Advertisement

ಡಬಲ್‌ ಬ್ಯಾನರ್‌ನಿಂದ “ಕಾಂಗ್ರೆಸ್‌’ಗೆ ತಲೆನೋವು!

09:44 AM Oct 15, 2021 | Team Udayavani |

ಸಿಂಧನೂರು: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕೈ ತಪ್ಪಿರುವ ಕ್ಷೇತ್ರ ಮರಳಿ ಮಡಿಲಿಗೆ ಹಾಕಿಕೊಳ್ಳುವ ವಿಷಯದಲ್ಲೇ ಸ್ಪರ್ಧೆ ಏರ್ಪಟ್ಟಿದೆ. ಈ ಸ್ಪರ್ಧೆ ಈಗ ಕಾರ್ಯಕರ್ತರಲ್ಲಿ ಕಿರಿಕಿರಿಯುಂಟು ಮಾಡುವ ಮಟ್ಟಿಗೆ ದೊಡ್ಡದಾಗಿದ್ದು, ಹೈಕಮಾಂಡ್‌ ಆಟ ತಳಮಟ್ಟದಲ್ಲಿ ತಳಮಳ ಸೃಷ್ಟಿಸಿದೆ.

Advertisement

ಕಾಂಗ್ರೆಸ್‌ ಪರವಾಗಿ ಒಂದೇ ವೇದಿಕೆಯಲ್ಲಿ ಏರ್ಪಡಿಸಬೇಕಾದ ಕಾರ್ಯಕ್ರಮಗಳು ಪ್ರತ್ಯೇಕ ವೇದಿಕೆ ಹಂಚಿಕೊಂಡು ಪ್ರತಿ ದಿನವೂ ಸ್ಪರ್ಧೆಗೆ ಬಿದ್ದಿರುವ ಪರಿಣಾಮ ಕಾರ್ಯಕರ್ತರು ಪೇಚಿಗೆ ಸಿಲುಕಿದ್ದಾರೆ.

ಮುಂದಿನ ವಿಧಾನಸಭೆ ಚುನಾವಣೆಗಿಂತ ಮುಖ್ಯವಾಗಿ ಆಕಾಂಕ್ಷಿಗಳು ವೈಯಕ್ತಿಕವಾಗಿ ಸಿಂಧನೂರು ತಾಲೂಕಿನಲ್ಲಿ ಅಸ್ತಿತ್ವದ ಕಸರತ್ತು ಆರಂಭಿಸಿದ್ದಾರೆ. 36 ವರ್ಷದ ರಾಜಕೀಯ ಅನುಭವ ಇರುವ ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಅವರಿಗೂ ಈ ಬೆಳವಣಿಗೆ ಇರಿಸು-ಮುರಿಸು ಸೃಷ್ಟಿಸಿವೆ. ಬಹಿರಂಗವಾಗಿ ಅವರು ಹೇಳಿಕೆ ನೀಡಲು ಮನಸ್ಸು ಮಾಡದಿದ್ದರೂ ಪರೋಕ್ಷವಾಗಿ ಬೆಂಬಲಿಗರಿಗೆ ಸಂದೇಶ ರವಾನಿಸುವ ಕೆಲಸ ಮಾಡಿದ್ದಾರೆ.

ಏನಿದು ಗೊಜಲು?

ಹಲವು ತಿಂಗಳ ಹಿಂದೆ ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್‌ ಪಕ್ಷದ ಎರಡು ಗುಂಪು ಮಹಾತ್ಮ ಗಾಂಧಿ  ಸರ್ಕಲ್‌ನಲ್ಲಿ ಅಕ್ಕಪಕ್ಕ ಕುಳಿತು ಏಕಕಾಲಕ್ಕೆ ಪ್ರತಿಭಟನೆ ನಡೆಸಿದ ದಿನವೇ ಸಾರ್ವಜನಿಕವಾಗಿ ಗುಂಪುಗಾರಿಕೆ ರಟ್ಟಾಗಿತ್ತು. ಅದೀಗ ಕಾಂಗ್ರೆಸ್‌ ಹೈಕಮಾಂಡ್‌ ಸೂಚನೆ ಪ್ರಕಾರ ಆಯೋಜಿಸುತ್ತಿರುವ ಮಹಾತ್ಮ ಗಾಂಧಿ ಗ್ರಾಮ-ಸ್ವರಾಜ್‌ ಕಾರ್ಯಕ್ರಮದವರೆಗೂ ವ್ಯಾಪಿಸಿದೆ. ಒಂದೇ ಉದ್ದೇಶ, ಒಂದೇ ಕಾಂಗ್ರೆಸ್‌ ಇದ್ದರೂ ಎರಡು ಗುಂಪಾಗಿ ಸಂಘಟಿಸುತ್ತಿರುವ ಕಾರ್ಯಕ್ರಮಗಳು ಕಾಂಗ್ರೆಸ್‌ ಪಕ್ಷ ನಿಷ್ಠರನ್ನು ಚದುರಿಸಲಾರಂಭಿಸಿವೆ.

