ಉಡುಪಿ: ಅಯೋಧ್ಯಾ ಶ್ರೀರಾಮ ಮಂದಿರ ತೀರ್ಥಕ್ಷೇತ್ರ ಟ್ರಸ್ಟ್ ಜ. 22ರಂದು ಅಯೋಧ್ಯೆಯಲ್ಲಿ ನಡೆಯಲಿರುವ ಶ್ರೀರಾಮ ಜನ್ಮಭೂಮಿ ಟ್ರಸ್ಟ್‌ನ ಪೂರ್ವಭಾವಿಯಾಗಿ ದೇಶಾದ್ಯಂತ ವಿಶ್ವಹಿಂದೂ ಪರಿಷತ್ ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿವಿಧ ಪರಿವಾರ ಸಂಘಟನೆಗಳು ಭಾರತದಲ್ಲಿರುವ ಸಮಸ್ತ ಹಿಂದೂ ಮನೆಗಳಿಗೆ ಕರಪತ್ರ, ಅಯೋಧ್ಯೆ ರಾಮಮಂದಿರದ ಭಾವಚಿತ್ರ ಹಾಗೂ ರಾಮನ ಪವಿತ್ರ ಮಂತ್ರಾಕ್ಷತೆಯನ್ನು ಮನೆಮನೆಗಳಿಗೆ ಹಂಚುವ ಅಭಿಯಾನಕ್ಕೆ ಸೋಮವಾರ ಚಾಲನೆ ಲಭಿಸಿದೆ.
ಮಂತ್ರಾಕ್ಷತೆ ಅಭಿಯಾನದ ಉಡುಪಿನಗರ ಘಟಕವು ನಗರವನ್ನು ಕೇಂದ್ರವಾಗಿರಿಸಿ ಕೊಂಡು 41 ಕೇಂದ್ರಗಳಲ್ಲಿ ಇದನ್ನು ಆಯೋಜಿ ಸಲಾಗಿದ್ದು, ಉಡುಪಿಯ ಕಾಣಿಯೂರು ಮಠದಲ್ಲಿ ಸೋಮವಾರ ಅಯೋಧ್ಯೆ ರಾಮ ಮಂದಿರದ ಮಂತ್ರಾಕ್ಷತೆಯನ್ನು ಮನೆಮನೆಗೆ ವಿತರಿಸುವ ಕಾರ್ಯಕ್ರಮಕ್ಕೆ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು ಚಾಲನೆ ನೀಡಿದರು.
ಕೋಟ್ಯಂತರ ಹಿಂದೂಗಳ ಕನಸು ನನಸಾಗುವ ಸಮಯ ಸನ್ನಿಹಿತವಾಗಿದೆ. ಕೋಟ್ಯಂತರ ಭಕ್ತರು ಈಗಾಗಲೇ ನಾನಾ ರೀತಿಯ ಕೊಡುಗೆ ನೀಡಿದ್ದಾರೆ. ರಾಮಮಂದಿರ ನಿರ್ಮಾಣಕ್ಕೆ ಕಾಣಿಕೆ ನೀಡಿರುವವರ ಮನೆಬಾಗಿಲಿಗೆ ಪ್ರಸಾದ ತಲುಪಬೇಕು. ಈ ನಿಟ್ಟಿನಲ್ಲಿ ಟ್ರಸ್ಟ್‌ನವರು ಪ್ರತಿಯೊಬ್ಬರ ಮನೆಗೂ ರಾಮದೇವರ ಪ್ರಸಾದವನ್ನು ತಲುಪಿಸುವ ಹಿತದೃಷ್ಟಿಯಿಂದ ಪ್ರತೀ ಊರು, ಗ್ರಾಮಕ್ಕೆ ಮಂತ್ರಾಕ್ಷತೆ, ಭಾವಚಿತ್ರ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ. 35 ವಾರ್ಡ್ ಸಹಿತ 6 ಗ್ರಾ.ಪಂ.ವ್ಯಾಪ್ತಿಯ ಸುಮಾರು 45 ಸಾವಿರ ಮನೆಗಳಿಗೆ ಇದನ್ನು ನೀಡಲು ಉದ್ದೇಶಿಸಲಾಗಿದೆ. ಮಂತ್ರಾಕ್ಷತೆ ರೂಪದಲ್ಲಿ ದೇವರೇ ಮನೆಗೆ ಬರಲಿದ್ದಾರೆ. ಅದನ್ನು ಜಾಗರೂಕವಾಗಿರಿಸಿ ಪೂಜೆ ಮಾಡುವ ಪ್ರತಿಜ್ಞೆ ಮಾಡಬೇಕು. ಜ. 22ರಂದು ಪ್ರತೀ ಗ್ರಾಮದಲ್ಲಿ ಹರೇರಾಮ್, ಭಜನೆ ಹಾಡುಗಳನ್ನು ಹಾಡಬೇಕು. ಸಂಜೆ 5 ಗಂಟೆಗೆ ಜ್ಯೋತಿ ಬೆಳಗಿ ಉತ್ತರ ದಿಕ್ಕಿಗೆ ಆರತಿ ಬೆಳಗುವ ಮೂಲಕ ಇದನ್ನು ಅವಿಸ್ಮರಣೀಯ ದಿನವನ್ನಾಗಿಸಬೇಕು ಎಂದರು.
