ನಾಳೆ ಗಣೇಶ ಹಬ್ಬ. ಎಲ್ಲೆಡೆ ಸಂಭ್ರಮಕ್ಕೆ ವೇದಿಕೆ ಸಜ್ಜಾಗುತ್ತಿದೆ. ಮತ್ತೂಂದೆಡೆ ಸ್ಯಾಂಡಲ್‌ವುಡ್ ಅಭಿಮಾನಿಗಳ ಪಾಲಿನ ಪ್ರೀತಿಯ ಕಿಚ್ಚ ನಟ ಸುದೀಪ್ ಅವರ ಹುಟ್ಟುಹಬ್ಬವೂ ಅದೇ ದಿನ (ಸೆ. 2) ಬಂದಿದೆ. ಹಾಗಾಗಿ ಈ ದಿನ ಸುದೀಪ್ ಅಭಿಮಾನಿಗಳ ಪಾಲಿಗಂತೂ ಡಬಲ್ ಸಂಭ್ರಮ ಅಂದರೆ ತಪ್ಪಲ್ಲ.
ಒಂದೆಡೆ ಗಲ್ಲಿ-ಗಲ್ಲಿಗಳಲ್ಲಿ ಹುಡುಗರು ಗಣೇಶನನ್ನು ಕೂರಿಸಲು ತಯಾರಿ ಮಾಡಿಕೊಳ್ಳುತ್ತಿದ್ದರೆ, ಮತ್ತೂಂದೆಡೆ ಅದೇ ಸುದೀಪ್ ಅವರ ಅಪಾರ ಅಭಿಮಾನಿಗಳು ಸಹ ರಾಜ್ಯಾದ್ಯಂತ ಗಣೇಶ ಹಬ್ಬದ ಜೊತೆಜೊತೆಗೇ ತಮ್ಮ ನೆಚ್ಚಿನ ನಟನ ಜನ್ಮದಿನವನ್ನೂ ಅದ್ಧೂರಿಯಾಗಿ ಆಚರಿಸಲು ಜೋರು ತಯಾರಿ ಮಾಡಿಕೊಳ್ಳುತ್ತಿದ್ದಾರೆ.
ಇನ್ನು ಎಂದಿನಂತೆ ಈ ಬಾರಿ ಕೂಡ ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬದ ಅಂಗವಾಗಿ ಅವರ ಕಿಚ್ಚನ ಅಭಿಮಾನಿಗಳು ಉಚಿತ ಅನ್ನದಾನ ಶಿಬಿರ, ಉಚಿತ ವೈದ್ಯಕೀಯ ತಪಾಸಣಾ ಶಿಬಿರ, ಆಸ್ಪತ್ರೆಯ ರೋಗಿಗಳಿಗೆ ಹಣ್ಣು-ಹಂಪಲು ವಿತರಣೆ ಸೇರಿದಂತೆ ಇನ್ನೂ ಅನೇಕ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಹಲವು ಸಾಮಾಜಿಕ ಕೆಲಸಗಳನ್ನು ಹಮ್ಮಿಕೊಂಡಿದ್ದಾರೆ.
ಎಂದಿನಂತೆಯೇ ಈ ಬಾರಿಯೂ ಸಹ ಸುದೀಪ್ ಅವರ ಹುಟ್ಟುಹಬ್ಬಕ್ಕೆ ಅವರು ಅಭಿನಯಿಸುತ್ತಿರುವ ಮುಂಬರುವ ಕೆಲವು ಹೊಸ ಚಿತ್ರಗಳ ಟೈಟಲ್, ಪೋಸ್ಟರ್‌ಗಳು ಕೂಡ ಬಿಡುಗಡೆಯಾಗಲಿವೆ. ಕೆಲವರು ಸುದೀಪ್ ಅವರೊಂದಿಗೆ ತಮ್ಮ ಹೊಸ ಚಿತ್ರಗಳನ್ನೂ ಘೋಷಣೆ ಮಾಡಲಿದ್ದಾರೆ.
ಸುದೀಪ್ ಅಭಿಮಾನಿಗಳಂತೂ ಸೆ.1 (ಇಂದು)ರ ಮಧ್ಯರಾತ್ರಿಯೇ ಅವರ ನಿವಾಸದ ಎದುರು ಸಾಲುಗಟ್ಟಿ ನಿಂತು, ಪ್ರೀತಿಯ ನಾಯಕನಿಗೆ ಹೂಗುಚ್ಛ ನೀಡಿ, ತರಹೇವಾರಿ ಕೇಕ್‌ಗಳನ್ನು ಕಟ್ ಮಾಡುವ ಮೂಲಕ ಅವರೊಂದಿಗೆ ಹುಟ್ಟುಹಬ್ಬದ ಸಂಭ್ರಮವನ್ನು ಕಳೆಯಲು ತುದಿಗಾಲ ಮೇಲೆ ನಿಂತಿದ್ದಾರೆ.
ಇನ್ನು ಈ ಬಾರಿ ಸುದೀಪ್ ಅವರ ಹುಟ್ಟುಹಬ್ಬದ ಅಂಗವಾಗಿ, ಈಗಾಗಲೇ ಎಲ್ಲೆಡೆ ಬಹುನಿರೀಕ್ಷೆ ಹೆಚ್ಚಿಸಿರುವ “ಪೈಲ್ವಾನ್’ ಚಿತ್ರ ಸೆ.12 ರಂದು ಬಿಡುಗಡೆಯಾಗುತ್ತಿದೆ. ಈಗಾಗಲೇ ಐದು ಭಾಷೆಗಳಲ್ಲೂ ಚಿತ್ರ ಬಿಡುಗಡೆಗೆ ತಯಾರಿ ಮಾಡಿಕೊಂಡಿರುವ ಚಿತ್ರತಂಡ, “ಪೈಲ್ವಾನ್’ ಚಿತ್ರದ ಪ್ರಮೋಶನ್ ಕೆಲಸಗಳನ್ನು ಭರ್ಜರಿಯಾಗಿ ಮಾಡಿಕೊಳ್ಳುತ್ತಿದೆ.
ಈಗಾಗಲೇ ಬಿಡುಗಡೆಯಾಗಿರುವ “ಪೈಲ್ವಾನ್’ ಚಿತ್ರದ ಪೋಸ್ಟರ್, ಟೀಸರ್, ಹಾಡುಗಳು ಮತ್ತು ಟ್ರೇಲರ್‌ಗಳು ಚಿತ್ರರಂಗದಲ್ಲಿ ದೊಡ್ಡ ನಿರೀಕ್ಷೆ ಮೂಡಿಸಿರುವುದಂತೂ ಸುಳ್ಳಲ್ಲ. ಈ ಚಿತ್ರದ ಮೂಲಕ ಬಾಲಿವುಡ್‌ನ ಸ್ಟಾರ್ ನಟ ಸುನೀಲ್‌ಶೆಟ್ಟಿ ಸ್ಯಾಂಡಲ್‌ವುಡ್‌ಗೆ ಎಂಟ್ರಿಯಾಗಿದ್ದಾರೆ.