Advertisement

ಮಕ್ಕಳ ಲಸಿಕೆಗೆ ಸಿದ್ಧತೆ ಆರಂಭ: ಗೌರವ್‌ ಗುಪ್ತಾ

11:32 AM Oct 03, 2021 | Team Udayavani |

ಬೆಂಗಳೂರು: ಮಕ್ಕಳ ಕೊರೊನಾ ಲಸಿಕೆಗೆ ಅನುಮತಿ ಸಿಕ್ಕಕೂಡಲೇ ಬಿಬಿಎಂಪಿ ವ್ಯಾಪ್ತಿಯಲ್ಲಿ ಅಗತ್ಯ ಸಿದ್ಧತೆ ಮಾಡಲಾಗುತ್ತಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತಾ ಹೇಳಿದರು.

Advertisement

ಎಂ.ಜಿ.ರಸ್ತೆಯ ನಡೆದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಗಾಂಧೀಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಕ್ಕಳಿಗೆ ವ್ಯಾಕ್ಸಿನ್‌ ನೀಡುವ ಸಂಬಂಧ ಕೇಂದ್ರ ಸರ್ಕಾರದ ಮಟ್ಟದಲ್ಲಿ ತಾತ್ವಿಕ ಅನುಮೋದನೆ ಸಿಕ್ಕಿದೆ. ಆದರೆ, ರಾಜ್ಯ ಸರ್ಕಾರದಿಂದ ಯಾವುದೇ ಸ್ಪಷ್ಟ ಆದೇಶ ಬಂದಿಲ್ಲ. ಆದರೂ, ಮಕ್ಕಳಿಗೆ ಲಸಿಕೆ ನೀಡುವ ಸಂಬಂಧ ಅಗತ್ಯ ಸಿದ್ಧತೆ ಮಾಡಲಾಗುತ್ತಿದೆ ಎಂದರು.

ಪಾಲಿಕೆ ವ್ಯಾಪ್ತಿಯಯಲ್ಲಿ 18 ವರ್ಷದ ಮೇಲ್ಪಟ್ಟವರ ಲಸಿಕೆ ಅಭಿಯಾನ ವೇಗವಾಗಿ ನಡೆಯುತ್ತಿದ್ದು, ಶೇ.100 ರಷ್ಟು ಗುರಿತಲುಪಲು ಅಗತ್ಯ ಯೋಜನೆ ಗಳನ್ನು ಸಿದ್ಧಪಡಿಸಲಾಗಿದೆ. ಇನ್ನು ಮಕ್ಕಳ ಲಸಿಕೆ ದಾಸ್ತಾನಿಗೆ ವ್ಯವಸ್ಥೆ ಇದೆ. ಲಸಿಕೆ ಸಬರಾಜು, ಪ್ರಮಾಣ, ಎಲ್ಲೆಲ್ಲಿ ಲಸಿಕೆ ನೀಡಬೇಕು ಇತ್ಯಾದಿ ವಿಚಾರಗಳ ಬಗ್ಗೆ ಸರ್ಕಾರದಿಂದ ಮಾರ್ಗಸೂಚಿ ಬರಲಿದೆ.

ಮೊದಲ ಹಂತದಲ್ಲಿ 12-18 ವಯೋಮಾನದ ಮಕ್ಕಳಿಗಳಿಗೆ ಲಸಿಕೆ ನೀಡಲು ಚಿಂತಿಸಲಾಗಿದೆ. ಈ ಸಂಬಂಧ ಯಾವುದೇ ಸರ್ವೆ ಮಾಡಿಲ್ಲ. ಶಿಬಿರಗಳು, ಆರೋಗ್ಯ ಕೇಂದ್ರಗಳು, ಶಾಲೆಗಳು ಸೇರಿದಂತೆ ಎಲ್ಲಿ ಲಸಿಕೆ ನೀಡಬೇಕು ಎಂಬುದರ ಬಗ್ಗೆ ಸರ್ಕಾರದ ಮಾರ್ಗ ಸೂಚಿಗೆ ಎದುರು ನೋಡುತ್ತಿದ್ದೇವೆ. ಈ ಹಿಂದೆ ಎನ್‌ಜಿಒಗಳು, ಸಂಘ-ಸಂಸ್ಥೆಗಳು, ನಿವಾಸಿಗಳ ಕಲ್ಯಾಣ ಸಂಘಗಳು ಸೇರಿದಂತೆ ಹಲವು ಸಂಘ ಸಂಸ್ಥೆಗಳ ಸಹಯೋಗದಲ್ಲಿ ದಿನಕ್ಕೆ ಎರಡು ಲಕ್ಷ ಡೋಸ್‌ ಲಸಿಕೆ ಯಶಸ್ವಿಯಾಗಿ ನೀಡಲಾಗಿದೆ.

ಮಕ್ಕಳಿಗೂ ಲಸಿಕೆ ನೀಡಲು ಈ ಜಾಲವನ್ನು ಬಳಸಿಕೊಳ್ಳುವುದಾಗಿ ಹೇಳಿದರು.

