Advertisement

ಪಡಿತರ ಬಳಕೆದಾರರಿಗಾಗಿ ಮನೆ ಮನೆ ಸಮೀಕ್ಷೆ!

09:18 PM Jul 26, 2023 | Team Udayavani |

ಬೆಂಗಳೂರು: ಆಹಾರ ಧಾನ್ಯ ಪಡೆಯದ ಪಡಿತರ ಚೀಟಿ ಬಳಕೆದಾರರ ಬಗ್ಗೆ ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರಕಾರ, ಇವರ ಬಗ್ಗೆ ಮನೆ ಮನೆ ಸಮೀಕ್ಷೆ ನಡೆಸಲು ಚಿಂತನೆ ನಡೆಸಿದೆ.

Advertisement

ಬುಧವಾರ ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್‌.ಮುನಿಯಪ್ಪ ಅವರು ಈ ಮಾಹಿತಿ ನೀಡಿದ್ದಾರೆ. ಮಾರ್ಚ್‌, ಎಪ್ರಿಲ್‌ ಹಾಗೂ ಮೇ ತಿಂಗಳಲ್ಲಿ ಆಹಾರ ಧಾನ್ಯವನ್ನೇ ಪಡೆಯದ 5.32 ಲಕ್ಷ ಪಡಿತರ ಚೀಟಿಗಳಿದ್ದು, ಅನೇಕರು ಆಹಾರ ಧಾನ್ಯ ಪಡೆಯುವುದಕ್ಕಿಂತ ಹೆಚ್ಚು ವೈದ್ಯಕೀಯ ಬಳಕೆಗಷ್ಟೇ ಉಪಯೋಗಿಸುತ್ತಿದ್ದಾರೆ ಎಂಬುದು ಕಂಡು ಬಂದಿದೆ. ಹೀಗಾಗಿ ಪಡಿತರ ಧಾನ್ಯಗಳ ಅಗತ್ಯ ಎಷ್ಟು ಜನರಿಗಿದೆ? ಆರೋಗ್ಯ ಸೇವೆಗಾಗಿ ಪಡಿತರ ಚೀಟಿಯನ್ನು ಬಳಸುತ್ತಿರುವವ ಸಂಖ್ಯೆ ಎಷ್ಟಿದೆ ಎಂಬುದನ್ನು ತಿಳಿದುಕೊಳ್ಳಲು ಸದ್ಯದಲ್ಲೇ ಮನೆಮನೆ ಸಮೀಕ್ಷೆ ನಡೆಸಲಾಗುವುದು ಎಂದು ಅವರು ಹೇಳಿದರು.

509 ಕೋಟಿ ರೂ. ಸಂದಾಯ

ಸದ್ಯ ಒಟ್ಟು 87,96,409 ಪಡಿತರ ಚೀಟಿಯ 3,10,86,328 ಫ‌ಲಾನುಭವಿಗಳ ಖಾತೆಗೆ 509.95 ಕೋಟಿ ರೂ. ಪಾವತಿ ಮಾಡಿದ್ದು, ಶೇ.75ರಷ್ಟು ಫ‌ಲಾನುಭವಿಗಳಿಗೆ ಹಣ ಸಂದಾಯ ಆಗಿದೆ. ಶಿವಮೊಗ್ಗದ 3.08 ಲಕ್ಷ ಕಾರ್ಡ್‌ಗಳ 10.83 ಲಕ್ಷ ಫ‌ಲಾನುಭವಿಗಳಿಗೆ 17.47 ಕೋಟಿ ರೂ.ಗಳನ್ನು 2 ದಿನಗಳಲ್ಲಿ ಹಾಗೂ ಉಡುಪಿ, ವಿಜಯಪುರ ಜಿಲ್ಲೆಗಳ 3.84 ಲಕ್ಷ ಪಡಿತರ ಚೀಟಿಗಳ 15.55 ಲಕ್ಷ ಫ‌ಲಾನುಭವಗಳಿಗೆ ಖಾತೆಗೆ 25.43 ಕೋಟಿ ರೂ.ಗಳನ್ನು ನಾಲ್ಕೈದು ದಿನದಲ್ಲಿ ಜಮೆ ಮಾಡಲಾಗುತ್ತದೆ. ಒಟ್ಟಾರೆ ಇನ್ನೊಂದು ವಾರ ಅಥವಾ 10 ದಿನಗಳಲ್ಲಿ ಜುಲೈ ತಿಂಗಳ ಪಡಿತರ ಧಾನ್ಯದ ಬದಲು 170 ರೂ. ಕೊಡುವ ಕಾರ್ಯಕ್ರಮ ಎಲ್ಲರಿಗೂ ತಲುಪಲಿದೆ ಎಂದು ತಿಳಿಸಿದರು.

