Advertisement

ಒಂದು ಟಿವಿಯ ಕಥೆ; ‘ದೂರದರ್ಶನ’ ಮೇಲೆ ಹೊಸಬರ ನಿರೀಕ್ಷೆ

04:26 PM Feb 27, 2023 | Team Udayavani |

ಕನ್ನಡ ಚಿತ್ರರಂಗಕ್ಕೆ ಬರುತ್ತಿರುವ ಹೊಸಬರು ವಿಭಿನ್ನವಾಗಿ ಯೋಚಿಸುತ್ತಾ, ಹೊಸ ಬಗೆಯ ಕಥೆಗಳೊಂದಿಗೆ ಸಿನಿಮಾ ಮಾಡುತ್ತಿದ್ದಾರೆ. ಈ ಮೂಲಕ ರೆಗ್ಯುಲರ್‌ ಶೈಲಿಯ ಸಿನಿಮಾಗಳ ಜೊತೆ ಆಫ್ಬೀಟ್‌ ಜಾನರ್‌ನ ಸಿನಿಮಾಗಳು ಕೂಡಾ ಈಗ ಕನ್ನಡ ಚಿತ್ರರಂಗದಲ್ಲಿ ಗಮನ ಸೆಳೆಯುತ್ತಿದೆ. ಸದ್ಯ ಹೀಗೆ ಗಮನ ಸೆಳೆಯುತ್ತಿರುವ ಚಿತ್ರವೆಂದರೆ “ದೂರದರ್ಶನ’.

Advertisement

ಹೀಗೊಂದು ಸಿನಿಮಾ ತಯಾರಾಗಿದ್ದು, ಈಗ ಬಿಡುಗಡೆಯ ಹಂತಕ್ಕೆ ಬಂದಿದೆ. ಚಿತ್ರ ಮಾರ್ಚ್‌ 03ರಂದು ತೆರೆಕಾಣುತ್ತಿದೆ. ಚಿತ್ರವನ್ನು ರಾಜೇಶ್‌ ಭಟ್‌ ನಿರ್ಮಿಸಿದ್ದು, ಸುಕೇಶ್‌ ಶೆಟ್ಟಿ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಪೃಥ್ವಿ ಅಂಬರ್‌ ನಾಯಕ. ಈಗಾಗಲೇ ಬಿಡುಗಡೆಯಾಗಿರುವ ಟ್ರೇಲರ್‌ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕ ಸುಕೇಶ್‌ ಶೆಟ್ಟಿ, 1980ರ ಕಾಲಘಟ್ಟದಲ್ಲಿ ನಡೆಯುವ ಸಬ್ಜೆಕ್ಟ್ ಇದು. ನಾವು ನಮ್ಮ ಹಿರಿಯರ ಜೊತೆ ಅನುಭವಿಸಿ, ಕಳೆದು ಹೋದ, ನಾವು ನೋಡಿರುವ, ಕೇಳಿರುವ ಮಾಹಿತಿ ಕಲೆ ಹಾಕಿ ಕಥೆಯನ್ನು ಕಟ್ಟಿಕೊಡಲಾಗಿದೆ. ಒಂದು ಟಿವಿ ಸುತ್ತ ಕಥೆ ನಡೆಯುತ್ತದೆ. ಪೃಥ್ವಿ, ಉಗ್ರಂ ಮಂಜು ಹೀಗೆ ಪ್ರತಿಯೊಬ್ಬರನ್ನು ನೀವು ಬೇರೆ ರೀತಿ ನೋಡಬಹುದು. 1980 ಕಾಲಘಟ್ಟ ಅಂದ್ರೆ ರೆಟ್ರೋ ಅಂದುಕೊಳ್ತಾರೆ. ನಾವು ರಿಯಲಿಸ್ಟಿಕ್‌ ಆಗಿ, ಅದೇ ರೀತಿ ಮ್ಯಾನರಿಸಂನಲ್ಲಿ ಕಟ್ಟಿಕೊಡಲಾ ಗಿದೆ. ಟಿವಿ ಬರುವ ಮೊದಲು ಜನ ನೋಡುವ ರೀತಿ ಹಾಗೂ ಆ ಮನೆಗೆ ಟಿವಿ ಬಂದ ನಂತರ ಬದಲಾಗುವ ದೃಷ್ಟಿಕೋನವನ್ನು ಇಲ್ಲಿ ಹೇಳಲಾಗಿದೆ. ಹಿರೇಕೈಸರ ಎಂಬ ಕಾಲ್ಪನಿಕ ಊರಲ್ಲಿ ನಡೆಯುವ ಕಥೆ. ಪಶ್ಚಿಮ ಘಟ್ಟ ಹಾಗೂ ಕರಾವಳಿ ಮಧ್ಯೆ ಇರುವ ಊರಿದು. ಸುಂದರವಾದ ಊರದು. ಅಲ್ಲಿ ಇದ್ದ ಮನರಂಜನಾ ಅಂಶಗಳೇ ಬೇರೆ. ಆದರೆ, ಒಮ್ಮೆಲೇ ಆ ಊರಿಗೆ ಟಿವಿ ಬಂದಾಗ ಏನಾಗುತ್ತದೆ. ಟಿವಿ ಬರೋದು ಕೂಡಾ ಒಂದು ರೋಚಕ ಕಥೆ. ಮನು ಮತ್ತು ಕಿಟ್ಟಿ ಸ್ನೇಹ, ಜಿದ್ದು, ಪ್ರೇಮ… ಹೀಗೆ ಬೇರೆ ಬೇರೆ ಅಂಶಗಳೊಂದಿಗೆ ಚಿತ್ರ ಸಾಗುತ್ತದೆ. ಇಡೀ ಸಿನಿಮಾವನ್ನು ಮಜವಾಗಿ ಕಟ್ಟಿಕೊಟ್ಟಿದ್ದೇವೆ’ ಎಂದು ಚಿತ್ರದ ಬಗ್ಗೆ ಹೇಳುತ್ತಾರೆ.