ನಗರಸಂಘ ಚಾಲಕ ಮಟ್ಟು ಲಕ್ಷ್ಮೀನಾರಾಯಣ ರಾವ್, ಮಂಗಳೂರು ವಿಭಾಗ ಕಾರ್ಯವಾಹಕ ವಾದಿರಾಜ ಗೋಪಾಡಿ, ಹಿರಿಯ ಪ್ರಚಾರಕ ದಾ.ಮ. ರವೀಂದ್ರ, ಸಂಘದ ಕಾರ್ಯಕರ್ತ ಗಣೇಶ್ ಶೆಣೈ, ಮಂತ್ರಾಕ್ಷತೆ ಅಭಿಯಾನದ ನಗರ ಸಂಚಾಲಕ್ ಮನೋಜ್ ಮಲ್ಪೆ, ನಗರ ಸಂಯೋಜಕ ಶಶಾಂಕ್ ಶಿವತ್ತಾಯ, ಸಹಸಂಚಾಲಕ ರಾಕೇಶ್ ಮಲ್ಪೆ, ಸ್ವಯಂ ಸೇವಕರಾದ ಗೀತಾ ರವಿ ಶೇಟ್, ಶ್ಯಾಂ ಪ್ರಸಾದ್ ಕುಡ್ವ, ಶೈಲೇಂದ್ರ ಶೆಟ್ಟಿ, ಭಾರತೀ ಚಂದ್ರಶೇಖರ್, ರಘುರಾಮ ಆಚಾರ್ಯ, ಹರೀಶ್ ಬೈಲಕೆರೆ, ಅಂಡಾರು ದೇವಿಪ್ರಸಾದ್ ಶೆಟ್ಟಿ, ಮಂಜುನಾಥ ಹೆಬ್ಟಾರ್ ಉಪಸ್ಥಿತರಿದ್ದರು.
ಪವಿತ್ರ ಅಕ್ಷತೆಯನ್ನು ಮನೆ-ಮನೆಗೆ ಮುಟ್ಟಿಸುವ ಅಭಿಯಾನ ಜ.15ರವರೆಗೆ ನಡೆಯಲಿದೆ. ಜ.7 ರಂದು ಮಹಾಭಿಯಾನ ನಡೆಯಲಿದೆ ಎಂದು ಬಜರಂಗದಳದ ಸುನಿಲ್ ಕೆ.ಆರ್. ಮಾಹಿತಿ ನೀಡಿದ್ದಾರೆ.
ಪ್ರಧಾನಿಗೆ ಉದ್ಘಾಟಿಸುವ ಹಕ್ಕಿದೆ
ರಾಮಮಂದಿರವನ್ನು ಪ್ರಧಾನಿ ಉದ್ಘಾಟಿಸುವುದಕ್ಕೆ ಕೆಲವರು ವಿರೋಧ ವ್ಯಕ್ತಪಡಿಸು ತ್ತಿರುವ ಬಗ್ಗೆ ಮಾತನಾಡಿದ ಶ್ರೀಪಾದರು, ಮಂದಿರ ನಿರ್ಮಾಣಕ್ಕೆ ಪ್ರಯತ್ನಪಟ್ಟವರಲ್ಲಿ ಪ್ರಧಾನಿ ನರೇಂದ್ರ ಮೋದಿಯೂ ಒಬ್ಬರು. ಅವರಿಗೆ ಉದ್ಘಾಟಿಸುವ ಹಕ್ಕಿದೆ ಎಂದರು.
ಮಂಗಳೂರು: ಶ್ರೀರಾಮ ಮಂದಿರ ಲೋಕಾರ್ಪಣೆಯ ಹಿನ್ನೆಲೆಯಲ್ಲಿ ಅಯೋಧ್ಯೆಯಿಂದ ಬಂದಿರುವ ಪವಿತ್ರ ಮಂತ್ರಾಕ್ಷತೆಯನ್ನು ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ ಮನೆ ಮನೆಗೆ ವಿತರಿಸುವ ಅಭಿಯಾನ ಸೋಮವಾರ ಆರಂಭಗೊಂಡಿದ್ದು ಮೊದಲ ದಿನ ದಕ್ಷಿಣ ಕನ್ನಡ ಜಿಲ್ಲೆಯ 5 ಸಾವಿರಕ್ಕೂ ಅಧಿಕ ಮನೆಗಳಿಗೆ ವಿತರಿಸಲಾಯಿತು.
ಮರೋಳಿ ಶ್ರೀ ಸೂರ್ಯನಾರಾಯಣ ದೇವಸ್ಥಾನದಲ್ಲಿ ಪೂಜೆಯ ಬಳಿಕ ಮಂಗಳೂರು ನಗರದಲ್ಲಿ ಮಂತ್ರಾಕ್ಷತೆ ವಿತರಣೆ ಆರಂಭಿಸಲಾಯಿತು. ಶ್ರೀರಾಮ ದೇವರ ಚಿತ್ರ ಮತ್ತು ಆಮಂತ್ರಣ ಮಂದಿರ ಲೋಕಾರ್ಪಣೆಯ ಪತ್ರಿಕೆಯನ್ನೂ ಜತೆಗೆ ನೀಡಲಾಗುತ್ತಿದೆ. ಜ. 15ರ ವರೆಗೆ ಅಭಿಯಾನ ನಡೆಯಲಿದೆ ಎಂದು ವಿಹಿಂಪ ಪ್ರಮುಖರು ತಿಳಿಸಿದ್ದಾರೆ.