Advertisement

ಶಕ್ತಿ ಕೇಂದ್ರದಲ್ಲಿ ದೋಸ್ತಿ; ಕಾರ್ಯಕರ್ತರ ನಡುವೆ ಕುಸ್ತಿ

07:00 AM Jul 16, 2018 | |

ಮಂಡ್ಯ: ರಾಜ್ಯದಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಅಧಿಕಾರ ನಡೆಸುತ್ತಿದ್ದರೂ, ಜೆಡಿಎಸ್‌ ಭದ್ರಕೋಟೆ ಮಂಡ್ಯ ಜಿಲ್ಲೆಯಲ್ಲಿ ಮಾತ್ರ ಎರಡೂ ಪಕ್ಷಗಳ ನಡುವೆ ಹಗೆತನದ ರಾಜಕಾರಣ ಹೊಗೆಯಾಡುತ್ತಿದ್ದು, ದಿನದಿಂದ ದಿನಕ್ಕೆ ರಾಜಕೀಯ ಸಾಮರಸ್ಯ ಹದಗೆಡುತ್ತಿದೆ.

Advertisement

ಬಿಜೆಪಿಯನ್ನು ದೂರ ಇಡುವ ನೆಪದಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಅಧಿಕಾರ ಹಂಚಿ ಕೊಂಡಿವೆಯಾದರೂ,ಮೈತ್ರಿ ವರಿಷ್ಠರ ಮಟ್ಟಕ್ಕೆ ಸೀಮಿತವಾದಂತೆ ಕಂಡು ಬರುತ್ತಿದೆಯೇ ವಿನಃ ಜಿಲ್ಲೆಯಲ್ಲಿ ಜೆಡಿಎಸ್‌-ಕಾಂಗ್ರೆಸ್‌ ಕಾರ್ಯಕರ್ತರು ಪರಸ್ಪರ ಎದುರಾಳಿಗಳಂತೆ ದ್ವೇಷ ಕಾರುತ್ತಿರುವುದು ಸಾಮಾನ್ಯವಾಗಿದೆ.

2018ರ ವಿಧಾನ ಸಭಾ ಚುನಾವಣೆಯಲ್ಲಿ ಜೆಡಿಎಸ್‌ನ ಪ್ರಬಲ ಎದುರಾಳಿ ನಾಯಕರೆಂದೇ ಬಿಂಬಿತರಾಗಿದ್ದ ಮಾಜಿ ಶಾಸಕರಾದ ಚಲುವರಾಯಸ್ವಾಮಿ ಮತ್ತು ರಮೇಶ್‌ ಬಂಡಿಸಿದ್ದೇಗೌಡ ಅವರ ವಿರುದ್ದದ ಸೇಡಿನ ರಾಜಕಾರಣ ಇಂದಿಗೂ ಮುಂದುವರಿದಿದೆ.

ಕಾಮಗಾರಿಗಳಿಗೆ ಅಡ್ಡಿ: ನಾಗಮಂಗಲ ಕ್ಷೇತ್ರದಲ್ಲಿ ಈಗಾಗಲೇ ಚಲುವರಾಯ ಸ್ವಾಮಿ ಅವರ ಅಧಿಕಾರ ಅವಧಿಯಲ್ಲಿ ಮಂಜೂರಾಗಿ ಪೂರ್ಣಗೊಂಡಿರುವ ಕಾಮಗಾರಿಗಳ ಬಿಲ್‌ ಪಾವತಿಗೆ ಶಾಸಕ ಸುರೇಶ್‌ಗೌಡ ಅಡ್ಡಿ ಪಡಿಸುತ್ತಿದ್ದಾರೆ. 

ಅಲ್ಲದೆ, ನೀರಾವರಿ ಇಲಾಖೆ,ಲೋಕೋಪಯೋಗಿ ಇಲಾಖೆ ಸೇರಿ ಕೆಲವು ಇಲಾಖೆಗಳ ಕೋಟ್ಯಂತರ ರೂ. ಕಾಮಗಾರಿಗಳನ್ನು ಉದ್ದೇಶಪೂರ್ವಕವಾಗಿ ತಡೆಹಿಡಿದಿರುವ ಆರೋಪಗಳಿದ್ದು, ಇದು ಚಲುವರಾಯ ಸ್ವಾಮಿ ಬೆಂಬಲಿಗರನ್ನು ಕೆರಳುವಂತೆ ಮಾಡಿದೆ. ಇಬ್ಬರ ಬೆಂಬಲಿಗರು ಪರಸ್ಪರ ಕಾದಾಡುವ ಹಂತ ತಲುಪಿದ್ದಾರೆ.