Advertisement

ಆತಂಕ ಬೇಡ: ಎರಡು ಡೋಸ್‌ ಲಸಿಕೆ ಪಡೆದ ವರೂ ಕೊರೊನಾ ಸೋಂಕಿಗೆ ತುತ್ತಾಗುತ್ತಿದ್ದಾರೆ. ಈ ಬಗ್ಗೆ ದಿನವೂ ಮೇಲ್ವಿಚಾರಣೆ ಮಾಡಲಾಗುತ್ತಿದೆ. ಇಸ್ರೇಲ್‌, ಯುಕೆ, ಯುಎಸ್‌ ಸೇರಿದಂತೆ ಹಲವು ದೇಶಗಳಲ್ಲಿ ಲಸಿಕೆ ಪಡೆದವರಲ್ಲೂ (ಬ್ರೇಕ್‌ಥ್ರೂ ಇನ್ಪೆಕ್ಷನ್) ಸಾಕಷ್ಟು ಸೋಂಕು ಮಂದಿಗೆ ಕಾಣಿಸಿ ಕೊಂಡಿದೆ.

ಎರಡು ಡೋಸ್‌ ಲಸಿಕೆ ಪಡೆದ ಬಳಿಕವೂ ಸೋಂಕಿಗೆ ತುತ್ತಾದಲ್ಲಿ ಆರೋಗ್ಯದಲ್ಲಿ ಹೆಚ್ಚಿನ ಏರುಪೇರುಗಳು ಕಾಣಿಸಿಕೊಳ್ಳುವುದಿಲ್ಲ. ಆಸ್ಪತ್ರೆ, ಐಸಿಯು ಬೆಡ್‌ ಅಗತ್ಯವಿರುವುದಿಲ್ಲ. ಸದ್ಯ ಲಸಿಕೆ ಎರಡೂ ಡೋಸ್‌ ಪೂರ್ಣಗೊಂಡವರಲ್ಲಿ ಆಸ್ಪತ್ರೆ ದಾಖಲಾತಿ ಕಡಿಮೆ ಇದೆ ಎಂದು ಮಾಹಿತಿ ನೀಡಿದರು. ಇನ್ನು ಕೊರೊನಾ ಸೋಂಕು ಮುಂಬರುವ ದಸರಾ, ದೀಪಾವಳಿಗೆ ಸರ್ಕಾರದಿಂದ ಪ್ರತ್ಯೇಕ ಮಾರ್ಗಸೂಚಿ ಬರುವ ಸಾಧ್ಯತೆಯಿದೆ ಎಂದರು.

ತ್ಯಾಜ್ಯ ವಿಲೇವಾರಿ ಸಮಸ್ಯೆಯಿಲ್ಲ

ಕೆಲ ಕಡೆ ಅವೈಜ್ಞಾನಿಕವಾಗಿ ತ್ಯಾಜ್ಯ ವಿಲೇವಾರಿ, ಕೆಲ ಶಾಸಕರು ಅನುದಾನಕ್ಕೆ ಬೇಡಿಕೆ ಇರಿಸುವ ಬಗ್ಗೆ ಪ್ರತಿಕ್ರಿಯಿಸಿದ ಆಯುಕ್ತರು, ತ್ಯಾಜ್ಯ ವಿಲೇವಾರಿ ಸಂಬಂಧ ಅನುದಾನಕ್ಕೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ.

ಶಾಸಕರಿಗೆ ಅನುದಾನ ನೀಡುವ ಬಗ್ಗೆ ಸರ್ಕಾರ ತೀರ್ಮಾನಿಸಲಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ತ್ಯಾಜ್ಯವಿಲೇವಾರಿ ಬಗ್ಗೆ ಸದ್ಯಕ್ಕೆ ಸಮಸ್ಯೆಯಿಲ್ಲ. ತ್ಯಾಜ್ಯ ಸಂಸ್ಕರಣಾ ಘಟಕಗಳಲ್ಲಿ ಸಂಸ್ಕರಿಸಿ ಬಳಿಕ ವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗುತ್ತಿದೆ.

ವಲಯ ಹಾಗೂ ವಾರ್ಡ್‌ ಮಟ್ಟದ ಅಧಿಕಾರಿಗಳಿಗೆ ತ್ಯಾಜ್ಯವಿಲೇವಾರಿ ಜವಾಬ್ದಾರಿ ನೀಡಲಾಗಿದೆ. ತ್ಯಾಜ್ಯ ವಿಲೇವಾರಿಗೆ ಪ್ರತಿ ಮೂರು ವರ್ಷಕ್ಕೊಮ್ಮೆ ಹೊಸ ಜಾಗ ಗುರುತಿಸಲಾಗುತ್ತಿದೆ. ಯಾವುದೇ ಸ್ಥಳ ಭರ್ತಿಯಾಗುವ ಮುನ್ನ ಹೊಸ ಜಾಗ ಗುರುತಿಸಲಾಗುತ್ತಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next