ವರದಿ: ಮಲ್ಲಿಕಾರ್ಜುನ ಮೆದಿಕೇರಿ
ದೋಟಿಹಾಳ: ಸ್ಥಳೀಯ ಗ್ರಾಪಂ ನಿರ್ಮಲ ಗ್ರಾಮ ಪ್ರಶಸ್ತಿ ಪಡೆದು 10 ವರ್ಷಗಳು ಕಳೆದರೂ ಇನ್ನೂ ಅಭಿವೃದ್ಧಿಯಾಗಿಲ್ಲ. ಗ್ರಾಪಂ ವ್ಯಾಪ್ತಿಯ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ತ್ಯಾಜ್ಯ, ನೀರು ಸಂಗ್ರಹಗೊಂಡು ರಸ್ತೆಗಳು ಚರಂಡಿಯಂತಾಗಿವೆ. ಗ್ರಾಪಂ ಕೇವಲ ಪತ್ರದಲ್ಲಷ್ಟೇ ನಿರ್ಮಲ ಗ್ರಾಮ ಪುರಸ್ಕೃತ ಗ್ರಾಮವಾಗಿದೆ. ಅಭಿವೃದ್ಧಿಯಲ್ಲಿ ಮಾತ್ರ ಶೂನ್ಯ ಸಾಧನೆ.
ಇಲ್ಲಿಯ ಗ್ರಾಪಂಗೆ 2010ರಲ್ಲಿ ನಿರ್ಮಲ ಗ್ರಾಮ ಪ್ರಶಸ್ತಿ ಬಂದಿದೆ. ಯೋಜನೆಯ ಅಡಿಯಲ್ಲಿ ಲಕ್ಷಾಂತರ ರೂ. ಬೆಲೆಬಾಳುವ ಸಾಮಗ್ರಿಗಳು ಬಂದಿದ್ದರೂ ಅದನ್ನು ಸರಿಯಾಗಿ ಬಳಸಿಕೊಳ್ಳದೇ ಕಳೆದ 7-8 ವರ್ಷಗಳಿಂದ ಅವುಗಳು ಮೂಲೆಗುಂಪಾಗಿವೆ. ಎಲ್ಲಿದೆ ನಿರ್ಮಲ ಗ್ರಾಮ?: ಕೇಂದ್ರ ಸರ್ಕಾರ ಗ್ರಾಮೀಣ ಅಭಿವೃದ್ಧಿಯ ಸಲುವಾಗಿ ಲಕ್ಷಾಂತರ ರೂ. ಖರ್ಚು ಮಾಡುತ್ತಿದೆ. ಗ್ರಾಮೀಣ ಭಾಗದ ಹಳ್ಳಿಗಳಲ್ಲಿ ಕಾಂಕ್ರೀಟ್ ರಸ್ತೆಗಳು, ಶೌಚಾಲಯ, ಕಸ ವೈಜ್ಞಾನಿಕ ವಿಲೇವಾರಿ ಮತ್ತು ಗ್ರಾಮದ ನೈರ್ಮಲ್ಯ ಕಾಪಾಡುವುದು ಯೋಜನೆ ಉದ್ದೇಶ. ಆದರೆ ಗ್ರಾಮದ ಗಲ್ಲಿ ಗಲ್ಲಿಗಳಲ್ಲಿ ರಸ್ತೆ, ದೇವಸ್ಥಾನ ಮತ್ತು ಶಾಲಾ-ಕಾಲೇಜು ಆವರಣಗಳಲ್ಲಿ ಅನೈರ್ಮಲ್ಯತೆ ತಾಂಡವಾಡುತ್ತಿದೆ. ಬಸ್ ನಿಲ್ದಾಣದಲ್ಲಿ ಮಹಿಳೆಯರಿಗೂ ಶೌಚಾಲಯವಿಲ್ಲ. ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಹೀಗಿರುವಾಗ ಇದು ಹೇಗೆ ನಿರ್ಮಲ ಗ್ರಾಮ ಎಂದು ಪ್ರಶಸ್ತಿ ಪಡೆದಿದೆ ಎನ್ನುವುದು ತಿಳಿಯುತ್ತಿಲ್ಲ ಎಂಬುದು ಪ್ರಜ್ಞಾವಂತರ ಪ್ರಶ್ನೆಯಾಗಿದೆ.