Advertisement

ಅಲ್ಲದೆ, ಚಲುವರಾಯಸ್ವಾಮಿ ಅವಧಿಯಲ್ಲಿ ನಾಮಕರಣಗೊಂಡಿದ್ದ ಸದಸ್ಯರನ್ನು ಪದಚ್ಯುತಗೊಳಿಸುವ ಪ್ರಕ್ರಿಯೆಯನ್ನು ಶಾಸಕ ಸುರೇಶ್‌ಗೌಡ ಮುಂದುವರಿಸಿದ್ದು, ಕ್ಷೇತ್ರವನ್ನು ಸಂಪೂರ್ಣವಾಗಿ ಚಲುವರಾಯಸ್ವಾಮಿ ಹಿಡಿತದಿಂದ ಸಡಿಲಗೊಳಿಸುವ ಸಾಹಸಕ್ಕೆ ಮುಂದಾಗಿದ್ದಾರೆ.

ಜಲ್ಲಿ ಕ್ರಷರ್ಗಳ ಮೇಲೆ ದಾಳಿ: ಶ್ರೀರಂಗ ಪಟ್ಟಣ ಕ್ಷೇತ್ರದಲ್ಲಿ ರಮೇಶ್‌ ಬಂಡಿಸಿದ್ದೇಗೌಡರ ವಿರುದ್ದವೂ ಮೂಲ ಜೆಡಿಎಸ್‌ ಕಾರ್ಯಕರ್ತರು ಮುಗಿ ಬೀಳುತ್ತಿದ್ದಾರೆ. ರಮೇಶ್‌ ಬೆಂಬಲಿತ ಗುತ್ತಿಗೆದಾರರು ನಡೆಸುತ್ತಿರುವ ಜಲ್ಲಿ ಕ್ರಷರ್‌ಗಳ ಮೇಲೆ ಶಾಸಕ ರವೀಂದ್ರ ಶ್ರೀಕಂಠಯ್ಯ ಬೆಂಬಲಿಗರು ದಾಂಧಲೆ ನಡೆಸಿದ್ದಾರೆಂಬ ಮಾತುಗಳು ಕೇಳಿ ಬರುತ್ತಿವೆ.

