ದೋಟಿಹಾಳ: ಅಧ್ಯಕ್ಷರ ನಿರ್ಲಕ್ಷದಿಂದ ಗ್ರಾಪಂ ಘನ ತ್ಯಾಜ್ಯ ವಿಲೇವಾರಿ ಘಟಕದಿಂದ ವಂಚಿತವಾಗಿದೆ. 7-8 ತಿಂಗಳ ಹಿಂದೆ ಪಕ್ಕದ ಶಿರಗುಂಪಿ ಗ್ರಾಪಂ ವ್ಯಾಪ್ತಿಯಲ್ಲಿ ಸುಮಾರು 2 ಎಕರೆ ಭೂಮಿಯಲ್ಲಿ 5 ಗ್ರಾಪಂಗಳನ್ನು ಸೇರಿಸಿ ಒಂದು ಕ್ಲಸ್ಟರ್ ಮಾದರಿಯ ಘನ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸಲು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಯೋಜನೆ ಸಿದ್ಧಪಡಿಸಿದರು.
ಶಿರಗುಂಪಿ, ಕೇಸೂರು, ಬಿಜಕಲ್ ಮತ್ತು ಕ್ಯಾದಗುಪ್ಪಾ ಗ್ರಾಪಂ ಅಧ್ಯಕ್ಷರು ಯೋಜನೆಯ ಒಪ್ಪಿಗೆ ಪತ್ರಕ್ಕೆ ಸಹಿ ಹಾಕಿದ್ದಾರೆ. ಆದರೆ ದೋಟಿಹಾಳ ಗ್ರಾಪಂ ಅಧ್ಯಕ್ಷರು ಮಾತ್ರ ಈ ಯೋಜನೆ ಪತ್ರಕ್ಕೆ ಸಹಿ ಹಾಕದ ಕಾರಣ ದೋಟಿಹಾಳ ಗ್ರಾಪಂ ಘನ ತ್ಯಾಜ್ಯ ವಿಲೇವಾರಿ ಘಟಕದಿಂದ ಸದ್ಯ ದೂರ ಉಳಿದಿದೆ.
ಗ್ರಾಮದಲ್ಲಿ ತ್ಯಾಜ್ಯ ವಿಲೇವಾರಿ ವ್ಯವಸ್ಥೆ ಇಲ್ಲದ ಕಾರಣ ಗ್ರಾಮಸ್ಥರು ಕಂಡ ಕಂಡಲ್ಲಿ ಕಸ ಹಾಕುತ್ತಿದ್ದಾರೆ. ಇದರಿಂದ ಗ್ರಾಮದ ರಸ್ತೆಗಳು ಗಬ್ಬೆದ್ದು ನಾರುತ್ತಿವೆ. ಗ್ರಾಮದಲ್ಲಿ ಕಸದ ಸಮಸ್ಯೆ ಇದ್ದರೂ ಗ್ರಾಪಂ ಅಧ್ಯಕ್ಷರು ಘನ ತ್ಯಾಜ್ಯ ವಿಲೇವಾರಿ ಘಟಕದ ಒಪ್ಪಿಗೆ ಪತ್ರಕ್ಕೆ ಸಹಿ ಹಾಕದೇ ಇರುವುದು ದುರಂತ.
ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಅಧ್ಯಕ್ಷರು ಸಹಿ ಹಾಕಿದರೆ ಗ್ರಾಪಂಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ತಲಾ 20 ಲಕ್ಷ ರೂ. ನೆರವು ಬರುತ್ತಿತು. ಇದರಲ್ಲಿ ಕಸ ಸಂಗ್ರಹಣೆಯ ವಾಹನ, ಕಸದ ಬುಟ್ಟಿ ಹಾಗೂ ಮತ್ತಿತರ ಪರಿಕರಗಳನ್ನು ಖರೀದಿ ಮಾಡಬಹುದು. ಜೊತೆಗೆ ಹಣದ ಕೊರತೆಯಾದರೇ ಎನ್‌ಆರ್‌ಜಿ ಯೋಜನೆಯಲ್ಲಿ ಹಣ ಖರ್ಚು ಮಾಡಬಹುದು. ಇಷ್ಟೇಲ್ಲ ಸೌಲಭ್ಯಗಳು ಇದ್ದರು ಅಧ್ಯಕ್ಷರು ಇದಕ್ಕೆ ಒಪ್ಪಿಗೆ ನೀಡಲ್ಲ.
– ಮಲ್ಲಿಕಾರ್ಜುನ ಮೆದಿಕೇರಿ