ದೋಟಿಹಾಳ: ತಾಲೂಕಿನ ಕಿಲ್ಲಾರಹಟ್ಟಿ ಗ್ರಾ.ಪಂ. ವ್ಯಾಪ್ತಿಯ ರಾಮಜೀ ನಾಯಕ್ ತಾಂಡದಲ್ಲಿ ಅಂಗನವಾಡಿ ಕೇಂದ್ರ ಇಲ್ಲದ ಕಾರಣ ತಾಂಡದಲ್ಲಿ 3- 6 ವರ್ಷದೊಳಗಿನ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಎಂದು ಉದಯವಾಣಿ ಪತ್ರಿಕೆಯಲ್ಲಿ ಸುದ್ದಿ ಪ್ರಕಟಗೊಂಡ ಹಿನ್ನೆಲೆ ಜಿಪಂ ಸಿಇಓ ಫೆ. 14ರ ಬುಧವಾರ ತಾಂಡಕ್ಕೆ ಭೇಟಿ ನೀಡಿದರು.
ಕಳೆದ ತಿಂಗಳು ಜ. 2 ರಂದು ಉದಯವಾಣಿ ಆನ್ ಲೈನ್ ಮತ್ತು ಜ.3 ರಂದು ಉದಯವಾಣಿ ಪತ್ರಿಕೆಯಲ್ಲಿ ತಾಂಡ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಮಕ್ಕಳ ಶಿಕ್ಷಣವನ್ನು ಮೂಲಭೂತ ಹಕ್ಕು ಆರ್ಟಿಕಲ್ 51-ಎ ಉಲ್ಲಂಘನೆ ಆಗುತ್ತಿರುವ ಬಗ್ಗೆ ಸುದ್ದಿ ಪ್ರಕಟಗೊಂಡ ಹಿನ್ನೆಲೆ ಜ. 8 ರಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶೇಖರಗೌಡ ಜೆ. ರಾಮತ್ನಾಳ, ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿಗಳು, ತಾಲೂಕು ವಿವಿಧ ಇಲಾಖೆಯ ಅಧಿಕಾರಗಳು ಭೇಟಿ ನೀಡಿದರು. ಆದರೆ ಇದುವರೆಗೂ ತಾಂಡದ ಮಕ್ಕಳಿಗೆ ಶಿಕ್ಷಣ ನೀಡುವ ವ್ಯವಸ್ಥೆ ಯಾರು ಮಾಡಿಲಿಲ್ಲ.
ಮಕ್ಕಳಿಗೆ ಶಿಕ್ಷಣ, ಆಹಾರ ನೀಡಲು ಮುಂದಾದ ಮಹಿಳೆ: ತಾಂಡದ ಮಕ್ಕಳಿಗೆ ಶಿಕ್ಷಣ ಸಿಗುತ್ತಿಲ್ಲ. ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರು ಭೇಟಿ ನೀಡಿದರು. ಮಕ್ಕಳಿಗೆ ತಾತ್ಕಾಲಿಕ ಶಿಕ್ಷಣ ನೀಡುವ ವ್ಯವಸ್ಥೆ ಮಾಡದ ಕಾರಣ, ತಾಂಡದ ಮಹಿಳೆ ಶಿಲ್ಪಾ ಚವ್ಹಾಣ ಅವರು ತಾಂಡದ ಮಕ್ಕಳಿಗೆ ಸ್ವಯಂ ಪ್ರೇರಿತವಾಗಿ ಶಿಕ್ಷಣ ಹಾಗೂ ಅನ್ನ, ಆಹಾರ ನೀಡಿ ಮಕ್ಕಳಿಗೆ ಶಿಕ್ಷಣ ನೀಡಲು ಮುಂದಾದರು.
ಇದರ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿದ ಸಿಇಓ ವಿಚಾರಿಸಿದಾಗ, ಕಳೆದ ತಿಂಗಳ ತಾಂಡಕ್ಕೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರು ಭೇಟಿ ನೀಡಿದ ವೇಳೆ ತಾಂಡದಲ್ಲಿ ಅಂಗನವಾಡಿ ಕೇಂದ್ರ ಆರಂಭ ಆಗುವವರೆಗೆ ಮಕ್ಕಳಿಗೆ ತಾತ್ಕಾಲಿಕ ಶಿಕ್ಷಣ ನೀಡುವ ವ್ಯವಸ್ಥೆ ಮಾಡುವಂತೆ ಸೂಚನೆ ನೀಡಿದ್ದರು. ತಾಲೂಕಿನ ಯಾವ ಅಧಿಕಾರಿಗಳು ಮಕ್ಕಳ ಶಿಕ್ಷಣಕ್ಕೆ ಸಹಕಾರ ನೀಡದ ಕಾರಣ ನಾನೇ ನಮ್ಮ ತಾಂಡದ ಮಕ್ಕಳಿಗೆ ಶಿಕ್ಷಣ ನೀಡಲು ಮುಂದಾಗಿದ್ದೇನೆ ಎಂದು ಅಧಿಕಾರಿಗಳಿಗೆ ಮಾಹಿತಿ ನೀಡಿದರು.
ಸದ್ಯ ತಾಂಡಕ್ಕೆ ಹೊಸ ಅಂಗನವಾಡಿ ಕೇಂದ್ರ ಆರಂಭವಾಗುವವರೆಗೆ ಮಕ್ಕಳಿಗೆ ಶಿಕ್ಷಣ ನೀಡಲು ತಿಳಿಸಿದ ಅವರು ಗ್ರಾ.ಪಂ.ನಿಂದ ಗೌರವ ಧನ ನೀಡುವ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.
ಸಿಡಿಪಿಓ ಅವರು ಮಕ್ಕಳಿಗೆ ಆಹಾರ ನೀಡುವ ವ್ಯವಸ್ಥೆ ಮಾಡುತ್ತಾರೆ ಎಂದು ಹೇಳಿ ತಾತ್ಕಾಲಿಕ ಕೇಂದ್ರಕ್ಕೆ ಸುಣ್ಣ, ಬಣ್ಣ, ರಿಪೇರಿ ಹಾಗೂ ಮಕ್ಕಳ ಕಲಿಕಾ ಸಾಮಗ್ರಿಗಳು ನೀಡುವ ವ್ಯವಸ್ಥೆ ಮಾಡಲು ಗ್ರಾ.ಪಂ. ಅಧ್ಯಕ್ಷರಿಗೆ ಸೂಚನೆ ನೀಡಿದರು.