ರಾಜಕೀಯ ಸಮರ: ಮಳವಳ್ಳಿ ಕ್ಷೇತ್ರದಲ್ಲಿ ಅಭಿವೃದ್ದಿ ಕಾರ್ಯಗಳನ್ನು ಮಾಡುವುದರ ಜತೆಗೆ ಕಾಂಗ್ರೆಸ್‌
ವರ್ಚಸ್ಸನ್ನು ಸಂಭಾಳಿಸಿಕೊಂಡು ಬಂದಿದ್ದ ಮಾಜಿ ಶಾಸಕ ನರೇಂದ್ರ ಸ್ವಾಮಿ ವಿರುದ್ದ ಶಾಸಕ ಡಾ.ಕೆ.ಅನ್ನದಾನಿ ರಾಜಕೀಯ ಸಮರ ಆರಂಭಿಸಿದ್ದಾರೆ. ಶಿಷ್ಠಾ ಚಾರ ಪಾಲನೆಯ ಮೂಲಕ ಮಾಜಿ ಶಾಸಕರ ಅಭಿವೃದ್ದಿ ಗುಣಗಾನವನ್ನು ಕಟ್ಟಿ ಹಾಕುವ ಪ್ರಯತ್ನವನ್ನು ಮಾಡುತ್ತಿರುವ ಡಾ.ಕೆ.ಅನ್ನದಾನಿ, ಈಗಾಗಲೇ ನರೇಂದ್ರ ಸ್ವಾಮಿ ಅಧಿಕಾರಾವಧಿಯಲ್ಲಿ ನಡೆದಿರುವ ಅಭಿವೃದ್ದಿ ಕಾಮಗಾರಿಗಳ ಬಿಲ್‌ ಪಾವತಿಗೂ ಅಡ್ಡಿಯುಂಟು ಮಾಡುತ್ತಿದ್ದಾರೆಂದು ಹೇಳಲಾಗಿದೆ. ಒಟ್ಟಾರೆ  ರಾಜ್ಯ ಮಟ್ಟದಲ್ಲಿ ಕಾಂಗ್ರೆಸ್‌-ಜೆಡಿಎಸ್ ಮೇಲ್ನೋಟಕ್ಕೆ ಯಶಸ್ವಿ ಮೈತ್ರಿ ನಡೆಸುತ್ತಿದ್ದರೂ, ಜಿಲ್ಲೆಯಲ್ಲಿ ಮಾತ್ರ ಕಾಂಗ್ರೆಸ್‌- ಜೆಡಿಎಸ್‌ ಕಾರ್ಯಕರ್ತರ ನಿಷ್ಠೆ ಬದಲಾಗಿಲ್ಲ. ಪರಸ್ಪರ ಹೋರಾಟವೂ ನಿಂತಿಲ್ಲ. ಅದರಲ್ಲೂ ವಿಶೇಷವಾಗಿ ಜೆಡಿಎಸ್‌ನ ರೆಬಲ್‌ ನಾಯಕರ ಕ್ಷೇತ್ರದಲ್ಲಿ ಮೂಲ ಜೆಡಿಎಸ್‌ ಕಾರ್ಯಕರ್ತರ ಆರ್ಭಟವನ್ನು ಸಹಿಸಿಕೊ ಳ್ಳುವುದೇ ಮಾಜಿ ಶಾಸಕರಿಗ ಬಹು ದೊಡ್ಡ ಸವಾಲಾಗಿದೆ.

ನಾವು ಸಮ್ಮಿಶ್ರ ಸರ್ಕಾರದ ಅಂಗಪಕ್ಷವಾಗಿರುವುದರಿಂದ ಎಲ್ಲವನ್ನೂ ಸಹಿಸಿಕೊಂಡಿದ್ದೇವೆ. ಪಕ್ಷದ ತೀರ್ಮಾನಕ್ಕೆ ಬದ್ದರಾಗಿದ್ದೇವೆ.ಕಾರ್ಯಕರ್ತರ ಅನುಭವಿಸುತ್ತಿರುವ ನೋವುಗಳನ್ನು ಕೆಪಿಸಿಸಿ ಅಧ್ಯಕ್ಷರು ಹಾಗೂ ಸಮನ್ವಯ ಸಮಿತಿ ಅಧ್ಯಕ್ಷರ ಗಮನಕ್ಕೂ ತರುತ್ತೇವೆ.
– ಎನ್‌.ಚಲುವರಾಯಸ್ವಾಮಿ, ಮಾಜಿ ಶಾಸಕ

ಕಾಂಗ್ರೆಸ್‌ ಪಕ್ಷಕ್ಕೆ ನಾವು ಬದ್ದರು. ಆದರೆ, ಸಮ್ಮಿಶ್ರ ಸರ್ಕಾರದ ಗುಲಾಮರಲ್ಲ. ನಮಗೆ ಗೌರವ
ಕೊಡುವವರಿಗೆ ನಾವೂ ಗೌರವ ಕೊಡುತ್ತೇವೆ. ತಿರುಗಿಬೀಳುವುದೂ ಗೊತ್ತಿದೆ. ಜನತೆ ಕೊಟ್ಟಿರುವ ತೀರ್ಮಾನವನ್ನು ಒಪ್ಪಿಕೊಂಡು ನಾವು ಮೌನವಾಗಿದ್ದೇವೆ.

– ಪಿ.ಎಂ.ನರೇಂದ್ರಸ್ವಾಮಿ, ಮಾಜಿ ಶಾಸಕ

ಮಂಡ್ಯ ಮಂಜುನಾಥ್‌

Advertisement

Udayavani is now on Telegram. Click here to join our channel and stay updated with the latest news.

Next