Advertisement

ಸಾರ ಒಂದೇ, ಕಾರ್ಯಕ್ರಮ ಎರಡು

ಏಕಕಾಲಕ್ಕೆ ಬ್ಲಾಕ್‌ ಕಾಂಗ್ರೆಸ್‌-ತಾಲೂಕು ಕಾಂಗ್ರೆಸ್‌ ಎಂಬ ಎರಡು ಬ್ಯಾನರ್‌ಗಳಡಿ ಆಯೋಜಿಸಲಾಗುತ್ತಿರುವ ಕಾರ್ಯಕ್ರಮಗಳೇ ತೀವ್ರ ಬಿರುಗಾಳಿ ಎಬ್ಬಿಸಿವೆ. ಮುಂದಿನ ದಿನಗಳಲ್ಲಿ ತಾಲೂಕಿನಲ್ಲಿ ಕಾಂಗ್ರೆಸ್‌ ವರ್ಸಸ್‌ ಕಾಂಗ್ರೆಸ್‌ ಚುನಾವಣೆ ಎಂಬ ಮುನ್ಸೂಚನೆ ಕಾಣಲಾರಂಭಿಸಿದೆ. ಕಾರ್ಯಕ್ರಮಗಳಿಗೆ ಸೀಮಿತಗೊಳ್ಳದ ಪಕ್ಷದ ಗುಂಪುಗಾರಿಕೆ ಸ್ಪರ್ಧೆ, ಪ್ರತ್ಯೇಕ ಬೆಂಬಲಿಗರನ್ನು ಆಕರ್ಷಿಸುವ ಮಟ್ಟಿಗೆ ಸಂಘಟನೆ ಚುರುಕಾಗಿದೆ. ಬ್ಲಾಕ್‌ ಕಾಂಗ್ರೆಸ್‌ ಮುಂದಾಳತ್ವದಲ್ಲಿ ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಮುನ್ನಡೆದರೆ, ತಾಲೂಕು ಕಾಂಗ್ರೆಸ್‌ ಎಂಬ ಬ್ಯಾನರ್‌ನಡಿ ಬಸನಗೌಡ ಬಾದರ್ಲಿ ಸಂಘಟನೆ ಆರಂಭಿಸಿದ್ದಾರೆ. ಸ್ಥಳ, ಪಕ್ಷ ಬದಲಾಗದಿದ್ದರೂ ಕಾರ್ಯಕ್ರಮ ಮಾತ್ರ ಒಂದೇ ಇರುತ್ತವೆ ಎಂಬುದೇ ಕಾರ್ಯಕರ್ತರಲ್ಲಿ ದಿಗಿಲು ಹುಟ್ಟಿಸಿದೆ.

ಹೈಕಮಾಂಡ್ಆಟ ಕಾರಣವೇ?

