Advertisement

ಮನೆ ಬಾಗಿಲಿಗೇ ಊಟ : ಹಣಕಾಸಿನ ಕಾರಣಕ್ಕೆ ಸೊರಗದಿರಲಿ ಯೋಜನೆ

01:33 AM May 18, 2021 | Team Udayavani |

ಯಾವುದೇ ಸಂಕಷ್ಟಕ್ಕೆ ಸಿಲುಕಿ ದುಡಿಯುವ ಕೈಗಳಿಗೆ ಕೆಲಸವಿಲ್ಲದೆ ಆದಾಯ ಕಳೆದುಕೊಂಡ ಬಡವರು ಮತ್ತು ನಿರ್ಗತಿಕರ ಹಸಿವು ನೀಗಿಸುವುದು ಸರಕಾರದ ಶಾಸನಬದ್ಧ ಕರ್ತವ್ಯ ಮತ್ತು ನೈತಿಕ ಹೊಣೆಗಾರಿಕೆಯಾಗಿದೆ. ಅದರಂತೆ ಕೊರೊನಾ ಲಾಕ್‌ಡೌನ್‌ ಅವಧಿ ಯಲ್ಲಿ ನಗರ ಪ್ರದೇಶಗಳ ದುರ್ಬಲ ವರ್ಗಗಳಿಗೆ ಇಂದಿರಾ ಕ್ಯಾಂಟೀನ್‌ ಮೂಲಕ ಉಚಿತ ಊಟ ಪೂರೈಸುವಂತೆ ಗ್ರಾಮೀಣ ಭಾಗದ ದುರ್ಬಲ ಕುಟುಂಬಗಳಿಗೆ ಅವರ ಮನೆ ಬಾಗಿಲಿಗೆ ಊಟ ತಲುಪಿಸುವ ಸರಕಾರದ ಯೋಜನೆ ಸ್ವಾಗತಾರ್ಹ.

Advertisement

ಈ ಯೋಜನೆಯ ಪರಿಣಾಮಕಾರಿಯಾಗಿ ಜಾರಿಗೊಂಡು ಅರ್ಹ ಫಲಾನುಭವಿಗಳಿಗೆ ತಲುಪಿದರೆ ಇದೊಂದು ಮಾದರಿ ಯೋಜನೆ ಆಗುವುದರಲ್ಲಿ ಅನುಮಾನವಿಲ್ಲ. ಆದರೆ ಯೋಜನೆ ಅನುಷ್ಠಾನಕ್ಕೆ ಹಣಕಾಸಿನ ಕೊರತೆಯಿದೆ ಎಂಬ ಮಾತುಗಳು ಕೇಳಿ ಬರುತ್ತವೆ. ಕೇವಲ ಹಣದ ಕಾರಣಕ್ಕೆ ಯೋಜನೆ ನಿಂತು ಹೋಗುವುದು ಅಥವಾ ವಿಳಂಬ ವಾಗುವುದು ನ್ಯಾಯೋಚಿತವಲ್ಲ. ಹಾಗಾಗಿ ಆರ್ಥಿಕ ಸಂಪನ್ಮೂಲಗಳ ಕೊರತೆಯಿಂದ ಈ ಮಹತ್ವಾಕಾಂಕ್ಷಿ ಯೋಜನೆಗೆ ಹಿನ್ನಡೆ ಆಗಬಾರದು. ಆದ್ದರಿಂದ ಆರ್ಥಿಕ ಸಂಪನ್ಮೂಲಗಳನ್ನು ಹೊಂದಿಸಿಕೊಳ್ಳುವ ಕೆಲಸ ತ್ವರಿತವಾಗಿ ಸರಕಾರ ಮಾಡಬೇಕು.

ಹಳ್ಳಿಗಳಲ್ಲಿನ ನಿರ್ಗತಿಕರು ಮತ್ತು ದುರ್ಬಲರನ್ನು ಗುರುತಿಸಿ ತಯಾರಿಸಿದ ಆಹಾರದ ಪೊಟ್ಟಣಗಳನ್ನು ಹಂಚುವ ಯೋಜನೆ ಇದಾಗಿದೆ. ಪ್ರತೀ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ 150 ಆಹಾರದ ಪ್ಯಾಕ್‌ಗಳನ್ನು ಸಿದ್ದಪಡಿಸಲಾಗುತ್ತದೆ. ಹೆಚ್ಚುವರಿ ಪ್ಯಾಕ್‌ಗಳ ಆವಶ್ಯಕತೆ ಬಿದ್ದಲ್ಲಿ ಇದಕ್ಕೆ ಬೇಕಾಗುವ ಹಣಕಾಸಿನ ವ್ಯವಸ್ಥೆಯನ್ನು ಆಯಾ ಗ್ರಾಮ ಪಂಚಾಯತ್‌ಗಳು ನಿಭಾಯಿಸಬೇಕಾಗುತ್ತದೆ. ಇದಕ್ಕಾಗಿ 15ನೇ ಹಣಕಾಸು ಆಯೋಗದ ಅನುದಾನ ಮತ್ತು ಸ್ವಂತ ಸಂಪನ್ಮೂಲಗಳಿಂದ ಭರಿಸಬೇಕು ಎಂದು ಹೇಳಲಾಗಿದೆ.

