ಬೆಂಗಳೂರು: ಸದ್ಯ ವಿವಾದದ ಕೇಂದ್ರಬಿಂದುವಾಗಿರುವ “ಇಂದಿರಾ ಕ್ಯಾಂಟೀನ್’ ಬಗ್ಗೆ ಪಾಲಿಕೆಯಲ್ಲಿ ಕಾಂಗ್ರೆಸ್ ಜತೆಗೂಡಿ ಆಡಳಿತ ನಡೆಸುತ್ತಿರುವ ಜೆಡಿಎಸ್‌ನಲ್ಲಿ ಮಿಶ್ರ ಅಭಿಪ್ರಾಯ ಹೊಂದಿದೆ. ಇಂದಿರಾಕ್ಯಾಂಟೀನ್ ಯೋಜನೆ ಬಗ್ಗೆ ಪಾಲಿಕೆಯಲ್ಲಿ ಬೆಂಬಲ ನೀಡಿರುವ ನಮ್ಮ ಜತೆ ಆಡಳಿತಾ ರೂಢ ಕಾಂಗ್ರೆಸ್ ಯಾವುದೇ ಚರ್ಚೆಯನ್ನೂ ಸಹ ಮಾಡಿರಲಿಲ್ಲ ಎಂದು ಕೆಲವು ಜೆಡಿಎಸ್ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮತ್ತೆ ಕೆಲವರು ಬಡವರಿಗೆ ಒಳ್ಳೆಯದಾದರೆ ಆಗಲಿ ಬಿಡಿ ಎಂದು ಹೇಳುತ್ತಾರೆ. ಮುಂದಿನ ವಿಧಾನಸಭೆ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಇಂದಿರಾ ಕ್ಯಾಂಟೀನ್ ಪ್ರಾರಂಭಿಸಲು ಕಾಂಗ್ರೆಸ್ ಮುಂದಾಗಿದೆ. ಆದರೆ, ಇದು ಹೆಚ್ಚು ದಿನ ಬಾಳುವುದಿಲ್ಲ ಎಂದು ಜೆಡಿಎಸ್ ನಗರ ಘಟಕದ ಅಧ್ಯಕ್ಷರೂ ಆಗಿರುವ ಪಾಲಿಕೆಯ ಮಾಜಿ ಪ್ರತಿಪಕ್ಷ ನಾಯಕ ಆರ್.ಪ್ರಕಾಶ್ ಅಭಿಪ್ರಾಯಪಟ್ಟಿದ್ದಾರೆ.
“ಇಂದಿರಾಕ್ಯಾಂಟೀನ್ ಸ್ಥಾಪನೆ ತರಾತುರಿಯಲ್ಲಿ ಕೈಗೊಂಡ ತೀರ್ಮಾನ. ದೇವಾಲಯ, ಆಟದ ಮೈದಾನ, ಪಾರ್ಕ್ ಜಾಗಗಳಲ್ಲಿ ಕ್ಯಾಂಟೀನ್ ನಿರ್ಮಾಣಕ್ಕೆ ಮುಂದಾಗಿರುವುದು ಸರಿಯಲ್ಲ. ಅಡುಗೆ ಒಂದು ಕಡೆ, ವಿತರಣೆ ಒಂದು ಕಡೆ ಮಾಡುವುದರಿಂದ ಗುಣಮಟ್ಟ ಕಾಯ್ದುಕೊಳ್ಳಲು ಸಾಧ್ಯವೇ ಇಲ್ಲ. ಜತೆಗೆ ಪ್ರಾರಂಭದಿಂದಲೂ ಇದು ವಿವಾದವೇ ಆಗಿದೆ,’ ಎನ್ನುತ್ತಾರೆ.
100 ಕಡೆ ಸಾಧ್ಯವೇ ಇಲ್ಲ
ಪಾಲಿಕೆಯ ಹಿರಿಯ ಸದಸ್ಯ ಬಿಟಿಎಂ ವಾರ್ಡ್‌ನ ದೇವದಾಸ್, “198 ವಾರ್ಡ್‌ಗಳಲ್ಲಿ 100 ಕಡೆ ಕ್ಯಾಂಟೀನ್ ಮಾಡಲು ಸಾಧ್ಯವೇ ಇಲ್ಲ. ಮೂಲತಃ ನಮ್ಮ ಬೆಂಗಳೂರಿಗೆ ಇದರ ಅಗತ್ಯವಿರಲಿಲ್ಲ. ನಮ್ಮ ಬಿಟಿಎಂ ವಾರ್ಡ್‌ನಲ್ಲಿ ಆಟದ ಮೈದಾನದಲ್ಲಿ ಕ್ಯಾಂಟೀನ್ ಪ್ರಾರಂಭಿಸಲು ಪಾಲಿಕೆ ಮುಂದಾಯಿತಾದರೂ ವಿರೋಧ ವ್ಯಕ್ತವಾದ ಕಾರಣ ಸ್ಥಗಿತಗೊಳಿಸಲಾಯಿತು. ನಮ್ಮ ವಾರ್ಡ್‌ನಲ್ಲಿ ಕ್ಯಾಂಟೀನ್‌ಗೆ ಬೇರೆ ಕಡೆ ಜಾಗವೂ ಇಲ್ಲ,’ ಎಂದಿದ್ದಾರೆ.
ಮಾರೇನಹಳ್ಳಿ ವಾರ್ಡ್‌ನ ಮಹದೇವ್, “ನಮ್ಮ ವಾರ್ಡ್‌ನಲ್ಲಿ ಇಂದಿರಾ ಕ್ಯಾಂಟೀನ್‌ಗೆ ಸ್ಥಳ ದೊರೆತಿಲ್ಲ. ಆದರೆ, ಕ್ಯಾಂಟೀನ್‌ನಿಂದ ಬಡವರಿಗೆ ಒಳ್ಳೆಯದಾದರೆ ಆಗಲಿ ಬಿಡಿ. ನಮ್ಮ ವಾರ್ಡ್‌ನಲ್ಲಿ ಕೊಳಗೇರಿ ವಾಸಿಗಳು ಹೆಚ್ಚಾಗಿದ್ದಾರೆ. ಅವರಿಗೆ ಕ್ಯಾಂಟೀನ್‌ನಿಂದ ಒಳ್ಳೆಯದಾಗುವುದಾದರೆ ನಾವೇಕೆ ಬೇಡ ಎಂದು ಹೇಳ್ಳೋಣ. ಆದರೆ, ಗುಣಮಟ್ಟದ ಆಹಾರ ಕೊಡಬೇಕು ಎಂಬುದಷ್ಟೇ ನಮ್ಮ ಬೇಡಿಕೆ,’ ಎಂದು ತಿಳಿಸುತ್ತಾರೆ.