– ಒಟ್ಟು ಪಡಿತರ ಚೀಟಿ- 1,28,17,337

Advertisement

– ಅರ್ಹ ಪಡಿತರ ಚೀಟಿ- 97,27,165

– ಕುಟುಂಬದ ಮಾಲಕರನ್ನು ನಿರ್ಧರಿಸದವು- 53,547

– ಬಹು ಮಾಲಕತ್ವ ಹೊಂದಿರುವಂಥವು- 4,845

– ಆಧಾರ್‌ ವಿಲೀನಗೊಳ್ಳದ್ದು – 53,349

– 3 ತಿಂಗಳುಗಳಿಂದ ಆಹಾರ ಧಾನ್ಯ ಪಡೆಯದ್ದು- 5,32,349

– 1-3 ಸದಸ್ಯರಿರುವ ಅಂತ್ಯೋದಯ ಅನ್ನ ಕಾರ್ಡ್‌- 3,40,425

– ಬ್ಯಾಂಕ್‌ ಖಾತೆ, ಆಧಾರ್‌ ವಿಲೀನಗೊಳ್ಳದ ಕಾರ್ಡ್‌ಗಳು- 21,69,650

– ನಕಲಿ ಆಧಾರ್‌ ಸಂಖ್ಯೆ ವಿಲೀನಗೊಂಡ ಕಾರ್ಡ್‌ಗಳು- 14

– ಅನರ್ಹತೆಗೆ ಅರ್ಹವಿರುವ ಪಡಿತರ ಚೀಟಿಗಳು- 30,90,172

– ಹೊಸದಾಗಿ ಬಂದಿರುವ ಅರ್ಜಿಗಳ ಸಂಖ್ಯೆ-3 ಲಕ್ಷ

ಆಗಸ್ಟ್‌ನಲ್ಲೂ ಖಾತೆಗೆ ಹಣ

ಅನ್ನಭಾಗ್ಯ ಯೋಜನೆಗೆ ಆಗಸ್ಟ್‌ ತಿಂಗಳಲ್ಲೂ ಅಕ್ಕಿ ಸಿಗುವುದು ಅನುಮಾನವಾಗಿರುವುದರಿಂದ ಅಕ್ಕಿಯ ಬದಲು ಹಣವನ್ನೇ ಕೊಡಲು ಸರಕಾರ ನಿರ್ಧರಿಸಿದೆ ಎಂದು ಮುನಿಯಪ್ಪ ತಿಳಿಸಿದ್ದಾರೆ. ಹೆಚ್ಚುವರಿಯಾಗಿ ಬೇಕಿರುವ 2.40 ಲಕ್ಷ ಮೆಟ್ರಿಕ್‌ ಟನ್‌ ಅಕ್ಕಿಯನ್ನು ಹೊಂದಿಸುವ ಬಗ್ಗೆ ಸರಕಾರ ಗಂಭೀರ ಚಿಂತನೆ ನಡೆಸಿದೆ. ಒಂದು ವೇಳೆ ಆಗಸ್ಟ್‌ ವೇಳೆಗೆ ಹೆಚ್ಚುವರಿ ಅಕ್ಕಿ ಸಿಗದಿದ್ದರೆ, ಈಗಿರುವ ವ್ಯವಸ್ಥೆಯಂತೆ 5 ಕೆ.ಜಿ. ಹಾಗೂ ಉಳಿದ 5 ಕೆ.ಜಿ. ಅಕ್ಕಿಯ ಬದಲು ನಗದು ನೀಡುವುದನ್ನೇ ಮುಂದುವರಿಸಲಿದೆ. ಹೆಚ್ಚುವರಿ 2.40 ಲಕ್ಷ ಟನ್‌ ಅಕ್ಕಿಗಾಗಿ ಟೆಂಡರ್‌ ಪ್ರಕ್ರಿಯೆ ಆರಂಭಿಸುತ್ತೇವೆ. ಸ್ಥಳೀಯವಾಗಿ ಆಹಾರಧಾನ್ಯ ಖರೀದಿಸುವ ಬಗ್ಗೆ ರೈತ ಸಂಘಟನೆ, ಅಕ್ಕಿ ಗಿರಣಿ ಮಾಲಕರ ಜತೆಗೂ ಸಮಾಲೋಚನೆ ಮಾಡುತ್ತೇವೆ. ಅದರ ಇನ್ನೊಂದು ತಿಂಗಳು ಕಷ್ಟ ಆಗಬಹುದು ಎಂದರು.

ರಾಜ್ಯದಲ್ಲಿ 1.28 ಕೋಟಿ ಪಡಿತರ ಚೀಟಿಗಳಿದ್ದು, ಅವುಗಳ ಪೈಕಿ 97.27 ಲಕ್ಷ ರೇಷನ್‌ ಕಾರ್ಡ್‌ ಮಾತ್ರ ಅರ್ಹವಾಗಿವೆ. ಹೊಸದಾಗಿ 3 ಲಕ್ಷ ಅರ್ಜಿಗಳು ಬಂದಿದ್ದು, ಪರಿಶೀಲಿಸಿ ಕ್ರಮ ತೆಗೆದುಕೊಳ್ಳುತ್ತೇವೆ.

-ಕೆ.ಎಚ್‌. ಮುನಿಯಪ್ಪ, ಆಹಾರ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next