ಆದರೆ ರಾಜ್ಯದ 6 ಸಾವಿರಕ್ಕೂ ಹೆಚ್ಚು ಗ್ರಾಮ ಪಂಚಾಯತ್‌ಗಳಲ್ಲಿ ಬಹುತೇಕ ಗ್ರಾ.ಪಂ.ಗಳು ಆರ್ಥಿಕವಾಗಿ ಸಬಲ ಮತ್ತು ಸ್ವಾವಲಂಬಿಗ ಳಾಗಿಲ್ಲ ಎಂಬ ವಾಸ್ತವ ಸಂಗತಿಯನ್ನು ಸರಕಾರ ಮನಗಾಣಬೇಕು. ಗ್ರಾ.ಪಂ.ಗಳ ಮೇಲೆ ಆರ್ಥಿಕ ಹೊರೆ ಹೊರಿಸುವ ಬದಲು ಸಂಪೂರ್ಣ ವನ್ನು ವೆಚ್ಚವನ್ನು ಸರಕಾರವೇ ಭರಿಸಬೇಕು.

ನಗರ ಪ್ರದೇಶಗಳಂತೆ ಗ್ರಾಮೀಣ ಭಾಗದಲ್ಲೂ ಸ್ವಯಂ ಸೇವಾ ಸಂಸ್ಥೆಗಳು, ಸರಕಾರೇತರ ಸಂಸ್ಥೆಗಳು, ದಾನಿಗಳಿಂದ ನೆರವು ಪಡೆದು ಕೊಳ್ಳುವ ನಿಟ್ಟಿನಲ್ಲಿ ಸರಕಾರ ಯೋಚಿಸಬೇಕಿದೆ.

Advertisement

ನಗರ ಪ್ರದೇಶಗಳಿಂದ ಹಳ್ಳಿಗಳಿಗೆ ಮರು ವಲಸೆ ಆಗಿರುವುದರಿಂದ ಕೊರೊನಾ ಎರಡನೇ ಅಲೆ ಈಗ ಗ್ರಾಮೀಣ ಭಾಗಕ್ಕೆ ವ್ಯಾಪಕವಾಗಿ ಹರಡಿದೆ. ಉದ್ಯೋಗವಿಲ್ಲದೆ ಅನೇಕ ಕಾರ್ಮಿಕ ಕುಟುಂಬಗಳು ಈಗ ಹಳ್ಳಿ ಸೇರಿಕೊಂಡಿವೆ. ನರೇಗಾ ಯೋಜನೆಯಡಿ ಸೀಮಿತ ಕಾರ್ಮಿಕರಿಗೆ ಕೆಲಸ ನೀಡುತ್ತಿರುವುದರಿಂದ ಅಲ್ಲಿಯೂ ಎಲ್ಲರಿಗೂ ಕೆಲಸ ಸಿಗುತ್ತಿಲ್ಲ. ಆದ್ದರಿಂದ ಗ್ರಾಮೀಣ ಭಾಗದ ದುರ್ಬಲ ವರ್ಗಗಳ ಆಹಾರ ಭದ್ರತೆಗೆ ಈಗ ಹೆಚ್ಚಿನ ಒತ್ತು ಮತ್ತು ಆದ್ಯತೆ ಕೊಡಬೇಕಾಗಿದೆ.

ಈ ಯೋಜನೆಗೆ ಆರ್ಥಿಕ ಇಲಾಖೆಯ ಮಂಜೂರಾತಿ ಸಿಕ್ಕಿಲ್ಲ ಎಂದು ಹೇಳಲಾಗುತ್ತಿದೆ. ಜತೆಗೆ ಈ ಯೋಜನೆಯ ಬಗ್ಗೆ ರಾಜ್ಯ ಸರಕಾರ ಹೈಕೋರ್ಟ್‌ನಲ್ಲಿ ಸಲ್ಲಿಸಿರುವ ಲಿಖೀತ ಹೇಳಿಕೆಯಲ್ಲಿ ಪ್ರಸ್ತಾವಿಸಿದೆ. ಹೀಗಾಗಿ ಸರಕಾರ ಈ ಯೋಜನೆಯನ್ನು ಗಂಭೀರವಾಗಿ ಪರಿಗಣಿಸಲಿ.

Advertisement

Udayavani is now on Telegram. Click here to join our channel and stay updated with the latest news.

Next