಯ್ಯಲಿದೆ. ಪರಿಣಾಮ ಡೀಸೆಲ್‌ ಉಳಿತಾಯದ ಜತೆಗೆ ರಸ್ತೆಯಲ್ಲಿ ವಾಹನಗಳ ಸಂಖ್ಯೆ ತಗ್ಗಲಿದೆ. ಅಲ್ಲದೆ, ನಿಗಮವೇ ಬಸ್‌ಗಳನ್ನು ಖರೀದಿಸಿದರೂ ಮೊದಲ ಮೂರು ವರ್ಷ ಪ್ರತಿ ಕಿ.ಮೀ.ಗೆ ಕೇಂದ್ರದಿಂದ 10 ರೂ. ಸಬ್ಸಿಡಿ ಸಿಗುವುದರಿಂದ ಹೊರೆ ಆಗುವುದಿಲ್ಲ ಎನ್ನುವುದು ಇದರ ಹಿಂದಿರುವ ತಜ್ಞರ ಲೆಕ್ಕಾಚಾರ.

Advertisement

ರಸ್ತೆ ಎಂಜಿನಿಯರಿಂಗ್‌ ಬಹುಮುಖ್ಯ
ಆದರೆ, ಸಾಮಾನ್ಯ ಬಸ್‌ಗಳ ವೇಗಕ್ಕೆ (ವೇಗಮಿತಿ ಗಂಟೆಗೆ 60ರಿಂದ 70 ಕಿ.ಮೀ.) ಹೋಲಿಸಿದರೆ, ಡಬಲ್‌ ಡೆಕರ್‌ ಬಸ್‌ ವೇಗ ಕಡಿಮೆ ಆಗುತ್ತದೆ. ಇನ್ನು ಡಬಲ್‌ ಡೆಕರ್‌ ಎತ್ತರ ಈಗಿರುವ ಬಸ್‌ಗಿಂತ ಒಂದೂವರೆಪಟ್ಟು ಹೆಚ್ಚು ಇರಲಿದೆ. ಈ ನಿಟ್ಟಿನಲ್ಲಿ ಡಬಲ್‌ ಡೆಕರ್‌ಗೆ ಪ್ರತ್ಯೇಕ ಪಥ ಅಥವಾ ಸುಧಾರಿತ ರಸ್ತೆಗಳ ಅವಶ್ಯಕತೆ ಇದೆ. ಅಲ್ಲದೆ, ಹೆಚ್ಚು ತಿರುವುಗಳು ಇರಬಾರದು. ಆದರೆ, ಬೆಂಗಳೂರು-ಮೈಸೂರು ರಸ್ತೆಯಲ್ಲಿ ತಿರುವುಗಳು ಹೆಚ್ಚು ಬರುತ್ತವೆ. ಈ ಅಂಶಗಳನ್ನೂ ಪರಿಗಣಿಸಬೇಕಾಗುತ್ತದೆ ಎಂದೂ ಕೆಎಸ್‌ಆರ್‌ಟಿಸಿ ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸುತ್ತಾರೆ.
ಆಸ್ಟ್ರೇಲಿಯ, ಸ್ವಿಡ್ಜರ್‌ಲ್ಯಾಂಡ್‌ ಸೇರಿದಂತೆ ಹಲವು ದೇಶಗಳಲ್ಲಿ ನಗರಗಳ ನಡುವೆ ಈ ಡಬಲ್‌ ಡೆಕರ್‌ ಬಸ್‌ ಸೇವೆ ಇದೆ. ಅಲ್ಲಿನ ರಸ್ತೆಗಳು ಮತ್ತು ನಮ್ಮಲ್ಲಿನ ರಸ್ತೆಗಳಿಗೆ ಸಾಕಷ್ಟು ವ್ಯತ್ಯಾಸ ಇದೆ. ಈ ಮಾದರಿ ಬಸ್‌ಗಳಿಗೆ ರಸ್ತೆಗಳ ಎಂಜಿನಿಯರಿಂಗ್‌ ಕೂಡ ಮುಖ್ಯವಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಬಿಎಂಟಿಸಿಯಲ್ಲೂ ಚಿಂತನೆ
ಬಿಎಂಟಿಸಿ ಕೂಡ ಪ್ರಯಾಣಿಕರನ್ನು ಆಕರ್ಷಿಸಲು ಹಾಗೂ ರಸ್ತೆ ಮೇಲಿನ ಒತ್ತಡ ತಗ್ಗಿಸಲು “ಹೆರಿಟೇಜ್‌’ ರೂಪದಲ್ಲಿ ನಗರದಲ್ಲಿ ಡಬಲ್‌ ಡೆಕ್ಕರ್‌ ಬಸ್‌ಗಳನ್ನು ಮರುಪರಿಚಯಿಸಲು ಬಿಎಂಟಿಸಿ ತೀರ್ಮಾನ ಕೈಗೊಂಡಿತ್ತು. ಡಿಸೆಂಬರ್‌ ಅಂತ್ಯದೊಳಗೆ ಈ ಮಾದರಿಯ ನಾಲ್ಕು ಬಸ್‌ಗಳನ್ನು ನಗರದ ಪ್ರವಾಸಿ ತಾಣಗಳ ಮಾರ್ಗಗಳಲ್ಲಿ ಕಾರ್ಯಾಚರಣೆ ಆರಂಭಿಸಲು ಉದ್ದೇಶಿಸಿತ್ತು. ಆದರೆ, ಬಸ್‌ ತಯಾರಿಕೆ ಕಂಪೆನಿಗಳಿಂದ ಪೂರಕ ಸ್ಪಂದನೆ ದೊರೆಯದ ಹಿನ್ನೆಲೆಯಲ್ಲಿ ಈ ನಿಟ್ಟಿನಲ್ಲಿ ಇದುವರೆಗೆ ಯಾವುದೇ ಬೆಳವಣಿಗೆಗಳು ನಡೆದಿಲ್ಲ.

– ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next