“ಕಥೆ ಇಷ್ಟವಾಯಿತು. ನಾವು ಅದೇ ಕಾಲಘಟ್ಟದಿಂದ ಬಂದವರಾದ್ದರಿಂದ ಸಿನಿಮಾ ನನಗೆ ಬೇಗನೇ ಕನೆಕ್ಟ್ ಆಯಿತು. ಒಳ್ಳೆಯ ಕಥೆ, ಕಂಟೆಂಟ್‌ ಎಂದು ಸಿನಿಮಾ ಮಾಡಲು ಮುಂದಾದೆವು. ಸಿನಿಮಾವನ್ನು ನಾವು 80ರ ಕಾಲಘಟ್ಟದಲ್ಲಿ ಕಟ್ಟಿಕೊಟ್ಟಿದ್ದೇವೆ. ಒಂದು ಟಿವಿ ಹೇಗೆ ಜನರ ಅಭಿಪ್ರಾಯವನ್ನು ಬದಲಾಯಿಸುತ್ತೇ, ಒಂದು ಚಿಕ್ಕ ಹಳ್ಳಿಗೆ ಟಿವಿ ಬಂದಾಗ ಅದರಿಂದ ಆಗುವ ಅನಾಹುತಗಳು, ಘಟನೆಗಳನ್ನಿಟ್ಟುಕೊಂಡು ಈ ಸಿನಿಮಾ ಮಾಡಲಾಗಿದೆ. ಇದರ ಜೊತೆ ಜೊತೆಗೆ ಪ್ರೀತಿ, ಪ್ರೇಮ, ಸರಸ, ಫೈಟ್‌ ಎಲ್ಲವೂ ಇದೆ. ಈ ಚಿತ್ರ ಜನರಿಗೆ ಇಷ್ಟ ಆಗುತ್ತೆ ಎಂಬ ಕಾರಣಕ್ಕೆ ನಾನು ಈ ಸಿನಿಮಾ ಮಾಡಲು ಮುಂದೆ ಬಂದೆ. ಜೊತೆಗೆ ಸುಕೇಶ್‌ ಶೆಟ್ಟಿ ಅವರ ಮೇಲಿನ ನಂಬಿಕೆ ಕೂಡಾ ಈ ಸಿನಿಮಾ ಮಾಡಲು ಕಾರಣ’ ಎನ್ನುವುದು ನಿರ್ಮಾಪಕ ರಾಜೇಶ್‌ ಭಟ್‌ ಮಾತು.

Advertisement

Udayavani is now on Telegram. Click here to join our channel and stay updated with the latest news.

Next