ಅಧಿಕಾರಿಗಳ ನಿರ್ಲಕ್ಷ್ಯ: ಹತ್ತು ವರ್ಷಗಳ ಹಿಂದೆ ನಿರ್ಮಲ ಗ್ರಾಮ ಯೋಜನೆ ಅಡಿಯಲ್ಲಿ ಗ್ರಾಪಂಗೆ ಲಕ್ಷಾಂತರ ರೂ. ಬೆಲೆಬಾಳುವ ಸಲಿಕೆ, ಪುಟ್ಟಿ, ತಳ್ಳುವ ಬಂಡಿ, ಪೈಪ್, ದೀಪಗಳು ಮತ್ತು ಇನ್ನಿತರ ಸಾಮಾಗ್ರಿಗಳು ಬಂದಿದೆ. ಆದರೆ ಅವುಗಳನ್ನು ಅಧಿ ಕಾರಿಗಳು ಸರಿಯಾಗಿ ಬಳಸಿಕೊಳ್ಳದೇ ಇರುವುದರಿಂದ ಮೂಲೆ ಸೇರಿವೆ. ಇದರಿಂದ ನಿರ್ಮಲ ಗ್ರಾಮ ಎಂಬು ಪುರಸ್ಕಾರ ಕೇವಲ ಕಾಗದ ಪತ್ರದಲ್ಲಿ ಮಾತ್ರ ಆಗಿರುತ್ತದೆ. ಇದುವರೆಗೂ ಗ್ರಾಮದಲ್ಲಿ ಸ್ವತ್ಛತೆಗೆ ಆದ್ಯತೆ ನೀಡಬೇಕಾಗಿದ್ದ ಗ್ರಾಪಂ ನಿರ್ಲಕ್ಷ್ಯದಿಂದ ಗ್ರಾಮದ ಅನೇಕ ರಸ್ತೆಗಳು ಚರಂಡಿ, ಶೌಚಾಲಯಗಳು ಅನೈರ್ಮಲ್ಯದಿಂದ ಕೂಡಿವೆ.
ಇದುವರೆಗೂ ಕಸ ವಿಲೇವಾರಿಗೆ ಸಂಬಂಧಿಸಿದ ಪರಿಕರಗಳನ್ನು ಬಳಸಿಕೊಂಡಿಲ್ಲ. ಇನ್ನೂ ಕೆಲವು ಸಾಮಗ್ರಿಗಳು ಗ್ರಾಪಂ ಅವರ ನಿರ್ಲಕ್ಷ್ಯದಿಂದ ಹಾಳಾಗಿ ಹೊಗಿವೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಇಂದು ಗ್ರಾಮದ ಸಾರ್ವಜನಿಕರು ಕಸವನ್ನು ರಸ್ತೆಗಳಲ್ಲಿ ಮನಬಂತೆ ಹಾಕುತ್ತಿದ್ದಾರೆ. ಇದರಿಂದ ರಸ್ತೆಗಳು ಇಂದು ತ್ಯಾಜ್ಯ ಸಂಗ್ರಹಿಸುವ ತೊಟ್ಟಿಗಳಾಗಿವೆ. ಕಸ ಹಾಕಲು ಸರಿಯಾದ ಜಾಗವಿಲ್ಲ. ಕಸವನ್ನು ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡುತ್ತಿಲ್ಲ. ಹೀಗಾಗಿ ಗ್ರಾಮದಲ್ಲಿ ಅನೈರ್ಮಲ್ಯತೆ ತಾಂಡವಾಡುತ್ತಿದೆ.