ಕಾಂಗ್ರೆಸ್‌ ಹೈಕಮಾಂಡ್‌ ಕಳೆದೊಂದು ವರ್ಷದಿಂದ ಯಾವುದೇ ಟಾಸ್ಕ್ ನೀಡಿದರೂ ತಾಲೂಕಿನಲ್ಲಿ ಪ್ರತ್ಯೇಕವಾಗಿ ಸಭೆ-ಸಮಾರಂಭ ನಡೆಯುವುದು ಸಾಮಾನ್ಯವಾಗಿದೆ. ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ ಸಂದರ್ಭ ಸೇರಿದಂತೆ ಎಲ್ಲ ಕಾಲಕ್ಕೂ ಇದು ಸಾಬೀತಾಗಿದೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌. ಧ್ರುವನಾರಾಯಣ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಬಿ.ವಿ. ನಾಯಕ ಭೇಟಿ ವೇಳೆಯೂ ರಟ್ಟಾಗಿದೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಪ್ರವಾಸದ ವೇಳೆ ಕಿವಿಗೆ ಬಿದ್ದಾಗಿದೆ. ಎಲ್ಲರನ್ನೂ ಕೈ ಬಿಟ್ಟು ಹೈಕಮಾಂಡ್‌ ಕಾದು ನೋಡುವ ಆಟಕ್ಕೆ ನಿಂತಿದೆಯೇ? ಎಂಬ ಪ್ರಶ್ನೆ ಕಾಂಗ್ರೆಸ್‌ ನಿಷ್ಠಾವಂತರನ್ನು ಕಾಡುತ್ತಿದೆ.

ಮನೆಯೊಂದುಮೂರು ಬಾಗಿಲು?

ಕಾಂಗ್ರೆಸ್‌ ಒಂದೇ ಆದರೂ ಮನೆಯೊಂದು ಮೂರು ಬಾಗಿಲು ಎನ್ನುವಂತಾಗಿದೆ. ತಾಲೂಕು ಕಾಂಗ್ರೆಸ್‌ ಇಲ್ಲವೇ ಬ್ಲಾಕ್‌ ಕಾಂಗ್ರೆಸ್‌ ಎಂಬ ಯಾವುದೇ ಬ್ಯಾನರ್‌ಗಳಿಲ್ಲದೇ ಕೆಪಿಸಿಸಿ ಮಾಜಿ ಕಾರ್ಯದರ್ಶಿ ಕೆ. ಕರಿಯಪ್ಪ ತಮ್ಮದೇ ರೀತಿಯಲ್ಲಿ ಚಟುವಟಿಕೆ ನಡೆಸಿದ್ದಾರೆ. ಈ ಹಿಂದೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಕರಿಯಪ್ಪ ಅವರು ನಾಡಗೌಡರನ್ನೇ ಹಿಂದಕ್ಕಿ 2ನೇ ಸ್ಥಾನಕ್ಕೆ ಕಾಯ್ದುಕೊಂಡ ನಿದರ್ಶನವಿದೆ. ಈ ಬೆಳವಣಿಗೆ ಜೆಡಿಎಸ್‌, ಬಿಜೆಪಿ ಪಾಲಿಗೆ ಬಯಸದ ಭಾಗ್ಯವೆಂದೇ ವಿಶ್ಲೇಷಿಸಲಾಗುತ್ತಿದೆ. ಪರೋಕ್ಷವಾಗಿ ಟಾಂಗ್‌ ಕಾರ್ಯಕರ್ತರು ಮತ್ತು ನಾಯಕರ ಮಧ್ಯೆ ಏರ್ಪಟ್ಟಿರುವ ಗುಂಪುಗಾರಿಕೆ ಸರಿಪಡಿಸುವ ಕೂಗು ಪಕ್ಷದಲ್ಲಿ ಸ್ಫೋಟಗೊಳ್ಳುತ್ತಿದ್ದಂತೆ ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಜಾಣ್ಮೆ ನಡೆ ಪ್ರದರ್ಶಿಸಿ, ಪರೋಕ್ಷ ಸಂದೇಶ ರವಾನಿಸಿದ್ದಾರೆ. ಮೇಣದ ಬತ್ತಿ ಉರಿಯುವರೆಗೂ ಉರಿಯುತ್ತೆ, ಆಮೇಲೆ ಆರಿ ಹೋಗುತ್ತದೆ? ಎನ್ನುವುದನ್ನು ತಲೆಯಲ್ಲಿಟ್ಟುಕೊಂಡು ಮುಂದೆ ನಡೆಯುವಂತೆ ತಮ್ಮ ಬೆಂಬಲಿಗರಿಗೆ ಸಲಹೆ ನೀಡಿದ್ದಾರೆ.

-ಯಮನಪ್ಪ ಪವಾರ

 

Advertisement

Udayavani is now on Telegram. Click here to join our channel and stay updated with the latest news.

Next