ಹಳಿಯಾಳ: ಭಾರೀ ಪ್ರವಾಹದ ನಡುವೆಯೂ ಇಲ್ಲಿನ ದೇವಿಯ ಸಣ್ಣ ಗುಡಿಯೊಂದು ಪವಾಡ ಸದೃಶವಾಗಿ ಯಾವುದೇ ಹಾನಿಯಾಗದೆ ಸುರಕ್ಷಿತವಾಗಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಇದು ತಾಲೂಕಿನ ಕೆಸರೊಳ್ಳಿ ಗ್ರಾಮದ ನಾಕಾ ಪ್ರದೇಶದ ಸೇತುವೆಯಿಂದ 100 ಅಡಿ ದೂರದ ನದಿ ದಂಡೆ ಮೇಲಿನ ಬೃಹತ್ ಅರಳಿ ಮರದ ಬುಡದಲ್ಲಿ ಶತಮಾನಗಳಿಂದ ಡೋಣಿ ಕರೆವ್ವ ದೇವಾಲಯವಿದೆ ಎನ್ನುತ್ತಾರೆ ಗ್ರಾಮಸ್ಥರು.
ಹಳಿಯಾಳದ ಇತಿಹಾಸದಲ್ಲೇ ಭೀಕರ ಪ್ರವಾಹಕ್ಕೆ ಕೆಸರೊಳ್ಳಿ ನದಿಯಲ್ಲಿ ಉಂಟಾದ ಭಾರೀ ಜಲಪ್ರವಾಹದಿಂದ ನೂರಾರು ಜನರ ಬದುಕೇ ಕೊಚ್ಚಿಕೊಂಡು ಹೋಗಿದೆ. ಅಲ್ಲದೇ ಹತ್ತಾರು ಕುಟುಂಬಗಳು ಸರ್ವಸ್ವವನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ.
ಕೆಸರೊಳ್ಳಿ ನಾಕಾ ಪ್ರದೇಶದಲ್ಲಿರುವ ಸೇತುವೆ ಬಳಿಯಿಂದ 100 ಅಡಿ ದೂರದ ನದಿಯ ದಡದಲ್ಲೇ ಇರುವ ಅರಳಿ ಗಿಡದ ಬುಡದಲ್ಲಿ ಶತಮಾನಗಳ ಹಿಂದಿನಿಂದ ಇರುವ ಡೋಣಿ ಕರೆವ್ವಾ ದೇವಿ ಗುಡಿ ಪ್ರವಾಹದಲ್ಲಿ 22 ಅಡಿಗೂ ಅಧಿಕ ಆಳದಲ್ಲಿ ಮುಳುಗಿದ್ದರೂ ಕುದಲೆಳೆಯಷ್ಟು ಧಕ್ಕೆಯಾಗದೆ, ಗುಡಿಯ ಮುಂದೆ ಸಣ್ಣ ಕಟ್ಟಿಗೆಗೆ ಕಟ್ಟಲಾಗಿರುವ ಹತ್ತಾರು ಗಂಟೆಗಳು, ನೂರಾರು ಬಳೆಗಳು, ಗಿಡದ ಸಣ್ಣ ಕೊಂಬೆಗೆ ತೂಗು ಹಾಕಿರುವ ದೇವಿಯ ಮಾಂಗಲ್ಯ ಸರ, ದೇವಿಯ ತಲೆಯ ಮೇಲಿನ ಕೀರಿಟ, ಗುಡಿಯ ಒಳಗಿನ ಹಣತೆ, ಗಂಟೆ ಇನ್ನಿತರ ವಸ್ತುಗಳು ನೀರಿನ ರಭಸಕ್ಕೆ ಕೊಚ್ಚಿ ಹೊಗದೆ ಇದ್ದಲ್ಲೇ ಇರುವುದು ಅಚ್ಚರಿ ಮೂಡಿಸಿದೆ.
ಜಲಪ್ರವಾಹವನ್ನೇ ಮೆಟ್ಟಿ ನಿಂತ ಈ ಗುಡಿಯಲ್ಲಿ ದೇವಿಗೆ ಪ್ರತಿ ಮಂಗಳವಾರ ಹಾಗೂ ಶುಕ್ರವಾರ ಪೂಜೆ ಸಲ್ಲಿಸಲಾಗುತ್ತದೆ. ಹಳಿಯಾಳ ಮಾತ್ರವಲ್ಲದೇ ಧಾರವಾಡ ಭಾಗದಿಂದಲೂ ಭಕ್ತರು ಬಂದು ಪೂಜೆ ಸಲ್ಲಿಸುತ್ತಾರೆಂದು ಗ್ರಾಮಸ್ಥ ಸುರೇಶ ಮಳಿಕ ಹೇಳುತ್ತಾರೆ.
ಉದಯವಾಣಿಯೊಂದಿಗೆ ಮಾತನಾಡಿದ ಕೆಸರೊಳ್ಳಿ ಗ್ರಾಪಂ ಸದಸ್ಯ ಡೊಂಗ್ರು ಕೆಸರೇಕರ, 1961-62ರಲ್ಲಿ ಈ ರೀತಿ ಪ್ರವಾಹ ಬಂದಿದ್ದ ಸಮಯದಲ್ಲೂ ಈ ದೇವಿ ಗುಡಿಗೆ ಹಾನಿಯಾಗಿದ್ದಿಲ್ಲ ಎಂದು ತಮ್ಮ ಹಿರಿಯರು ಹೇಳಿದ್ದು ನೆನಪಿದೆ. ಈಗ ತಾವೇ ಕಣ್ಣಾರೆ ಪ್ರವಾಹ ಕಂಡಿರುವುದು ದೇವಿಯ ಗುಡಿಗೆ ಸಣ್ಣ ಹಾನಿಯಾಗದೆ ಇರುವುದು ದೇವಿಯ ಪವಾಡವೇ ಆಗಿದೆ ಎನ್ನುತ್ತಾರೆ.
ದೇವಿ ಭಕ್ತರಾದ ಹಳಿಯಾಳ ಪುರಸಭೆ ಸದಸ್ಯ ಸಂತೋಷ ಘಟಕಾಂಬಳೆ ಹಾಗೂ ಸಮಾಜ ಸೇವಕ ಮಂಜುನಾಥ ಪಂಡಿತ ಮಾತನಾಡಿ ಜಲಪ್ರವಾಹಕ್ಕೆ ದೇವಿ ಗುಡಿಯ ಸುತ್ತಮುತ್ತಲ ಪ್ರದೇಶದಲ್ಲಿ ಅಸಂಖ್ಯಾತ ಹಾನಿ ಆಗಿದೆ. ಆದರೆ ದೇವಿಗುಡಿ ಬಳಿ ಏನೂ ಆಗದೆ ಇರುವುದು ದೈವ ಭಕ್ತರಲ್ಲಿ ದೇವರಲ್ಲಿ ನಂಬಿಕೆ ಇನ್ನೂ ಇಮ್ಮಡಿಯಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
•ಯೋಗರಾಜ ಎಸ್.ಕೆ.