Advertisement

ರಕ್ತ ಹರಿದರೂ ಚಿಂತೆಯಿಲ್ಲ, ಜಮೀನು ಬಿಟ್ಟು ಕೊಡಲ್ಲ: ಶಾಸಕ ಸಿದ್ದು ಸವದಿ

03:36 PM Oct 30, 2024 | Team Udayavani |

ಉದಯವಾಣಿ ಸಮಾಚಾರ
ರಬಕವಿ-ಬನಹಟ್ಟಿ: ಕಾಂಗ್ರೆಸ್‌ ಸರ್ಕಾರ ತಲೆ ತಲಾಂತರದಿಂದ ಉಳುಮೆ ಮಾಡುತ್ತಿದ್ದ ರೈತರ ಜಮೀನು ವಶಪಡಿಸಿಕೊಳ್ಳಲು ಮುಂದಾದರೆ ರಕ್ತ ಹರಿದರೂ ಚಿಂತೆಯಿಲ್ಲ ರೈತರ ಜಮೀನು ಬಿಟ್ಟು ಕೊಡಲ್ಲ ಎಂದು ಶಾಸಕ ಸಿದ್ದು ಸವದಿ ಹೇಳಿದರು.

Advertisement

ನಗರದ ನಿರೀಕ್ಷಣಾ ಮಂದಿರದಲ್ಲಿ ನಡೆದ ರೈತರ ಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರ, ಸಚಿವರು, ಅಧಿಕಾರಿಗಳು ಯಾವುದೆ ರೈತರಿಗೆ ನೋಟಿಸ್‌ ನೀಡಿಲ್ಲ ಎಂದು ಹೇಳುತ್ತಿದ್ದರೂ ತೇರದಾಳ 420 ಎಕರೆಯ 110 ರೈತರಿಗೆ ನೋಟಿಸ್‌ ನೀಡಿದೆ. ಕಾಂಗ್ರೆಸ್‌ ಸರ್ಕಾರ ಮತ ರಾಜಕಾರಣ ಮಾಡುತ್ತಿದೆ.

ರೈತರಿಗೆ ದ್ರೋಹ ಬಗೆಯುತ್ತಿದೆ. ತೇರದಾಳದ ನೂರಾರು ರೈತರು 2018 ರಿಂದ ತಮ್ಮ ಜಮೀನು ಉಳಿಸಿಕೊಳ್ಳುವುದಕ್ಕೆ ಬೆಂಗಳೂರಿನ ವಕ್ಫ್ ಬೋರ್ಡ್‌ಗೆ ಅಲೆಯುತ್ತಿವೆ. ವಕ್ಫ್ ಬೋರ್ಡ್‌ ಮತ್ತು ಕಾನೂನು ರದ್ದು ಮಾಡಬೇಕು. ಸರ್ಕಾರ ರೈತರ ಜಮೀನುಗಳಿಗೆ ಬೇಲಿ ಹಾಕಿ ದಿಗ್ಬಂಧನ ಹಾಕುತ್ತಿರುವುದು ಖೇದಕರ ಸಂಗತಿ ಎಂದರು.

ಮತಗಳ ಓಲೈಕೆ: ದೇಶದಲ್ಲಿ 1990ರ ಅವಧಿಯಲ್ಲಿ 1.06 ಲಕ್ಷ ಎಕರೆಯಷ್ಟು ಹೊಂದಿದ್ದ ಭೂಮಿ ಇದೀಗ 2024 ಕ್ಕೆ 9.06 ಲಕ್ಷ
ಎಕರೆಯಷ್ಟು ಭೂಮಿ ಹೊಂದಿದೆ. ಕೇವಲ ಮುಸ್ಲಿಂ ಸಮುದಾಯದ ಮತಗಳ ಓಲೈಕೆಗೆ ಕಾಂಗ್ರೆಸ್‌ ನೀಚ ಕೆಲಸಕ್ಕಿಳಿದು ರೈತರ ಜಮೀನು ಕಸಿದುಕೊಳ್ಳುವ ಸ್ವಾರ್ಥ ರಾಜಕಾರಣವನ್ನು ವಿರೋಧಿಸುತ್ತೇನೆಂದು ಸವದಿ ಕಿಡಿಕಾರಿದರು.

ತೇರದಾಳದ ರೈತ ಭೂಪಾಲ ಮಾನಗಾವಿ ಮಾತನಾಡಿ, 2018ರಿಂದ ಬೆಂಗಳೂರಿಗೆ ಹೋಗಿ ಬರುತ್ತಿದ್ದೇವೆ. ನಮಗೆ ವಕ್ಫ್ ಬೋರ್ಡ್‌ನಿಂದ ನೋಟಿಸ್‌ ಬಂದಿವೆ. ನಾವು ತಲೆ ತಲಾಂತರದಿಂದ ಉಳುಮೆ ಮಾಡುತ್ತಿದ್ದೇವೆ ಎಂದರು. ಮತ್ತೊರ್ವ ರೈತ ಹುಸೇನ್‌ ಇನಾಮದಾರ ಮಾತನಾಡಿ, ನಮ್ಮದು 120 ಎಕರೆ ಜಮೀನು , ಇದ್ದು 64 ಜನ ಸಹೋದರರು ಇದ್ದೇವೆ. ನಮಗೂ ಕೂಡಾ ನೋಟಿಸ್‌ ಬಂದಿವೆ ಎಂದರು.

Advertisement

ಶ್ರೀಶೈಲ ಬೀಳಗಿ, ಧರೆಪ್ಪ ಉಳ್ಳಾಗಡ್ಡಿ, ಸುರೇಶ ಅಕ್ಕಿವಾಟ, ಗಂಗಪ್ಪ ಉಳ್ಳಾಗಡ್ಡಿ, ಪರಶುರಾಮ ಗಾಡಿವಡ್ಡರ, ನಿಂಗಪ್ಪ ಜಕ್ಕನ್ನವರ, ನೇಮಣ್ಣ ಶೇಡಬಾಳ, ಪ್ರಭು ಬಡಿಗೇರ ಸೇರಿದಂತೆ ತೇರದಾಳದ ಅನೇಕ ರೈತರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next